Advertisement

ಇನ್ನು ನಗರದ ಸಿಟಿ ಬಸ್‌ಗಳಲ್ಲೂ ಟಿಕೆಟ್ ಚೆಕ್ಕಿಂಗ್‌ ವ್ಯವಸ್ಥೆ

06:56 PM Apr 26, 2019 | Team Udayavani |

ಮಹಾನಗರ: ಸರಕಾರಿ ಬಸ್‌ಗಳಲ್ಲಿ ನಡೆಯುವ ಟಿಕೆಟ್ ತಪಾಸಣೆ ಇದೀಗ ನಗರದಲ್ಲಿ ಓಡಾಡುವ ಸಿಟಿ ಬಸ್‌ಗಳಿಗೂ ಬಂದಿದೆ.

Advertisement

ನಗರದಲ್ಲಿ ಪ್ರತಿದಿನ ಓಡಾಡುವ 300ಕ್ಕೂ ಹೆಚ್ಚಿನ ಸಿಟಿ ಬಸ್‌ಗಳ ಪೈಕಿ ಹೆಚ್ಚಿನ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್ ನೀಡುವುದಿಲ್ಲ. ಇದನ್ನು ತಡೆಯುವ ಉದ್ದೇಶದಿಂದ ಸಿಟಿ ಬಸ್‌ಗಳಲ್ಲಿ ಟಿಕೆಟ್ ತಾಪಾಸಣೆ ವ್ಯವಸ್ಥೆಯನ್ನು ಪರಿಚಯಿಸಲು ಸಿಟಿ ಬಸ್‌ ಮಾಲಕರ ಸಂಘ ತೀರ್ಮಾನಿಸಿದೆ.

ಸಿಟಿ ಬಸ್‌ ಸಂಪರ್ಕ ವ್ಯವಸ್ಥೆ ದಿನದಿಂದ ದಿನಕ್ಕೆ ಡಿಜಿಟಲೀಕೃತವಾಗುತ್ತಿದೆ. ಮೊನ್ನೆಯಷ್ಟೇ ‘ಚಲೋ’ ಎಂಬ ಆ್ಯಪ್‌ ಬಿಡುಗಡೆಗೊಂಡಿದ್ದು, ನಗರದಲ್ಲಿ ಓಡಾಡುವ ಎಲ್ಲ ಬಸ್‌ಗಳಿಗೆ ಜಿಪಿಎಸ್‌ ಅಳವಡಿಕೆ ಅನುಷ್ಠಾನದಲ್ಲಿದೆ. ಸಾರಿಗೆ ವ್ಯವಸ್ಥೆಯಲ್ಲಿ ಇಷ್ಟೆಲ್ಲ ಹೊಸತನ ತಂದರೂ, ಟಿಕೆಟ್ ನೀಡದಿರುವ ಸಮಸ್ಯೆಗೆ ಮಾತ್ರ ಈವರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಇದೀಗ ಸಿಟಿ ಬಸ್‌ಗಳಲ್ಲಿ ಟಿಕೆಟ್ ಚೆಕ್ಕಿಂಗ್‌ ಮಂದಿ ಓಡಾಡಲಿದ್ದಾರೆ.

ಸ್ಟೇಟ್ಬ್ಯಾಂಕ್‌-ಅತ್ತಾವರ-ಮಂಗಳಾದೇವಿ (ರೂಟ್ ನಂ.27) ರೂಟ್‌ನಲ್ಲಿ ಈಗಾಗಲೇ ಟಿಕೆಟ್ ಚೆಕ್ಕಿಂಗ್‌ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಕೆಲವೇ ದಿನಗಳಲ್ಲಿಯೇ ತಲಪಾಡಿ ಮತ್ತು ರಥಬೀದಿ ಕಡೆಗಳಲ್ಲಿ ಸಂಚರಿಸುವ ಬಸ್‌ಗಳಿಗೂ ಟಿಕೆಟ್ ಚೆಕ್ಕಿಂಗ್‌ ಮಂದಿಯನ್ನು ನಿಯೋಜಿಸಲಾಗುತ್ತಿದೆ. ಹಂತ ಹಂತವಾಗಿ ನಗರದ ಎಲ್ಲ ಸಿಟಿ ಬಸ್‌ ಮಾರ್ಗಗಳಲ್ಲೂ ನೂತನ ಯೋಜನೆ ಅನುಷ್ಠಾನಿಸಿ, ಬಸ್‌ ನಿರ್ವಾಹಕ ಪ್ರತಿ ಪ್ರಯಾಣಿಕರಿಗೂ ಟಿಕೆಟ್ ನೀಡುವಂತೆ ಮಾಡುವುದೇ ಇದರ ಉದ್ದೇಶ.

ಯಾವ ರೀತಿ ನಿರ್ವಹಣೆ?
ಸಿಟಿ ಬಸ್‌ ಮಾಲಕರ ಸಂಘ ಮತ್ತು ‘ಚಲೋ’ ಆ್ಯಪ್‌ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಯುತ್ತದೆ. ಟಿಕೆಟ್ ಚೆಕ್ಕಿಂಗ್‌ ಮಾಡುವ ಸಲುವಾಗಿ ನಾಲ್ಕರಿಂದ ಐದು ಮಂದಿಯನ್ನು ನಿಯೋಜಿಸಲಾಗುತ್ತದೆ. ಅವರು ಪ್ರತೀದಿನ ಬಸ್‌ ಸಂಚರಿಸುವ ವೇಳೆ ದಿಢೀರ್‌ ಆಗಮಿಸಿ, ಪ್ರಯಾಣಿಕರ ಟಿಕೆಟ್ ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ಪ್ರಯಾಣಿಕ ಟಿಕೆಟ್ ತೆಗೆದುಕೊಳ್ಳದಿದ್ದರೆ, ಟಿಕೆಟ್ ಬಗೆಗಿನ ಮಹತ್ವವನ್ನು ಹೇಳಲಾಗುತ್ತದೆ. ನಿರ್ವಾಹಕ ಟಿಕೆಟ್ ನೀಡದಿದ್ದರೆ ಅವರಿಗೆ ಎಚ್ಚರಿಕೆ ನೀಡಲಾಗುತ್ತದೆ.

Advertisement

ಸ್ಪಾಟ್ ಟಿಕೆಟಿಂಗ್‌ ವ್ಯವಸ್ಥೆ
ಟಿಕೆಟ್ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಬೇಕು ಎಂಬ ಉದ್ದೇಶದಿಂದ ಸ್ಪಾಟ್ ಟಿಕೆಟಿಂಗ್‌ ವ್ಯವಸ್ಥೆ ಆರಂಭಿಸಲಾಗಿದೆ. ಮೊದಲನೇ ಹಂತವಾಗಿ ನಗರದ ಅತ್ತಾವರ ಬಸ್‌ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ. ಈ ಬಸ್‌ ನಿಲ್ದಾಣದಲ್ಲಿ ಸದಾ ಜನಜಂಗುಳಿ ಇರುತ್ತದೆ. ಈ ಸಮಯದಲ್ಲಿ ಚಲೋ ಕಂಪೆನಿಯ ಅಧಿಕಾರಿಯೊಬ್ಬರು ಟಿಕೆಟ್ ವ್ಯವಸ್ಥೆಗೆಂದು ಬಸ್‌ ನಿಲ್ದಾಣದಲ್ಲಿ ನಿಂತಿರುತ್ತಾರೆ. ಪ್ರಯಾಣಿಕರಿಗೆ ಸ್ಥಳದಲ್ಲಿಯೇ ಟಿಕೆಟ್ ವ್ಯವಸ್ಥೆ ಕಲ್ಪಿಸುತ್ತಾರೆ.

ಟಿಕೆಟ್‌ನಲ್ಲೇ ಅರಿವು
ಮುಂದಿನ ದಿನಗಳಲ್ಲಿ ಸಿಟಿ ಬಸ್‌ಗಳಲ್ಲಿ ನೀಡುವ ಟಿಕೆಟ್‌ನಲ್ಲಿ ಪ್ರಯಾಣಿಕರು ದೂರುಗಳನ್ನು ನೀಡಲು ವಾಟ್ಸಾಪ್‌ ಸಂಖ್ಯೆ, ಜತೆಗೆ ಟಿಕೆಟ್ ತೆಗೆದುಕೊಳ್ಳುವ ಬಗ್ಗೆ ಅರಿವು ಮೂಡಿಸುವ ಸಂದೇಶ ಇರಲಿದೆ. ಈಗಾಗಲೇ ಅತ್ತಾವರ ರೂಟ್ ಬಸ್‌ ಟಿಕೆಟ್‌ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

ಟಿಕೆಟ್ ತೆಗೆದುಕೊಳ್ಳದಿದ್ದರೆ ಏನಾಗುತ್ತೆ?

ಟಿಕೆಟ್ ಯಾಕೆ ತೆಗೆದುಕೊಳ್ಳಬೇಕು? ತೆಗೆದುಕೊಳ್ಳದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಸಹಜವಾಗಿಯೇ ಮೂಡುತ್ತದೆ. ಒಂದು ವೇಳೆ ನೀವು ಪ್ರಯಾಣಿಸುವ ಬಸ್‌ ಅಪಘಾತಕ್ಕೆ ಒಳಗಾದರೆ ಆ ಸಮಯ ನಿಮಗೆ ಪರಿಹಾರ ಸಿಗಲು ಟಿಕೆಟ್ ಅತೀ ಅವಶ್ಯ. ಆ ವೇಳೆ ಇನ್ಶೂರೆನ್ಸ್‌ ಕಂಪೆನಿಯವರು ನಿಮಗೆ ನೀಡುವ ಪರಿಹಾರಕ್ಕೆ ಟಿಕೆಟ್ ಪರಿಗಣಿಸುತ್ತಾರೆ. ಒಂದು ವೇಳೆ ಕೈಯಲ್ಲಿ ಟಿಕೆಟ್ ಇಲ್ಲದಿದ್ದರೆ ಪರಿಹಾರ ಸಿಗುವುದಿಲ್ಲ. ಅಲ್ಲದೆ, ಕಾನೂನಿನ ರೀತಿಯೂ ಇದು ಅಪರಾಧವಾಗುತ್ತದೆ.

ಪ್ರಯಾಣಿಕರಿಗೂ ಅರಿವು
ನಿರ್ವಾಹಕರು ಪ್ರತಿಯೊಬ್ಬ ಪ್ರಯಾಣಿಕರಿಗೂ ಟಿಕೆಟ್ ನೀಡಬೇಕು ಎಂದು ಈಗಾಗಲೇ ಅಸೋಸಿಯೇಶನ್‌ಗೆ ತಿಳಿಸಿದ್ದೇವೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಪ್ರಯಾಣಿಕರಿಗೆ ಟಿಕೆಟ್‌ನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈಗಾಗಲೇ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

– ಜಾನ್‌ ಮಿಸ್ಕಿತ್‌
ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ)ಹೊಸ ವ್ಯವಸ್ಥೆ
ನಗರದಲ್ಲಿ ಸಂಚರಿಸುವ ಸಿಟಿ ಬಸ್‌ ನಿರ್ವಾಹಕರು ಪ್ರತಿಯೊಬ್ಬ ಪ್ರಯಾಣಿಕರಿಗೂ ಟಿಕೆಟ್ ನೀಡಬೇಕು. ಒಂದು ವೇಳೆ ನೀಡದಿದ್ದರೆ ಪ್ರಯಾಣಿಕ ನಿರ್ವಾಹಕರ ಬಳಿ ಟಿಕೆಟ್ ಕೇಳಿ ಪಡೆದುಕೊಳ್ಳಬೇಕು. ಟಿಕೆಟ್ ವ್ಯವಸ್ಥೆ ಸುಗಮವಾಗಿ ಸಾಗಲು ಟಿಕೆಟ್ ಚಕ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೂಟ್‌ಗಳಿಗೆ ಪರಿಚಯಿಸುತ್ತೇವೆ.

– ದಿಲ್ರಾಜ್‌ ಆಳ್ವ, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ
-ನವೀನ್‌ ಭಟ್ ಇಳಂತಿಲ
Advertisement

Udayavani is now on Telegram. Click here to join our channel and stay updated with the latest news.

Next