ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಇಕ್ಕೆಲದಲ್ಲಿ ಹಬ್ಬಿಕೊಂಡಿರುವ ಬ್ಯಾಟರಾಯನಪುರ ಕ್ಷೇತ್ರ ನಗರ ಮತ್ತು ಹಳ್ಳಿಯ ಛಾಯೆಯನ್ನು ಹೊಂದಿದೆ. 2008ರಿಂದಲೂ ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಅವರು ಈ ಕ್ಷೇತ್ರವನ್ನು ಸತತವಾಗಿ 3 ಸಲ ಪ್ರತಿನಿಧಿಸಿದ್ದಾರೆ. ಹ್ಯಾಟ್ರಿಕ್ ವೀರನಾಗಿರುವ ಗೌಡರ ಬೇಟೆಯಾಡಲು ಬಿಜೆಪಿ ಪ್ರತಿ ಸಲವೂ ಹೋರಾಟ ನಡೆಸಿದರೂ ಒಮ್ಮೆಯೂ ಯಶಸ್ವಿಯಾಗಿಲ್ಲ. ಆದರೆ, ಈ ಬಾರಿ ಗೆಲ್ಲುವ ಅವಕಾಶವಿದೆಯೆಂದು ಅಂದಾಜಿಸಿರುವ ಬಿಜೆಪಿ ಈ ಕ್ಷೇತ್ರವನ್ನು ಗೆದ್ದೆ ಗೆಲ್ಲುವ ಪಣ ತೊಟ್ಟಂತಿದೆ.
ತಂದೆ ಸಿ.ಬೈರೇಗೌಡ ಪ್ರತಿನಿಧಿಸುತ್ತಿದ್ದ ಕೋಲಾರದ ವೇಮಗಲ್ ಕ್ಷೇತ್ರವನ್ನು ಅವರ ನಿಧನದ ನಂತರ 2 ಬಾರಿ ಪ್ರತಿನಿಧಿಸಿದ್ದ ಕೃಷ್ಣಬೈರೇಗೌಡ ಕ್ಷೇತ್ರ ಪುನರ್ ವಿಂಗಡಣೆಯ (2008) ಬಳಿಕ ಬ್ಯಾಟರಾಯನಪುರವನ್ನು ತಮ್ಮ ಕರ್ಮಸ್ಥಳವನ್ನಾಗಿ ಆಯ್ದುಕೊಂಡು ಈ ಕ್ಷೇತ್ರದಲ್ಲಿ ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಇದೀಗ 4ನೇ ಬಾರಿ ಗೆಲ್ಲುವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ತ್ರಿಮೂರ್ತಿಗಳ ನಡುವೆ ಪೈಪೋಟಿ: ಆದರೆ ಈ ಕ್ಷೇತ್ರವನ್ನು ಗೆಲ್ಲಲೇ ಬೇಕೆಂದು ಸಂಕಲ್ಪ ಮಾಡಿರುವ ಬಿಜೆಪಿಗೆ ತನ್ನ ಪಾಳಯದಲ್ಲಿರುವ ಹಲವು ಟಿಕೆಟ್ ಆಕಾಂಕ್ಷಿಗಳೇ ಮಗ್ಗುಲ ಮುಳ್ಳಾಗುವ ಆತಂಕವಿದೆ. ಕಂದಾಯ ಸಚಿವ ಆರ್. ಅಶೋಕ್ ಸೋದರ ಸಂಬಂಧಿ ಎ.ರವಿ ಸತತ 3 ಬಾರಿ ಇಲ್ಲಿಂದ ಸ್ಪರ್ಧಿಸಿ ಕೃಷ್ಣಭೈರೇಗೌಡರ ಎದುರು ಸೋತಿದ್ದಾರೆ. ಕಳೆದ ಬಾರಿ ಕೇವಲ 5,671 ಮತಗಳ ಅಂತರದಿಂದ ಸೋಲು ಕಂಡಿದ್ದ ರವಿ ಅವರಿಗೆ ಈ ಬಾರಿ ಅನುಕಂಪ ಕೈಹಿಡಿಯಬಹುದು ಎಂಬುದು ಬಿಜೆಪಿಯ ಒಂದು ಲೆಕ್ಕಾಚಾರ. ಆದರೆ ಇನ್ನೊಂದೆಡೆ ರವಿ ಅವರಿಗೆ ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದ್ದು, ಹೊಸ ಅಭ್ಯರ್ಥಿಗೆ ಅವಕಾಶ ಕಲ್ಪಿಸಬೇಕೆಂದು ಬಿಬಿಎಂಪಿ ಕಾರ್ಪೋರೆಟರ್ ಆಗಿದ್ದ ಕೆ.ಎ. ಮುನೀಂದ್ರಕುಮಾರ್, ತಿಮ್ಮೇಶ್‌ಗೌಡ, ಎನ್. ಚಕ್ರಪಾಣಿ ಟಿಕೆಟ್ ಗಾಗಿ ಲಾಬಿ ಮಾಡುತ್ತಿದ್ದಾರೆ. ಆದರೆ ಈ ಬಾರಿ ನಮ್ಮಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಪಕ್ಷ ಗೆಲ್ಲಿಸೋಣ ಎಂಬ ಅಭಿಪ್ರಾಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಈ ಎಲ್ಲ ಆಕಾಂಕ್ಷಿಗಳು ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದರೆ ಒಳ ಏಟು ನೀಡದೆ ಇರುತ್ತಾರೆಯೇ ಎಂಬುದು ಸಹಜ ಕುತೂಹಲ. ಒಂದು ವೇಳೆ ಬಿಜೆಪಿ ಮುಖಂಡರ ಒಗ್ಗಟ್ಟಿನ ಜಪ ಯಶ ಕಂಡರೆ ಕೃಷ್ಣಬೈರೇಗೌಡರಿಗೆ ಇಲ್ಲಿ ಬಿಜೆಪಿ ಸವಾಲೊಡ್ಡುವುದು ನಿಶ್ಚಿತ.
ಜೆಡಿಎಸ್‌ಗೆ ತುಸು ನೆಲೆ: ಇನ್ನು ಜೆಡಿಎಸ್ ಈಗಾಗಲೇ ವೇಣುಗೋಪಾಲ್‌ಗೆ ಟಿಕೆಟ್ ಘೋಷಿಸಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಟಿ.ಜಿ. ಚಂದ್ರಣ್ಣ, 22,490 ಮತಗಳನ್ನು ಪಡೆದಿದ್ದರು. 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹನುಮಂತೇಗೌಡ 41,360 ಮತ ಪಡೆದಿದ್ದಾರೆ. ಕಳೆದೆರಡು ಚುನಾವಣೆಗಳನ್ನು ಗಮನಿಸಿದರೆ ಇಲ್ಲಿ ಜೆಡಿಎಸ್‌ಗೆ ತುಸು ನೆಲೆ ಇರುವುದು ಸ್ಪಷ್ಟ. ಕಳೆದ ಬಾರಿ ಇಲ್ಲಿ ತುರುಸಿನ ಪೈಪೋಟಿ ಇದ್ದದ್ದನ್ನು ಗಮನಿಸಿದರೆ, ವೇಣುಗೋಪಾಲ್ ಸಾಂಪ್ರಾದಾಯಿಕ ಜೆಡಿಎಸ್ ಮತಗಳ ಜೊತೆಗೆ ಅನ್ಯ ಮತಗಳ ಬುಟ್ಟಿಗೆ ಕೈಹಾಕಲು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದರ ಮೇಲೆ ಈ ಕ್ಷೇತ್ರದ ಹಣೆಬರಹ ನಿರ್ಧಾರವಾಗಲಿದೆ.
ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಪರಿಶಿಷ್ಟ ಸಮುದಾಯದ ನಿರ್ಣಾಯಕ ಮತಗಳಿವೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷಿಕ ಮತದಾರರಿದ್ದಾರೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಮಧ್ಯೆ ಕೃಷ್ಣಬೈರೇಗೌಡ ಅವರು ಕೆರೆಗಳ ಕಾಯಕಲ್ಪ ಮತ್ತು ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆಗೆ ಹೆಚ್ಚು ಒತ್ತು ನೀಡಿದ್ದಾರೆ ಎಂಬುದು ಗಮನಾರ್ಹ. ಜಕ್ಕೂರು ಕೆರೆ, ದೊಡ್ಡ ಬೊಮ್ಮಸಂದ್ರ ಕೆರೆ, ಕಟ್ಟಿಗೇನಹಳ್ಳಿ ಕೆರೆಗಳಿಗೆ ಜೀವ ತುಂಬಲು ಪ್ರಯತ್ನ ನಡೆಸಿದ್ದಾರೆ.
ಬ್ಯಾಟರಾಯನಪುರ: 2018ರಲ್ಲಿ ಏನಾಗಿತ್ತು?: 2018ರ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡ 1,14,964 (ಶೇ. 45.31) ಮತ ಪಡೆದು ಬಿಜೆಪಿಯ ಎ. ರವಿ ಅವರನ್ನು 5,671 (1,09,293) ಮತಗಳಿಂದ ಮಣಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಟಿ.ಜಿ.ಚಂದ್ರಣ್ಣ ಅವರು 22,490 ಮತ ಪಡೆದಿದ್ದರು.
ವಾರ್ಡ್‌ಗಳೆಷ್ಟು? : ಜಕ್ಕೂರು, ಥಣೀಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮ ಸಂದ್ರ, ಕುವೆಂಪು ನಗರ.
– ರಾಕೇಶ್ ಎನ್.ಎಸ್.