Advertisement

ಟಿಬೆಟಿಯನ್‌ ಕತೆ: ಜಾಣ್ಮೆಯ ಪರೀಕ್ಷೆ

12:30 AM Feb 03, 2019 | |

ಗಝೋಂಗೆಂಗು ಎಂಬ ಚಕ್ರವರ್ತಿಯಿದ್ದ. ಯುವಕನಾದ ಅವನು ಪ್ರಜೆಗಳನ್ನೇ ದೇವರೆಂದು ಭಾವಿಸಿ ಅವರಿಗೆ ಬೇಕಾದ ಅನುಕೂಲಗಳನ್ನು ಒದಗಿಸಿದ್ದ. ಅವನ ಆಡಳಿತದಲ್ಲಿ ಎಲ್ಲರೂ ಸುಖ, ಸಂತೋಷಗಳಿಂದ ಜೀವನ ಮಾಡುತ್ತಿದ್ದರು. ಆದರೆ, ಚಕ್ರವರ್ತಿಗೆ ಮಾತ್ರ ಒಂದು ಕೊರತೆ ಕಾಡುತ್ತಿತ್ತು. ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ. ರಾಜಮನೆತನಕ್ಕೆ ಸೇರಿದ ಹುಡುಗಿಯೇ ರಾಣಿಯಾಗಬೇಕೆಂಬ ಬಯಕೆ ಅವನಲ್ಲಿರಲಿಲ್ಲ. ತಾನು ಕೈ ಹಿಡಿಯುವ ಹುಡುಗಿ ರೂಪವತಿಯಾಗಿರಬೇಕು. ಬುದ್ಧಿವಂತೆಯೂ ಆಗಿರಬೇಕು. ನಾಳೆ ಯಾವುದಾದರೂ ಸಮಸ್ಯೆ ಬಂದರೆ ಮಂತ್ರಿಗಳ ಹಾಗೆ ಸಲಹೆ ಕೊಟ್ಟು ಪಾರು ಮಾಡುವ ಜಾಣ್ಮೆ ಅವಳಲ್ಲಿರಬೇಕು ಎಂದು ಅವನು ಆಶಿಸುತ್ತಿದ್ದ. ಈ ಕಾರಣದಿಂದ ಅವನ ಮನಸ್ಸಿಗೊಪ್ಪುವ ವಧು ಎಲ್ಲಿಯೂ ಕಂಡುಬರಲಿಲ್ಲ. ರೂಪವಿದ್ದವರು ಜಾಣರಾಗಿರಲಿಲ್ಲ. ಬುದ್ಧಿವಂತಿಕೆ ಇದ್ದವರಲ್ಲಿ ರೂಪದ ಕೊರತೆ ಇತ್ತು. 

Advertisement

ಆಗ ಚಕ್ರವರ್ತಿ ಮಂತ್ರಿಗಳೊಂದಿಗೆ ತನ್ನ ಮನಸ್ಸಿನ ಚಿಂತೆಯನ್ನು ಹೇಳಿಕೊಂಡ. “”ಬುದ್ಧಿವಂತಿಕೆ ಇರುವ ರೂಪವತಿಯಾದ ಹುಡುಗಿಯನ್ನು ರಾಣಿಯಾಗಿ ಮಾಡಿಕೊಳ್ಳಲು ನನಗೆ ನಿಮ್ಮ ಸಲಹೆ ಬೇಕು. ಅಂತಹ ಅನುಕೂಲದ ಹುಡುಗಿ ಎಲ್ಲಿದ್ದಾಳೆಂದು ಹುಡುಕಿ ಕರೆತನ್ನಿ” ಎಂದು ಹೇಳಿದ. ಮಂತ್ರಿಗಳು, “”ನೀವು ಬಯಸಿದ ಗುಣಲಕ್ಷಣಗಳಿರುವ ಒಬ್ಬಳೇ ಒಬ್ಬ ಹುಡುಗಿ ದ್ರಾಶಿಡಿ ಎಂಬ ಸಣ್ಣ ರಾಜನ ರಾಜ್ಯದಲ್ಲಿದ್ದಾಳೆಂದು ಕೇಳಿ ಬಲ್ಲೆವು. ಅವಳನ್ನು ಹುಡುಕಿ ಹಿಡಿಯುವುದು ಕಷ್ಟವೇನಲ್ಲ. ಅವಳು ಓರ್ವ ರೈತನ ಮಗಳು. ಯಾವುದಾದರೂ ಕಠಿನವಾದ ಸವಾಲನ್ನು ಎಸೆಯುವ ಮೂಲಕ ರಾಜನನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಅದನ್ನು ಆ ಜಾಣ ಹುಡುಗಿ ಮಾತ್ರ ಬಿಡಿಸುವಂತಾಗಬೇಕು. ಪರೀಕ್ಷೆಗಳನ್ನು ಗೆದ್ದ ಮೇಲೆ ಅವಳನ್ನು ಸುಲಭವಾಗಿ ವರಿಸಬಹುದು” ಎಂದು ಸಲಹೆ ನೀಡಿದರು.

ಈ ಸಲಹೆ ಸಮಂಜಸವೆನಿಸಿತು ಚಕ್ರವರ್ತಿಗೆ ಇಬ್ಬರು ದೂತರನ್ನು ಕರೆದ. ಒಂದು ಜೀವಂತ ಯಾಕ್‌ ಮತ್ತು ಶಿಲ್ಪಿಗಳ ಕೈಚಳಕದಿಂದ ತಯಾರಿಸಿದ ಅದರ ಕಲ್ಲಿನ ವಿಗ್ರಹವನ್ನು ಅವರಿಗೆ ಒಪ್ಪಿಸಿದ. “”ಇವುಗಳನ್ನು ತೆಗೆದುಕೊಂಡು ದ್ರಾಶಿಡಿ ರಾಜನ ಬಳಿಗೆ ಹೋಗಿ. ಈ ಎರಡರಲ್ಲಿ ನಿಜವಾದ ಯಾಕ್‌ ಯಾವುದು ಎಂಬುದನ್ನು ಕಂಡುಹಿಡಿಯಬೇಕು, ತಪ್ಪಿದರೆ ನಮ್ಮೊಂದಿಗೆ ಯುದ್ಧ ಮಾಡಲು ಸಿದ್ಧನಾಗಬೇಕು ಎಂದು ಹೇಳಬೇಕು” ಎಂಬ ಮಾತನ್ನು ತಿಳಿಸಿ ಅವರನ್ನು ಕಳುಹಿಸಿಕೊಟ್ಟ. ದೂತರು ರಾಜನ ಸನ್ನಿಧಿಗೆ ಬಂದು ಈ ಮಾತನ್ನು ಹೇಳಿದರು.

ರಾಜನು ಜೀವಂತ ಯಾಕ್‌ ಮತ್ತು ಅದರ ಪ್ರತಿಕೃತಿಯನ್ನು ನೋಡಿದ. ಯಾವುದು ಜೀವಂತವಾದುದು ಎಂಬುದೇ ಹೇಳಲು ಸಾಧ್ಯವಾಗಲಿಲ್ಲ. ಆಗ ಅವನು ಇಡೀ ರಾಜ್ಯದಲ್ಲಿ ಡಂಗುರ ಹೊಡೆಸಿದ. “”ಬುದ್ಧಿವಂತರಾದವರು ರಾಜಸಭೆಗೆ ಬಂದು, ಈ ಸಮಸ್ಯೆಯನ್ನು ಬಿಡಿಸಬೇಕು. ಉತ್ತರ ಸರಿಯಾದರೆ ಚಿನ್ನದ ಕಡಗ ಬಹುಮಾನ. ತಪ್ಪಿದರೆ ಹಿಮದ ರಾಶಿಯಲ್ಲಿ ಹೂಳುವ ಶಿಕ್ಷೆ ಸಿಗುತ್ತದೆ” ಎಂದು ಸಾರಿದ. ಶಿಕ್ಷೆಗೆ ಹೆದರಿ ಒಬ್ಬರೂ ಬರಲಿಲ್ಲ. ರೈತನ ಮಗಳು ಮುಕಿನೋ ಎಂಬವಳು ಡಂಗುರವನ್ನು ಕೇಳಿದಳು. ತಂದೆಯೊಡನೆ, “”ಇದನ್ನು ಕಂಡುಹಿಡಿಯಲು ಏನು ಕಷ್ಟವಿದೆ? ನೀವು ಹೋಗಿ, ನಾನು ಏನು ಹೇಳುತ್ತೇನೋ ಹಾಗೆಯೇ ಮಾಡಿ. ಸತ್ಯ ಏನೆಂಬುದು ಗೊತ್ತಾಗುತ್ತದೆ” ಎಂದು ಗುಟ್ಟಿನಲ್ಲಿ ಏನು ಮಾಡಬೇಕೆಂಬುದನ್ನು ತಿಳಿಸಿದಳು. 

ರೈತ ರಾಜಸಭೆಗೆ ಬಂದ. ಬರುವಾಗಲೇ ಒಂದು ಹೊರೆ ಹಸೀ ಹುಲ್ಲನ್ನು ಹೊತ್ತುಕೊಂಡಿದ್ದ. “”ಸಮಸ್ಯೆಗೆ ನಾನು ಉತ್ತರ ಹೇಳುತ್ತೇನೆ” ಎನ್ನುತ್ತ ಹೊರೆಯಲ್ಲಿದ್ದ ಹುಲ್ಲನ್ನು ಯಾಕ್‌ ಮತ್ತು ಅದರ ಗೊಂಬೆಯ ಮುಂದೆ ಹಾಕಿದ. ಸ್ತಬ್ಧವಾಗಿ ನಿಂತಿದ್ದ ಜೀವಂತ ಯಾಕ್‌ ಕಣ್ಣರಳಿಸಿ ಗಬಕ್ಕನೆ ಹುಲ್ಲಿಗೆ ಬಾಯಿ ಹಾಕಿತು. ವಿಗ್ರಹ ಹಾಗೆಯೇ ನಿಂತಿತ್ತು. ಚಕ್ರವರ್ತಿಯ ಸಮಸ್ಯೆಯನ್ನು ಸುಲಭವಾಗಿ ಬಿಡಿಸಿ ರೈತ ಬಹುಮಾನದೊಂದಿಗೆ ಮನೆಗೆ ಬಂದ.

Advertisement

ಚಕ್ರವರ್ತಿಯ ದೂತರು ಅವನ ಬಳಿಗೆ ಬಂದರು. ನಡೆದ ವಿಷಯ ಹೇಳಿದರು. ಮಂತ್ರಿಗಳು, “”ಅಷ್ಟು ಮಂದಿ ವಿದ್ಯಾವಂತರಿರುವ ರಾಜ್ಯದಲ್ಲಿ ಸವಾಲಿಗೆ ಒಬ್ಬ ರೈತ ಅದಕ್ಕೆ ಉತ್ತರ ಕಂಡುಕೊಂಡ. ಅವನ ಜಾಣತನವಲ್ಲ, ಇದು ಆ ಹುಡುಗಿಯ ಜಾಣ್ಮೆ. ಅವಳ ಜಾಣ್ಮೆ ಎಷ್ಟಿದೆ ನೋಡಬೇಕು. ಮತ್ತೆ ಅವನ ಬಳಿಗೆ ಹೋಗಿ. ಒಂದು ಮರದ ಕೋಲನ್ನು ಕೊಡಿ. ಈ ಕೋಲಿನ ತುದಿ ಮತ್ತು ಬುಡ ಯಾವುದು ಎಂದು ಕಂಡುಹಿಡಿಯುವ ಸವಾಲನ್ನು ಗೆಲ್ಲಬೇಕು, ಇಲ್ಲವಾದರೆ ಚಕ್ರವರ್ತಿ ರಾಜ್ಯವನ್ನು ಕೈವಶ ಮಾಡಿಕೊಳ್ಳುತ್ತಾರೆಂದು ತಿಳಿಸಿ” ಎಂದು ದೂತರನ್ನು ಕಳುಹಿಸಿದ.

ಇನ್ನೊಂದು ಸವಾಲಿನೊಂದಿಗೆ ಮರಳಿ ಚಕ್ರವರ್ತಿಯ ದೂತರು ಬಂದಾಗ ದ್ರಾಶಿಡಿಯ ರಾಜನಿಗೆ ಚಿಂತೆಯಾಯಿತು. ಸಮಸ್ಯೆಯ ಪರಿಹಾರಕ್ಕೆ ಈ ಸಲ ಡಂಗುರ ಹೊಡೆಸಿ ಬುದ್ಧಿವಂತರನ್ನು ಹುಡುಕುವ ಕೆಲಸಕ್ಕೆ ಹೋಗಲಿಲ್ಲ. ರೈತನ ಮನೆಗೆ ಸೈನಿಕರನ್ನು ಕಳುಹಿಸಿದ. “”ಚಕ್ರವರ್ತಿಗಳಿಂದ ರಾಜನಿಗೆ ಹೊಸ ಸಮಸ್ಯೆ ಎದುರಾಗಿದೆ. ನೀನೇ ಬಂದು ಪರಿಹಾರ ಹೇಳಲು ಆಜ್ಞೆ ಮಾಡಿದ್ದಾರೆ, ಬಾ ನಮ್ಮ ಜೊತೆಗೆ” ಎಂದು ಅವರು ಕರೆದರು. ರೈತ ಭಯದಿಂದ ಕಂಗಾಲಾದ. “”ಅಯ್ಯೋ ನನ್ನನ್ನು ಬಿಟ್ಟುಬಿಡಿ, ನಾನು ಅಂತಹ ಜಾಣನಲ್ಲ. ಇಂತಹ ಸಮಸ್ಯೆಗಳಿಗೆ ನನ್ನ ಬಳಿ ಉತ್ತರವಿಲ್ಲ” ಎಂದು ಕುಸಿದುಬಿಟ್ಟ.

ರೈತನ ಮಗಳು ತಂದೆಗೆ ಧೈರ್ಯ ತುಂಬಿದಳು. “”ರಾಜಸಭೆಗೆ ನೀವು ಹೋಗಿ. ಕೊಂಚವೂ ಭಯಪಡಬೇಡಿ. ನಾನು ಹೇಳಿದ ಹಾಗೆ ಮಾಡಿ” ಎಂದು ಒಂದು ಉಪಾಯ ಹೇಳಿಕೊಟ್ಟಳು. ರೈತ ನಿಶ್ಚಿಂತನಾಗಿ ರಾಜನ ಬಳಿಗೆ ಬಂದ. ದೂತರು ತಂದಿರಿಸಿದ ಕೋಲನ್ನು ಎತ್ತಿಕೊಂಡ. “”ಇದರ ತುದಿ ಯಾವುದು, ಬುಡ ಯಾವುದೆಂಬುದು ಗೊತ್ತಾಗಬೇಕು ತಾನೆ? ನನ್ನೊಂದಿಗೆ ನದಿಯ ಬಳಿಗೆ ಬನ್ನಿ. ಇದಕ್ಕೆ ಉತ್ತರ ನಾನು ಹೇಳುತ್ತೇನೆ” ಎನ್ನುತ್ತ ನದಿಯ ಬಳಿಗೆ ಕರೆದುಕೊಂಡು ಬಂದ. ಹರಿಯುವ ನೀರಿಗೆ ಕೋಲನ್ನು ಹಾಕಿದ. ಕೋಲು ಸರ್ರನೆ ತಿರುಗಿ ತೇಲುತ್ತ ಮುಂದೆ ಹೋಯಿತು. ಕೆಳಭಾಗದಲ್ಲಿರುವುದು ಕೋಲಿನ ಶಿರ, ಮೇಲ್ಭಾಗದಲ್ಲಿರುವುದು ಬುಡ ಎಂಬುದನ್ನು ತೋರಿಸಿದ.

ಚಕ್ರವರ್ತಿಯ ದೂತರು ಈ ಉತ್ತರದೊಂದಿಗೆ ಮರಳಿ ಬಂದಾಗ ಮಂತ್ರಿಗಳು, “”ರೈತನ ಮನೆಯಲ್ಲಿ ಜಾಣೆಯೊಬ್ಬಳು ಇರುವುದು ಸ್ಪಷ್ಟವಾಗಿದೆ. ಇನ್ನೂ ಒಂದು ಪರೀಕ್ಷೆ ಮಾಡಿದರೆ ನಮ್ಮ ಊಹೆ ಖಚಿತವಾಗುತ್ತದೆ” ಎಂದು ಹೇಳಿ ಇನ್ನೊಂದು ಸವಾಲನ್ನು ರಾಜನ ಸಭೆಗೆ ಕಳುಹಿಸಿದರು. ದೂತರು ಎರಡು ಹಾವುಗಳನ್ನು ತಂದು ದ್ರಾಶಿಡಿ ರಾಜನ ಮುಂದಿಟ್ಟರು. “”ನೋಡಲು ಒಂದೇ ರೀತಿ ಇದ್ದರೂ ಇವು ಹೆಣ್ಣು ಮತ್ತು ಗಂಡು ಹಾವುಗಳಲ್ಲಿ. ಹೆಣ್ಣು ಹಾವು ಯಾವುದೆಂದು ಗುರುತಿಸಿ ಹೇಳಿದರೆ ಚಕ್ರವರ್ತಿಗಳು ನಿನ್ನನ್ನು ಮಿತ್ರನಾಗಿ ಸ್ವೀಕರಿಸುತ್ತಾರೆ. ತಪ್ಪಿದರೆ ಅಧಿಕಾರ ಕಳೆದುಕೊಳ್ಳುತ್ತೀ” ಎಂದು ಹೇಳಿದರು.

ರಾಜನು ಬೇರೆ ಏನೂ ಯೋಚಿಸಲಿಲ್ಲ. ರೈತನಿಗೆ ಕರೆ ಕಳುಹಿಸಿದ. “”ರಾಜಸಭೆಗೆ ಬಂದು ಯಾವ ಹಾವು ಹೆಣ್ಣು ಎಂಬುದನ್ನು ಕಂಡುಹಿಡಿಯಬೇಕಂತೆ. ಗೆದ್ದರೆ ದೊಡ್ಡ ಬಹುಮಾನ ಕೊಡುತ್ತಾರೆ. ತಪ್ಪಿದರೆ ಊರಿನಿಂದ ಓಡಿಸುತ್ತಾರೆ” ಎಂದು ಸೈನಿಕರು ಹೇಳಿದರು. ರೈತನಿಗೆ ಚಿಂತೆಯಾಯಿತು. ಆದರೆ, ಅವನ ಮಗಳು ತಂದೆಯ ಕೈಗೆ ಒಂದು ರೇಷ್ಮೆಯ ಬಟ್ಟೆಯನ್ನು ಕೊಟ್ಟಳು. ಏನು ಮಾಡಬೇಕೆಂಬುದನ್ನು ತಿಳಿಸಿ ರಾಜ ಸಭೆಗೆ ಕಳುಹಿಸಿದಳು.

ರೈತ ರಾಜನ ಬಳಿಗೆ ಬಂದ. “”ಹೆಣ್ಣು ಹಾವನ್ನು ಕಂಡುಹಿಡಿಯಬೇಕು ತಾನೆ? ಇದೆಷ್ಟರ ಕೆಲಸ? ಹೆಂಗಸರಿಗೆ ರೇಷ್ಮೆ ಬಟ್ಟೆಗಳು, ಒಡವೆಗಳೆಂದರೆ ಪಂಚಪ್ರಾಣವಲ್ಲವೆ? ತಮಾಷೆ ನೋಡಿ” ಎಂದು ಹೇಳಿ ಹಾವುಗಳ ಮುಂದೆ ಬಟ್ಟೆಯನ್ನು ಹಾಸಿದ. ಹೆಣ್ಣುಹಾವು ಎದ್ದುಬಂದು ಅದರ ಮೇಲೆ ಮಲಗಿತು. ಗಂಡುಹಾವು ದೂರ ಹೋಯಿತು. ದೂತರು ಸಮಸ್ಯೆ ಪರಿಹಾರವಾಗಿರುವುದನ್ನು ಒಪ್ಪಿಕೊಂಡು ಹೊರಟುಹೋದರು.

ಚಕ್ರವರ್ತಿಯ ಮಂತ್ರಿಗಳಿಗೆ ರೈತನ ಮಗಳ ಜಾಣತನ ಎಷ್ಟೆಂಬುದು ನಿರ್ಧಾರವಾಯಿತು. ಮತ್ತೆ ದೂತರನ್ನು ರಾಜನ ಬಳಿಗೆ ಕಳುಹಿಸಿದರು. ಅವರು, “”ಸವಾಲುಗಳನ್ನು ಬಿಡಿಸಿದ್ದು ನಿಮ್ಮ ರಾಜ್ಯದ ರೈತನಲ್ಲ ಎಂಬುದು ಚಕ್ರವರ್ತಿಗೆ ಖಚಿತವಾಗಿದೆ. ಈ ಸವಾಲನ್ನು ನಿಜವಾಗಿ ಯಾರು ಬಿಡಿಸಿದ್ದಾರೋ ಅವರನ್ನು ಕರೆಸು, ನಾವು ಕೊಡುವ ವಸ್ತ್ರಾಭರಣಗಳನ್ನು ಧರಿಸಿ ಮೇನೆಯಲ್ಲಿ ಕುಳಿತು ಅವರು ಚಕ್ರವರ್ತಿಗಳ ಅರಮನೆಗೆ ಹೋಗಲು ಹೇಳಿ. ತಪ್ಪಿದರೆ ನಿಮ್ಮ ರಾಜ್ಯ ಕೈತಪ್ಪಿ ಹೋಗುತ್ತದೆ” ಎಂದು ಹೇಳಿದರು. ರಾಜನು ರೈತನನ್ನು ಕರೆಸಿ ವಿಚಾರಿಸಿದಾಗ ಅವನು ಸತ್ಯ ವಿಷಯವನ್ನು ಮುಚ್ಚಿಡದೆ ಹೇಳಿದ. ತನ್ನ ಮಗಳನ್ನು ಚಕ್ರವರ್ತಿಯ ಅರಮನೆಗೆ ಕಳುಹಿಸಿದ. ಜಾಣ ಹುಡುಗಿ ರಾಣಿಯಾಗಿ ಸುಖವಾಗಿದ್ದಳು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next