Advertisement

ಟಿಕ್‌, ಟಿಕ್‌, ಟಿಕ್‌ ಬರುತ್ತಿದೆ ಕಾಲ

01:55 PM Sep 25, 2017 | |

ಭಾರತದ ಸ್ಟಾಕ್‌ ಮಾರ್ಕೆಟ್‌ ಕ್ಷಿತಿಜದಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಬಹಳ ಪುರಾತನವಾದದ್ದು. ಅದಕ್ಕೆ 142 ವರ್ಷಗಳ ಇತಿಹಾಸವಿದೆ.  ಅದು ದೇಶದ ಆರ್ಥಿಕ ಪ್ರಗತಿಯನ್ನು ಬಿಂಬಿಸುವ ಮಾನಕವಾಗಿ ಪರಿಗಣಿತವಾಗಿರುವುದೂ ಹೌದು. ಆದರೆ ವಿದ್ಯುನ್ಮಾನ ತಂತ್ರಜ್ಞಾನ ಪ್ರಗತಿ ಹೊಂದುತ್ತಿದ್ದಂತೆ ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಎಂಬ ಹೊಸತೊಂದು ಮಾರುಕಟ್ಟೆ ವ್ಯವಸ್ಥೆ 1992ರಲ್ಲಿ ಸ್ಥಾಪನೆಯಾದ ನಂತರದಲ್ಲಿ ಜನ ಅದರತ್ತ ಹೆಚ್ಚು ಆಕರ್ಷಿತರಾಗಿದ್ದೂ ಸುಳ್ಳಲ್ಲ.

Advertisement

ದಶಕಗಳ ಕಾಲಾವಧಿಯಿಂದ ಮಾರುಕಟ್ಟೆ ವ್ಯವಸ್ಥೆ ಹಲವು ಸ್ಥಿತ್ಯಂತರಗಳನ್ನು ಕಂಡಿದೆ.  ಮಾರುಕಟ್ಟೆಯ ಕಾರ್ಯಾವಧಿಯೂ ವ್ಯತ್ಯಯವಾಗುತ್ತಲೇ ಇತ್ತು. ಆದರೆ ಅದು ದಿನದ ಬಹುತೇಕ ಐದಾರು ಗಂಟೆಗಳ ಅವಧಿಗೆ ಮಾತ್ರ ಸೀಮಿತವಾಗಿತ್ತು. ಈಗಲೂ ಮಾರುಕಟ್ಟೆಯ ಟ್ರೇಡಿಂಗ್‌ ಅವಧಿ ಬೆಳಗ್ಗೆ 9 ರಿಂದ ಅಪರಾಹ್ನ 3.30ರ ತನಕ ಇದೆ.

ನಮ್ಮ ದೇಶೀಯ ಮಾರುಕಟ್ಟೆಯ ಮೇಲೆ ಜಾಗತೀಕರಣದ ಪ್ರಭಾವ ಹೆಚ್ಚಾದ ನಂತರದಲ್ಲಿ ಮತ್ತು ಭಾರತದ ಶೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾದ ನಂತರದಲ್ಲಿ ಟ್ರೇಡಿಂಗ್‌ ಅವಧಿಯ ವಿಸ್ತರಣೆಯ ಬಗ್ಗೆಯೂ ಚಿಂತನೆ ನಡೆಯುತ್ತಿದೆ.  ನಿಯಂತ್ರಣ ಮಂಡಳಿಯಾಗಿರುವ ಸೆಬಿ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿದೆ.

ಭೌಗೋಳಿಕವಾಗಿ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ಟೈಮ್‌ ಜೋನ್‌, ಭಾರತದ ಟೈಮ್‌ ಜೋನ್‌ನಲ್ಲಿ ವ್ಯತ್ಯಯವಿರುವ ಕಾರಣ ಅಲ್ಲಿನ ಮಾರುಕಟ್ಟೆಯ ಟ್ರೇಡಿಂಗ್‌ ಅವಧಿಗೆ ಭಾರತದ ಮಾರುಕಟ್ಟೆಯ ಟ್ರೇಡಿಂಗ್‌ ಅವಧಿಯನ್ನು ಸಮೀಕರಿಸುವುದು ಇದುವರೆಗೂ ಸಾಧ್ಯವಾಗಿರಲಿಲ್ಲ.  ಉದಾಹರಣೆಗೆ, ನಮ್ಮ ಸ್ಟಾಕ್‌ ಎಕ್ಸ್‌ಚೇಂಜ್‌ಗಳ ಟ್ರೇಡಿಂಗ್‌ ಅವಧಿ ಅಪರಾಹ್ನ 3.30ಕ್ಕೆ ಮುಗಿಯುತ್ತದೆ. ಆದರೆ ನಮ್ಮ ಕಾಲಮಾನದ ಪ್ರಕಾರ ಸಂಜೆ ಸರಿಸುಮಾರು 7ರ ಹೊತ್ತಿಗೆ  ಲಂಡನ್‌, ಯೂರೋಪ್‌ ಮತ್ತು ಅಮೇರಿಕಾದ ಮಾರುಕಟ್ಟೆಗಳು ಟ್ರೇಡಿಂಗ್‌ ಆರಂಭಮಾಡುತ್ತವೆ.  ವಿಶ್ವದ ಪ್ರಮುಖ ಮಾರುಕಟ್ಟೆಗಳೊಂದಿಗೆ ನಮ್ಮ ಮಾರುಕಟ್ಟೆಯ ಸಮೀಕರಣ ಸಾಧ್ಯವಾಗಬೇಕಾದರೆ ಟ್ರೇಡಿಂಗ್‌ ಸಮಯ ಒಂದೇ ಆಗಿದ್ದರೆ ಹೆಚ್ಚು ಪರಿಣಾಮಕಾರಿ ಯಾಗಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ.  

ಮುಂಬೈನಿಂದ ಕಾರ್ಯಾಚರಿಸುತ್ತಿರುವ ಮೆಟ್ರೊಪಾಲಿಟನ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ಆಫ್ ಇಂಡಿಯಾ ಎಂಬ ಮಾರುಕಟ್ಟೆ, ತನ್ನ ಟ್ರೇಡಿಂಗ್‌ ಕಾಲಾವಧಿಯನ್ನು ಮಧ್ಯಾಹ್ನ 3.30ರ ಬದಲಾಗಿ ಸಂಜೆ 5 ಗಂಟೆಯ ತನಕ ವಿಸ್ತರಿಸುವ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ನಿಯಂತ್ರಣಮಂಡಳಿಯ ಮುಂದಿಟ್ಟಿದೆ. ಅದು ತುಂಬಾ ಸಣ್ಣ ಶೇರು ವಿನಿಮಯ ಕೇಂದ್ರವಾಗಿದ್ದು, ತನ್ನ ವ್ಯಾಪಾರಾಭಿವೃದ್ಧಿಯನ್ನು ಗಮನದಲ್ಲಿಟ್ಟು ಹೀಗೆ ಮಾಡಿರಬಹುದು. ಆದರೆ ಒಟ್ಟಾರೆಯಾಗಿ ಕಾಲಾವಧಿ ವಿಸ್ತರಣೆಯ ಹಿಂದೆ ಹಲವು ಆಯಾಮಗಳಿವೆ.  

Advertisement

ಅಮೇರಿಕ ಮತ್ತು ಐರೋಪ್ಯರಾಷ್ಟ್ರಗಳಲ್ಲಿ ಶೇರುಮಾರುಕಟ್ಟೆ ಟ್ರೇಡಿಂಗ್‌ ಅವಧಿ ವಿಸ್ತೃತವಾಗಿದೆ. ಉದಾಹರಣೆಗೆ, ಫ್ರಾಂಕ್‌ಫ‌ರ್ಟ್‌ಶೇರು ವಿನಿಮಯ ಕೇಂದ್ರ ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 8ರ ತನಕ ಅಂದರೆ ಹನ್ನೊಂದುಗಂಟೆಗಳ ಅವಧಿಯಲ್ಲಿ ನಡೆಯುತ್ತದೆ. ಅಮೇರಿಕಾದ ಪ್ರಖ್ಯಾತ ನಾಸ್‌ಡಾಕ್‌ ಶೇರು ವಿನಿಮಯ ಕೇಂದ್ರ ಬೆಳಗ್ಗೆ 4ಗಂಟೆಯಿಂದ ರಾತ್ರಿ 8ರ ತನಕ ಕಾರ್ಯ ನಿರ್ವಹಿಸುತ್ತದೆ. ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌, ಬೆಳಗ್ಗೆ 9.30ರಿಂದ ಸಂಜೆ 4ರ ತನಕ ಕೆಲಸ ಮಾಡುತ್ತದೆ.  ಹೀಗೆ ಅನೇಕ ಕಡೆ ವಿಸ್ತಾರವಾದ ಟ್ರೇಡಿಂಗ್‌ ಅವಧಿ ಇದೆ. ಒಟ್ಟಾರೆ ಪರಿಗಣನೆಯಲ್ಲಿ ನಮ್ಮ ದೇಶೀಯ ಮಾರುಕಟ್ಟೆಯ ಕಾರ್ಯಾವಧಿಯೇ ಅತ್ಯಂತ ಕಡಿಮೆ ಎನ್ನಬಹುದು. ಇನ್ನೊಂದು ಕಡೆಯಲ್ಲಿ ಕಮಾಡಿಟಿ ಎಕ್ಸ್‌ ಚೇಂಜ್‌ನ ಅವಧಿ ಬೆಳಗ್ಗೆ 10ರಿಂದ ರಾತ್ರಿ11.30ರ ತನಕ ಇದೆ. 

ಇರಲಿ, ಈಗ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸೋಣ.
1.    ಜಾಗತಿಕ ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಕ್ಕೆ ಸ್ಪಂದಿಸಲು ಮತ್ತು ಅದಕ್ಕೆ ಅನುಗುಣವಾಗಿ ಮಾರುಕಟ್ಟೆಯ ಏರಿಳಿತಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇದೊಂದು ಸ್ವಾಗತಾರ್ಹ ಕ್ರಮ.  

2.    ಭಾರತದ ಶೇರು ಮಾರುಕಟ್ಟೆಯಲ್ಲಿ ವಿದೇಶಿ ಮೂಲದ ಹೂಡಿಕೆದಾರರ ಗುಂಪುಗಳು ದೊಡ್ಡ ಸಂಖ್ಯೆಯಲ್ಲಿದ್ದು, ಅವುಗಳ ಮೂಲಕ ಆಗುವ ವಹಿವಾಟು ಕೂಡ ಗಣನೀಯ ಪ್ರಮಾಣದಲ್ಲಿರುವ ಕಾರಣ ಅವರನ್ನು ಖುಷಿಪಡಿಸಲು ಇದು ಸಹಕಾರಿಯಾಗಬಹುದು.  ಅದೇ ರೀತಿ ಭಾರತೀಯ ಮೂಲದ ಕಾರ್ಪೊರೇಟ್‌ ಕಂಪೆನಿಗಳು ಕೂಡ ಜಾಗತಿಕ ಶೇರುಮಾರುಕಟ್ಟೆಗಳಲ್ಲಿ ಹೂಡಿಕೆ ಮತ್ತು ಬ್ರೋಕರೇಜ್‌ ಸೇವೆಗಳನ್ನು ಒದಗಿಸುತ್ತಿರುವುದರಿಂದ ಅವರಿಗೂ ಈ ಅವಲಂಬಿತ ಕಾರ್ಯಾವಧಿ ವರದಾನವಾಗಬಹುದು.

3.    ವಿಸ್ತಾರಗೊಳಿಸಿದ ಟ್ರೇಡಿಂಗ್‌ ಅವಧಿಯಿಂದ ವಿನಿಮಯ ಕೇಂದ್ರಗಳಿಗೆ ದೊಡ್ಡಮಟ್ಟದಲ್ಲಿ ವಹಿವಾಟು ಏರಿಕೆಯಾಗುವುದು ಖಚಿತ.

4.    ಕೆಲವು ದೊಡ್ಡ ಕಂಪೆನಿಗಳು ಭಾರತೀಯ ಮಾರುಕಟ್ಟೆಯ ಕಾರ್ಯಾವಧಿಯನ್ನು ಬೆಳಗ್ಗೆ 9 ರಿಂದ ಸಂಜೆ 7.30ರ ತನಕ ವಿಸ್ತರಿಸಬೇಕೆಂಬ ಪ್ರಸ್ತಾವನೆಯನ್ನಿಟ್ಟಿವೆ. ಹಾಗೆ ಮಾಡುವುದಾದಲ್ಲಿ ಕೆಲಸಗಾರರನ್ನು ಎರಡು ಪಾಳಿಗಳಲ್ಲಿ ವಿಂಗಡಿಸಿ ಅವರಿಂದ ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ. 

5.    ಟ್ರೇಡರ್‌ಗಳಿಗೆ, ಹೂಡಿಕೆದಾರರಿಗೆ ಒಂದೆಡೆ ಇದು ಖುಷಿಯ ಸಂಗತಿಯೇ ಆದರೂ, ಬ್ರೋಕರೇಜ್‌ ಸೇವೆಗಳನ್ನು ಒದಗಿಸುವ ಕಂಪೆನಿಗಳಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಅವರಿಗೆ ತಮ್ಮ ಲೆಕ್ಕಾಚಾರಗಳ ಹೊಂದಾಣಿಕೆ ಮತ್ತು ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ಸಮಯದ ಕೊರತೆ ಉಂಟಾಗಬಹುದು.  ಅಲ್ಲದೇ ಮಾರುಕಟ್ಟೆಯ ಅಧ್ಯಯನ ಮತ್ತು ರೀಸರ್ಚ್‌ ಮಾಡುವುದಕ್ಕೆ ಸಮಯದ ಅಭಾವವೂ ಎದುರಾಗಬಹುದು.

ನಿರಂಜನ

Advertisement

Udayavani is now on Telegram. Click here to join our channel and stay updated with the latest news.

Next