Advertisement

ತಂದೆ-ಮಗ, ಅಣ್ಣ-ತಮ್ಮ, ಬೀಗರ ನಡುವೆ ಟಿಕೆಟ್‌ ಪೈಪೋಟಿ

02:16 PM Apr 28, 2022 | Team Udayavani |

ಕಲಬುರಗಿ: ರಾಜ್ಯಸಭೆ ವಿಪಕ್ಷ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಯಾಗಿರುವುದರಿಂದ ವಿಶೇಷವಾಗಿ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಗಮನ ಸೆಳೆಯುವಂತಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ನೆಲೆ ಇದ್ದು, ಜೆಡಿಎಸ್‌ ಪುಟಿದೇಳಲು ಹರಸಾಹಸ ನಡೆಸುತ್ತಿದೆ. ಇದರ ನಡುವೆ ಆಮ್‌ ಆದ್ಮಿಯಿಂದಲೂ ಘಟಾನುಘಟಿಗಳು ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಚುನಾವಣೆ ಹೊತ್ತಿಗೆ ಹಾಲಿ ಶಾಸಕರು ಹಾಗೂ ಮಾಜಿ ಸಚಿವರೇ ಪಕ್ಷಾಂತರ ಮಾಡಿದರೂ ಅಶ್ಚರ್ಯವಿಲ್ಲ.

Advertisement

ಅಫ‌ಜಲಪುರ: ಒಟ್ಟು ಆರು ಸಲ ಗೆದ್ದಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಕಳೆದ ಸಲ ಬಿಜೆಪಿ ಅಭ್ಯರ್ಥಿಯಾಗಿ ಪರಾಭವಗೊಂಡಿ­ದ್ದಾರೆ. ಹಾಲಿ ಶಾಸಕ ಎಂ.ವೈ.ಪಾಟೀಲ ಅವರಿಗೆ ವಯಸ್ಸಾಗಿದ್ದರಿಂದ ಅವರ ಪುತ್ರ ಅರುಣಕುಮಾರ ಪಾಟೀಲ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಕ.ಕ.ಭಾಗದಲ್ಲಿ ಕುರುಬರಿಗೆ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೊಡಬೇಕೆನ್ನುವ ಕೂಗಿಗೆ ಅಫ‌ಜಲಪುರ ಕ್ಷೇತ್ರವೇ ಮುಂಚೂಣಿಯಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಿಂದ ಜೆ.ಎಂ. ಕೊರಬು ಹಾಗೂ ಹಿಂದುಳಿದ ವರ್ಗದ ಇತರ ಮುಖಂಡರ ಹೆಸರೂ ಕೇಳಿ ಬರುತ್ತಿದೆ. ಇನ್ನು ಮಾಲೀಕಯ್ಯ ಗುತ್ತೇದಾರ ಬದಲು ಇವರ ಸಹೋದರ ನಿತಿನ್‌ ಗುತ್ತೇದಾರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಜೆಡಿಎಸ್‌ನಿಂದ ಶಿವಕುಮಾರ ನಾಟೀಕಾರ ಕ್ಷೇತ್ರದಲ್ಲಿ ಪ್ರವಾಸ ಬಿರುಸುಗೊಳಿಸಿದ್ದಾರೆ. ಮುಖಂಡ ಆರ್‌.ಡಿ.ಪಾಟೀಲ ಸಹ ಸ್ಪರ್ಧಿಸಲು ಉದ್ದೇಶಿಸಿದ್ದು, ಉಚಿತ ವಿವಾಹ ಸೇರಿದಂತೆ ಇತರ ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ.

ಆಳಂದ: ಬಿಜೆಪಿಯ ಸುಭಾಷ ಗುತ್ತೇದಾರ ಶಾಸಕರಾಗಿದ್ದು, ಈ ಸಲ ಇವರ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಶಾಸಕ ಬಿ.ಆರ್‌. ಪಾಟೀಲ ಮತ್ತೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದು, ಜೆಡಿಎಸ್‌ದಿಂದ ಮಹೇಶ್ವರಿ ವಾಲಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.
ಕಲಬುರಗಿ ದಕ್ಷಿಣ: ಬಿಜೆಪಿಯಿಂದ ದತ್ತಾತ್ರೇಯ ಪಾಟೀಲ ಹಾಗೂ ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಹೆಸರು ಕೇಳಿ ಬರುತ್ತಿದೆ. ಆದರೆ ಇವರ ಬೀಗರಾದ ಉದ್ಯಮಿ ಸಂತೋಷ ಬಿಲಗುಂದಿ ಅವರೂ ಟಿಕೆಟ್‌ಗಾಗಿ ಫೈಟ್‌ ನಡೆಸಿದ್ದಾರೆ.

ಕಲಬುರಗಿ ಉತ್ತರ: ಮಾಜಿ ಸಚಿವ, ದಿ| ಖಮರುಲ್‌ ಇಸ್ಲಾಂ ಪತ್ನಿ ಖನೀಜಾ ಫಾತೀಮಾ ಈ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ. ಇವರೇ ಪುನರ್‌ ಸ್ಪರ್ಧಿಸುತ್ತಾರೋ ಇಲ್ಲವೇ ಬೇರೆಯವರು ಸ್ಪರ್ಧಿಸುತ್ತಾರೋ ಇಲ್ಲವೋ ಎನ್ನುವುದು ಖಚಿತವಿಲ್ಲ. ಜೆಡಿಎಸ್‌ನಿಂದ ನಾಸೀರ ಹುಸೇನ್‌ ಮತ್ತೂಮ್ಮೆ ಕಣಕ್ಕೆ ಇಳಿಯಬಹು­ದು. ಕಳೆದ ಸಲ ಕೆಲವೇ ಮತಗಳಿಂದ ಪರಾಭವಗೊಂಡಿರುವ ಚಂದು ಪಾಟೀಲ ಬಿಜೆಪಿಯಿಂದ ಸ್ಪರ್ಧೆಗೆ ಇಳಿಯಲಿದ್ದಾರೆ.

ಜೇವರ್ಗಿ: ಕಾಂಗ್ರೆಸ್‌ನ ಡಾ| ಅಜಯ ಸಿಂಗ್‌ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಮೂರನೇ ಸಲ ಅದೃಷ್ಟ ಪರೀಕ್ಷಿಸಲು ಮುಂದಾಗಲಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿ ಯಾರು ಎಂಬುದನ್ನು ಈಗಲೇ ಹೇಳಲಿಕ್ಕಾ­ಗದು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಎರಡು ಸಲ ಅಜಯಸಿಂಗ್‌ ಎದುರು ಸೋಲನುಭವಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ಸಹ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಡಿವೈಎಸ್‌ಪಿ ಹುದ್ದೆಯಿಂದ ನಿವೃತ್ತರಾಗಲಿರುವ ಎಸ್‌.ಎಸ್‌. ಹುಲ್ಲೂರ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸುವುದು ನಿಶ್ಚಿತವಾಗಿದ್ದು, ಬಿಜೆಪಿಯೋ ಜೆಡಿಎಸ್‌ ಪಕ್ಷವೋ ಎನ್ನುವುದು ನಿರ್ಧಾರವಾಗಬೇಕಿದೆ.

Advertisement

ಚಿತ್ತಾಪುರ: ಪ್ರಿಯಾಂಕ್‌ ಖರ್ಗೆ ಕ್ಷೇತ್ರದ ಶಾಸಕ. ಇವರೂ ಸಹ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯುವುದು ಖಚಿತ. ಬಿಜೆಪಿಯಲ್ಲಿ ಯಾರು ಎಂಬುದನ್ನು ಈಗಂತೂ ಹೇಳಲು ಅಸಾಧ್ಯ ಎನ್ನುವಂತಿದೆ. ಮಾಜಿ ಶಾಸಕ ವಾಲ್ಮೀಕಿ ನಾಯಕ ನಿಧನಹೊಂದಿದ ಅನಂತರ ಹೊಸ ಅಭ್ಯರ್ಥಿಗಾಗಿ ಶೋಧ ನಡೆದಿದೆ. ದಿ| ವಾಲ್ಮೀಕಿ ನಾಯಕ ಪುತ್ರ ವಿಠuಲ ನಾಯಕ, ಮಣಿಕಂಠ ರಾಠೊಡ, ಅರವಿಂದ ಚವ್ಹಾಣ ಸೇರಿದಂತೆ ಇತರ ಹೆಸರು ಕೇಳಿ ಬರುತ್ತಿವೆ.

ಚಿಂಚೋಳಿ: ಸಂಸದ ಡಾ| ಉಮೇಶ ಜಾಧವ ಪುತ್ರ ಡಾ| ಅವಿನಾಶ ಜಾಧವ ಬಿಜೆಪಿಯಿಂದ ಶಾಸಕರಾಗಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸುಭಾಷ ರಾಠೊಡ ಅವರೇ ಈಗಲೂ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಹಲವರ ಹೆಸರು ಕೇಳಿ ಬರುತ್ತಿದೆ. ಕೊನೆ ಗಳಿಗೆಯಲ್ಲಿ ಡಾ|ಉಮೇಶ ಜಾಧವ ಸ್ಪರ್ಧಿಸಿದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

ಸೇಡಂ: ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ ಪಾಟೀಲ ಮಗದೊಮ್ಮೆ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಆದರೂ ಈ ನಡುವೆ ಅವರ ಕುಟುಂಬದವರ ಹೆಸರೂ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸ್ಪರ್ಧಿಸಲಿದ್ದಾರೆ. ಜೆಡಿಎಸ್‌ನಿಂದ ಬಾಲರಾಜ ಗುತ್ತೇದಾರ ಜೆಡಿಎಸ್‌ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಖರ್ಗೆ ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ
ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು ಶಾಸಕರಾಗಿದ್ದಾರೆ. ಬಿಜೆಪಿಯಿಂದ ಇವರೇ ಪುನರಾಯ್ಕೆ ಬಯಸಿ ಕಣಕ್ಕಿಳಿಯಬಹುದಾದರೂ ಶಾಸಕ ಸುನಿಲ್‌ ವಲ್ಲಾಪುರೆ ಸೇರಿದಂತೆ ಇತರರು ಕಣ್ಣಿಟ್ಟಿ ದ್ದಾರೆ. ಕಾಂಗ್ರೆಸ್‌ನಿಂದ ವಿಜಯಕುಮಾರ ರಾಮಕೃಷ್ಣ ಕಳೆದ ಸಲ ಅಭ್ಯರ್ಥಿಯಾಗಿ ದ್ದರು. ಈ ಸಲ ಯಾರೆನ್ನುವುದು ಸ್ಪಷ್ಟವಾಗಿಲ್ಲ. ಕೊನೆ ಗಳಿಗೆಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾದರೂ ಅಶ್ಚರ್ಯ ವಿಲ್ಲ. ಜೆಡಿಎಸ್‌ನಿಂದ ಕಳೆದ ಸಲ ಸ್ಪರ್ಧಿಸಿದ್ದ ಮಾಜಿ ಸಚಿವ ರೇವು ನಾಯಕ ಬೆಳಮಗಿ ನಡೆ ಇನ್ನೂ ನಿಗೂಢವಾಗಿದೆ.

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next