Advertisement

ಕಾಣಿಯೂರು ರೈಲು ನಿಲ್ದಾಣ : ಕೊನೆಗೂ ಟಿಕೆಟ್‌ ವಿತರಣೆಗೆ ಚಾಲನೆ

02:05 AM Jun 05, 2018 | Karthik A |

ವಿಶೇಷ ವರದಿ – ಕಾಣಿಯೂರು: ಕಬಕ- ಪುತ್ತೂರು ರೈಲ್ವೆ ನಿಲ್ದಾಣದಿಂದ ನೆಟ್ಟಣ ಮಾರ್ಗವಾಗಿ 19 ಕಿ.ಮೀ. ದೂರದಲ್ಲಿರುವ ಕಾಣಿಯೂರು ರೈಲು ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕೊನೆಗೂ ಟಿಕೆಟ್‌ ವಿತರಣೆಗೆ ಚಾಲನೆ ದೊರಕಿದೆ.ಕಳೆದ ಎರಡು ವರ್ಷಗಳಿಂದ ಟಿಕೆಟ್‌ ವಿತರಕರಿಲ್ಲದೆ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಕಾರಣವಾಗಿತ್ತು. ಕಾಣಿಯೂರು ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯರಾದ ಅನಂತರಾಮ ಉಪಾಧ್ಯಾಯ ಹಾಗೂ ಅನಂತರದ ದಿನಗಳಲ್ಲಿ ವಸಂತ ಅನಿಲ ಅವರು ರೈಲು ಇಲಾಖೆಯಿಂದ ಟಿಕೆಟ್‌ ಹಂಚಿಕೆಯ ಟೆಂಡರ್‌ ಪಡೆದು ರೈಲು ಕೌಂಟರ್‌ ನಲ್ಲಿ ರೈಲು ಪ್ರಯಾಣಿಕರಿಗೆ ಟಿಕೆಟ್‌ ನೀಡುತ್ತಿದ್ದರು. ಆದರೆ ಅವರ ಟೆಂಡರ್‌ ಅವಧಿ ಮುಗಿದ ಬಳಿಕ ಅಂದರೆ ಕಳೆದ 2 ವರ್ಷಗಳಿಂದ ಟಿಕೆಟ್‌ ಕೌಂಟರ್‌ನಲ್ಲಿ ರೈಲು ಪ್ರಯಾಣಿಕರಿಗೆ ಟಿಕೆಟ್‌ ನೀಡುವವರು ಇರಲಿಲ್ಲ. ಇಲಾಖೆ ಟೆಂಡರ್‌ ಕೂಡಾ ಕರೆದಿರಲಿಲ್ಲ. ಹಾಗಾಗಿ ಟೆಂಡರ್‌ ಕರೆಯುವ ವರೆಗೆ ಇಲ್ಲಿಂದ ಟಿಕೆಟ್‌ ರಹಿತ ಪ್ರಯಾಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಈಗ ಗುತ್ತಿಗೆ ಆಧಾರದಲ್ಲಿ ಟಿಕೆಟ್‌ ವಿತರಕರನ್ನು ರೈಲ್ವೇ ಇಲಾಖೆ ನೇಮಿಸುವ ಮೂಲಕ ಮತ್ತೆ ಟಿಕೆಟ್‌ ಕೌಂಟರ್‌ ತೆರೆದುಕೊಂಡಿದೆ.

Advertisement

ಉಚಿತ ಪ್ರಯಾಣವಿತ್ತು
ಕಾಣಿಯೂರಿನಿಂದ ನೆಟ್ಟಣಕ್ಕೆ 10 ರೂ., ಪುತ್ತೂರಿಗೆ 10 ರೂ., ಕಾಣಿಯೂರಿನಿಂದ ಮಂಗಳೂರಿಗೆ ರೈಲು ದರ 20 ರೂ., ನಿಗದಿ ಮಾಡಲಾಗಿತ್ತು. ಕಾಣಿಯೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುವುದಾದರೆ 70 ರೂ. ವ್ಯಯ ಮಾಡಬೇಕಾಗಿದೆ. ಆದರಿಂದ ರೈಲ್ವೆಯಲ್ಲಿ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿತ್ತು ಆದರೆ ಟಿಕೆಟ್‌ ನೀಡುವವರೇ ಇಲ್ಲದಿರುವದರಿಂದ ಆ ಹಣವೂ ಉಳಿತಾಯವಾಗುತ್ತಿತ್ತು ಪ್ರಯಾಣಿಕರಿಗೆ.

ಬೆಂಗಳೂರು ರೈಲಿಗೆ ನಿಲುಗಡೆಯಿಲ್ಲ
ಕಾಣಿಯೂರು ರೈಲು ನಿಲ್ದಾಣವು ಪೇಟೆಯ ಹೃದಯ ಭಾಗದಲ್ಲಿದ್ದರೂ, ಈ ನಿಲ್ದಾಣವು ಸ್ಟೇಶನ್‌ ಮಾಸ್ಟರ್‌, ಸಿಗ್ನಲ್‌ ವ್ಯವಸ್ಥೆ ಇರುವ ಪೂರ್ಣ ಪ್ರಮಾಣದ ರೈಲು ನಿಲ್ದಾಣ ಅಲ್ಲ. ಮೀಟರ್‌ ಗೇಜ್‌ ಸಂದರ್ಭದಲ್ಲಿಯೇ ಈ ನಿಲ್ದಾಣವು ಟಿಕೆಟ್‌ ವಿತರಣೆಯ ಗುತ್ತಿಗೆದಾರ ವ್ಯವಸ್ಥೆಯನ್ನು ಹೊಂದಿದೆ. ಸುಮಾರು 20 ವರ್ಷಗಳ ಹಿಂದೆ ಮಂಗಳೂರು ಬೆಂಗಳೂರು ಮೀಟರ್‌ ಗೇಜ್‌ ರೈಲು ಇದ್ದ ಸಂದರ್ಭ ಬೆಂಗಳೂರು ರೈಲಿಗೆ ಕಾಣಿಯೂರಿನಲ್ಲಿ ನಿಲುಗಡೆಯಿತ್ತು. ಅದೆಷ್ಟೋ ಜನರು ಕಾಣಿಯೂರಿನಿಂದ ಹಾಸನ, ಬೆಂಗಳೂರಿಗೆ ರೈಲಿನ ಮೂಲಕ ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಮಂಗಳೂರು -ಬೆಂಗಳೂರು ರೈಲು ಬ್ರಾಡ್‌ ಗೇಜ್‌ ಗೆ ಪರಿವರ್ತನೆಯಾದ ಬಳಿಕ ಬೆಂಗಳೂರಿಗೆ ಹೋಗುವ ರೈಲು ಕಾಣಿಯೂರಿನಲ್ಲಿ ನಿಲುಗಡೆಯಾಗುತ್ತಿಲ್ಲ.

ಲೋಕಲ್‌ ರೈಲು ಬೆಳಿಗ್ಗೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಮತ್ತು ಸಂಜೆ ಮಂಗಳೂರಿಂದ ಸುಬ್ರಹ್ಮಣ್ಯಕ್ಕೆ ಓಡಾಟ ನಡೆಸಿದರೆ ಈ ಭಾಗದ ಜನರು, ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ತಾಲೂಕು ಕೇಂದ್ರ ಪುತ್ತೂರು ಹಾಗೂ ಜಿಲ್ಲಾ ಕೇಂದ್ರ ಮಂಗಳೂರು ಸಂಪರ್ಕಿಸಲು ಅನುಕೂಲಕರವಾಗಿ ಇರುತ್ತಿತ್ತು. ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೇ ಸುಬ್ರಹ್ಮಣ್ಯಕ್ಕೆ ಆಗಮಿಸುವವರಿಗೂ ಸುಲಭ ಮಾರ್ಗವಾಗಿ ಪ್ರಯೋಜನಕಾರಿಯಾಗಿತ್ತು. ಪ್ರಸ್ತುತ ಮಂಗಳೂರು – ನೆಟ್ಟಣ ರೈಲು 11.40ಕ್ಕೆ ಕಾಣಿಯೂರಿಗೆ ಹಾಗೂ ನೆಟ್ಟಣದಿಂದ ಮಂಗಳೂರಿಗೆ ಸಾಗುವ ರೈಲು 1:55 ಕ್ಕೆ ಕಾಣಿಯೂರಿಗೆ ತಲುಪುತ್ತಿದೆ.ರೈಲು ಓಡಾಟ ಮಧ್ಯಾಹ್ನದ ಸಮಯವಾಗಿರುವುದರಿಂದ ಇಲ್ಲಿನವರು ಬಸ್‌ ಅಥವಾ ಇನ್ನಿತರ ವಾಹನವನ್ನೇ ಅವಲಂಬಿಸಿ ಸಂಚರಿಸುವುದು ಅನಿವಾರ್ಯ. ಪ್ರತಿನಿತ್ಯ ಎರಡು ಲೋಕಲ್‌ ರೈಲು ಈ ಮಾರ್ಗವಾಗಿ ಸಂಚರಿಸಿದಲ್ಲಿ ಇಲಾಖೆಗೆ ಹೆಚ್ಚಿನ ಆದಾಯವೂ, ಪ್ರಯಾಣಿಕರ ಸಂಚಾರಕ್ಕೆ ಪೂರಕವೂ ಆಗುತ್ತಿತ್ತು. ಈ ಕುರಿತು ಇಲಾಖೆ ಗಮನಹರಿಸುವುದು ಅಗತ್ಯ.

ಆದಾಯ ವಿರಳ
ಕಾಣಿಯೂರು ರೈಲು ನಿಲ್ದಾಣದಿಂದ ಪುತ್ತೂರು, ಬಂಟ್ವಾಳ, ಮಂಗಳೂರಿಗೆ ತೆರಳುವವರ ಸಂಖ್ಯೆ ಕಡಿಮೆ ಇದೆ. ಈ ವ್ಯವಸ್ಥೆಯಿಂದ ಟಿಕೆಟ್‌ ವಿತರಣೆಯ ಗುತ್ತಿಗೆ ಪಡೆದವರಿಗೂ ಹೆಚ್ಚಿನ ಆದಾಯ ಲಭ್ಯವಾಗುವ ಸಾಧ್ಯತೆ ವಿರಳ. ಇಲ್ಲಿನ ಟಿಕೆಟ್‌ ವಿತರಣೆ ರದ್ದಾದರೆ ರೈಲು ನಿಲ್ದಾಣವೇ ರದ್ದಾಗುವ ಸಾಧ್ಯತೆಗಳು ಹೆಚ್ಚಿವೆ. ಈ ರೀತಿಯ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಗುತ್ತಿಗೆ ಆಧಾರದಲ್ಲಿ ಟಿಕೆಟ್‌ ವಿತರಕರನ್ನು ನೇಮಿಸಲಾಗಿದೆ. 
– ಹೆಸರು ಹೇಳಲಿಚ್ಛಿಸದ, ರೈಲ್ವೇ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next