Advertisement

ಟಿಕೆಟ್‌ ಸಮಸ್ಯೆ; ಪ್ರಯಾಣಿಕರಿಂದ ನಿರಂತರ ದೂರು

11:10 PM Jun 06, 2019 | Team Udayavani |

ಮಹಾನಗರ: ಬಸ್‌ಗಳಲ್ಲಿ ಟಿಕೆಟ್‌ ನೀಡದಿರುವ ಬಗ್ಗೆ ಪ್ರಯಾಣಿ ಕರಿಂದ ನಿರಂತರ ದೂರುಗಳು ಬರುತ್ತಿದ್ದು ಬಸ್‌ ಮಾಲಕರು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಮೂರು ದಿನಗಳೊಳಗೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚಿಸಿರುವ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರ ಉಪ್ಪಾರ ಅವರು ಇದರಲ್ಲಿ ವಿಫಲವಾದರೆ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ವಿಶೇಷ ತಪಾಸಣ ದಳವನ್ನು ನಿಯೋಜಿಸಲು ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Advertisement

ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಜರಗಿದ ಗುರು ವಾರ ಜರಗಿದ ಜನಸ್ಪಂದನ ಸಭೆಯಲ್ಲಿ ಬಸ್‌ಗಳಲ್ಲಿ ಟಿಕೆಟು ನೀಡದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಕ್ತವಾದ ದೂರುಗಳಿಗೆ ಉತ್ತರಿಸಿದ ಅವರು ಪ್ರಯಾಣಿಕರಿಗೆ ಕಡ್ಡಾಯವಾಗಿ ಟಿಕೆಟ್‌ ನೀಡುವಂತೆ ಈಗಾಗಲೇ ಎಲ್ಲ ಬಸ್‌ಮಾಲಕರಿಗೆ ಸೂಚಿಸಲಾಗಿದೆ. ಆದರೂ ಕೆಲವು ಬಸ್‌ಗಳಲ್ಲಿ ಇದು ಪಾಲನೆಯಾಗದಿರುವ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿವೆ. ಇಂತಹ ಪ್ರಕರಣಗಳ ವಿರುದ್ಧ ಭಾರಿ ಮೊತ್ತದ ದಂಡ ವಿಧಿಸಲು ಅವಕಾಶವಿದೆ. ಅದುದರಿಂದ ಬಸ್‌ ಮಾಲಕರು ಸೂಕ್ತ ನಿಗಾವಹಿಸಬೇಕು. ಲೋಪ ಸರಿಪಡಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗುವುದು. ಇದು ಪಾಲನೆ ಯಾಗದಿದ್ದರೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸಾರಿಗೆ ಆಯುಕ್ತರಿಗೆ ಪತ್ರ ಬರೆದು ಜಿಲ್ಲೆಗೆ ವಿಶೇಷ ತಪಾಸಣೆ ದಳವನ್ನು ನಿಯೋಜಿಸುವಂತೆ ಕೋರಲಾಗುವುದು ಎಂದರು.

ದಟ್ಟ ಕಪ್ಪು ಹೊಗೆ
ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ದಟ್ಟ ಕಪ್ಪು ಹೊಗೆ ಉಗುಳುತ್ತಿದ್ದು ಇದರಿಂದ ನಗರದಲ್ಲಿ ವಾಹನ ಸವಾರರು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿದೆ. ಅದರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿ.ಕೆ. ಭಟ್‌ ಆಗ್ರಹಿಸಿದರು. ಕೆಲವು ಬಸ್‌ಗಳು, ಕಾರುಗಳು ಹೊರರಾಜ್ಯಗಳ ನೊಂದಣಿ ಮಾಡಿಕೊಂಡು ನಗರದಲ್ಲಿ ಓಡಾಡುತ್ತಿದ್ದು, ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದರು. ಇಂತಹ ಬಸ್‌ಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ಈಗಾಗಲೇ ಕ್ರಮಕೈಗೊಂಡಿದ್ದು, 2 ಬಸ್‌ಗಳಿಂದ 6 ಲಕ್ಷ ರೂ. ತೆರಿಗೆ ವಸೂಲಿ ಮಾಡಲಾಗಿದೆ ಎಂದು ಎಆರ್‌ಟಿಒ ಜಾನ್‌ ಮಿಸ್ಕಿತ್‌ ತಿಳಿಸಿದರು.

ಪರವಾನಿಗೆ ಇದ್ದರೂ ಬಸ್‌ಗಳನ್ನು ಓಡಿಸದ , ನಿಗದಿತ ಪ್ರದೇಶಗಳಿಗೆ ಸಂಚರಿಸದೆ ಸಂಚಾರ ಮೊಟಕುಗೊಳಿಸುವ ಬಸ್‌ಗಳ ವಿರುದ್ದವೂ ಕ್ರಮ ವಹಿಸಬೇಕು ಎಂದು ಜಿ.ಕೆ. ಭಟ್‌ ಆಗ್ರಹಿಸಿದರು. ಕೆಲವು ಕಡೆ ರಿಕ್ಷಾಗಳಲ್ಲಿ ಮೀಟರ್‌ ದರಗಿಂತ ಹೆಚ್ಚು ಬಾಡಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಅರ್ಥರ್‌ ಡಿ’ಸೋಜಾ ದೂರು ನೀಡಿದರು.

ಪ್ರಯಾಣಿಕರಿಗೆ ಸಮಸ್ಯೆ
ನಂತೂರು ಕಡೆಯಿಂದ ಬರುವ ಕೆಲವು ಸಿಟಿಬಸ್‌ಗಳು ಮಲ್ಲಿಕಟ್ಟೆಗೆ ಹೋಗದೆ ನೇರವಾಗಿ ಸಾಗುತ್ತಿದ್ದು ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಯಾಗುತ್ತಿದೆ.ಪೊಲೀಸರು ಕರ್ಕಶ ಹಾರ್ನ್ ಗಳ ವಿರುದ್ಧ ಕ್ರಮ ಕೈಗೊಳ್ಳುವಾಗ ಅದರ ಮೋಟಾರ್‌ ಯೂನಿಟ್‌ನ್ನು ಕೂಡ ತೆಗೆಯಬೇಕು ಎಂದು ಜೆರಾಲ್ಡ್‌ ಟವರ್‌ ಆಗ್ರಹಿಸಿದರು. ಬಸ್‌ಗಳು ನಗರದಲ್ಲಿ ಬಸ್‌ನಿಲ್ದಾಣಗಳಲ್ಲಿ ಹೆಚ್ಚು ಸಮಯ ನಿಲ್ಲುವುದರಿಂದ ಸಂಚಾರತಡೆ ಉಂಟಾ ಗುತ್ತಿದೆ ಎಂದು ನಾಗೇಶ್‌ ಶೆಟ್ಟಿ ಹೇಳಿದರು.

Advertisement

ಸಭೆಯಲ್ಲಿ ವ್ಯಕ್ತಪಡಿಸಿರುವ ಕೆಲವು ದೂರುಗಳು ಪೊಲೀಸ್‌ ಇಲಾಖೆಯ ಕಾರ್ಯವ್ಯಾಪ್ತಿಗೆ ಬರುತ್ತಿದ್ದು ಅವರ ಗಮನಕ್ಕೆ ತರಲಾಗುವುದು. ಆರ್‌ಟಿಒ ವ್ಯಾಪ್ತಿಗೆ ಬರುವ ದೂರುಗಳನ್ನು ಇಲಾಖೆಯ ಅಧಿಕಾರಿಗಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಆರ್‌ಟಿಒ ಜಾನ್‌ ಮಿಸ್ಕಿತ್‌ ತಿಳಿಸಿದರು.

ದೂರುಗಳಿದ್ದರೆ ಮೆಸೇಜ್‌ ಮಾಡಿ
ಸಾರ್ವಜನಿಕರು ಬಸ್‌ಗಳು, ಆಟೋರಿಕ್ಷಾಗಳಿಗೆ ಸಂಬಂಧಪಟ್ಟಂತೆ ಯಾವುದೇ ದೂರುಗಳಿದ್ದರೆ ದೂರವಾಣಿ ನಂಬರ್‌ 9449864019ಗೆ ಮೆಸೇಜ್‌ ಮಾಡಬಹುದು. ಇದರಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸಲು ಅವಕಾಶವಿರುವುದಿಲ್ಲ. ಮೆಸೇಜ್‌ನಲ್ಲಿ ಪ್ರಯಾಣಿಕರಿಗೆ ಆಗಿರುವ ಸಮಸ್ಯೆ, ಸಂಬಂಧಪಟ್ಟ ವಾಹನದ ವಿವರ, ಸಮಯವನ್ನು ಸ್ಪಷ್ಟವಾಗಿ ಉಲ್ಲೇಖೀಸಬೇಕು. ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರಗಿಸುತ್ತಾರೆ ಎಂದು ಎಆರ್‌ಟಿಒ ಜಾನ್‌ಮಿಸ್ಕಿತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next