ಮೈಸೂರು: ಚೀನಾದ ಆಕ್ರಮಣದಿಂದ ನೆಲೆ ಕಳೆದು ಕೊಂಡು ನಿರಾಶ್ರಿತರಾಗಿ ಬಂದು ಕನ್ನಡದ ನೆಲದಲ್ಲಿ ಅಸ್ತಿತ್ವ ಕಂಡುಕೊಂಡ ಟಿಬೆಟಿಯನ್ನರ ಆಚಾರ – ವಿಚಾರ – ಸಂಪ್ರದಾಯಗಳು ಭಿನ್ನವಾದರೂ ವ್ಯಾವ ಹಾರಿಕವಾಗಿ ಕನ್ನಡಿಗರೇ ಆಗಿ ಸುಲಲಿತವಾಗಿ ಕನ್ನಡ ಮಾತನಾಡುತ್ತಾ ಅಚ್ಚರಿ ಹುಟ್ಟಿಸಿದ್ದಾರೆ.
1959-60ರಲ್ಲಿ ನಿರಾಶ್ರಿತರಾಗಿ ಬಂದ ಟಿಬೆಟಿ ಯನ್ನರಿಗೆ ಭಾರತ ಸರ್ಕಾರ ಕರ್ನಾಟಕದ ವಿವಿಧೆಡೆ ಆಶ್ರಯ ಕಲ್ಪಿಸಿದ್ದು, ಮುಂಡಗೋಡು, ಒಡೆಯರ ಪಾಳ್ಯ, ಗುರುಪುರ, ಆನೆ ಚೌಕೂರು ಮೊದಲಾ ದೆಢೆಗಳಲ್ಲಿ ಸಣ್ಣಪುಟ್ಟ ನಿರಾಶ್ರಿತರ ಶಿಬಿರ (ಟಿಬೆಟಿಯನ್ ಕ್ಯಾಂಪ್)ಗಳಿದ್ದರೆ, ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲೂಕಿನಲ್ಲಿರುವ ಬೈಲುಕುಪ್ಪೆ ಟಿಬೆಟಿಯನ್ನರ ಶಿಬಿರ ದೇಶದಲ್ಲೇ ಅತಿದೊಡ್ಡ ಶಿಬಿರ ಎನಿಸಿದೆ. ಟಿಬೆಟ್ ನಿಂದ ಹೊರಗಡೆ ಧರ್ಮಶಾಲಾ ನಂತರ ಅತಿ ಹೆಚ್ಚು ಟಿಬೆಟಿಯನ್ನರು ಬೈಲುಕುಪ್ಪೆಯಲ್ಲಿ ಆಶ್ರಯಪಡೆದಿದ್ದು, ಕೃಷಿ ಮತ್ತು ಹೈನುಗಾರಿಕೆಯನ್ನೇ ಪ್ರಧಾನ ಕಸುಬಾಗಿಸಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಆಧುನಿಕ ತಾಂತ್ರಿ ಕತೆಯನ್ನು ಬಹುಬೇಗ ಅಳವಡಿಸಿಕೊಳ್ಳುವುದರಿಂದ ಬೈಲುಕುಪ್ಪೆಯಲ್ಲಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮೊದ ಲಾದ ಕೃಷಿ ಯಂತ್ರೋಪಕರಣಗಳನ್ನು ಯಥೇಚ್ಚವಾಗಿ ಕಾಣಬಹುದು.
ಇವುಗಳ ನಿರ್ವಹಣೆಗಾಗಿಯೇ ಸೊಸೈಟಿಯನ್ನೂ ಸ್ಥಾಪಿಸಿಕೊಂಡಿದ್ದಾರೆ. ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಸಲುವಾಗಿ ಕರ್ನಾಟಕ ಸರ್ಕಾರ 1960ರಲ್ಲಿ 3 ಸಾವಿರ ಎಕರೆ ಭೂಮಿ ನೀಡಿತ್ತು. ಆಶ್ರಯ ಕಲ್ಪಿಸುವ ಜೊತೆಗೆ ನಿರಾಶ್ರಿತರ ಮಕ್ಕಳಿಗಾಗಿ ಭಾರತ ಸರ್ಕಾರ ವಿಶೇಷ ಶಾಲೆ ತೆರೆದು ಉಚಿತ ಶಿಕ್ಷಣ ಒದಗಿಸಿರುವುದಲ್ಲದೇ, ಆರೋಗ್ಯ ಕೇಂದ್ರ, ಸ್ಕಾಲರ್‌ಶಿಪ್ ಮಾತ್ರವಲ್ಲದೆ, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಪ್ರವೇಶಾತಿ ಯಲ್ಲೂ ಟಿಬೆಟಿಯನ್ನರಿಗೆ ಸೀಟು ಮೀಸಲಿಡಲಾಗುತ್ತಿದೆ. ಸರ್ಕಾರ ನೀಡಿರುವ ಭೂಮಿಯಲ್ಲಿ ನಿರಾಶ್ರಿತರ ಪ್ರತಿ ಕುಟುಂಬಕ್ಕೆ ಸುಮಾರು 4 ಎಕರೆ ಭೂಮಿ ನೀಡಿದ್ದು, ಇದರ ಜೊತೆಗೆ ಸುತ್ತಮುತ್ತಲಿನ ಗ್ರಾಮ ಗಳವರ ಜಮೀನನ್ನು ಗುತ್ತಿಗೆ ಪಡೆದು ಮೆಕ್ಕೆ ಜೋಳ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವಲ್ಲಿ ಪುರುಷರಷ್ಟೇ ಟಿಬೆಟಿಯನ್ ಮಹಿಳೆಯರೂ ಶ್ರಮಜೀವಿಗಳಾಗಿ ದುಡಿಯುತ್ತಾರೆ. ಟಿಬೆಟಿಯನ್ ನಿರಾಶ್ರಿತರಿಗೆ ಭಾರತ ಆಶ್ರಯ ಕಲ್ಪಿಸಿ ಬದುಕಲು ವ್ಯವಸ್ಥೆ ಮಾಡಿಕೊಟ್ಟಿದ್ದು, ಅವರಿಗೆ ಆಧಾರ್, ಪಡಿತರ ಚೀಟಿ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನೂ ಒದಗಿಸುತ್ತಿದೆ. ಆದರೆ, ಭಾರತದ ಪೌರತ್ವ ಹೊಂದಿಲ್ಲದ ಕಾರಣ ಅವರಿಗೆ ಜಮೀನಿನ ಮಾಲೀಕತ್ವ ಇಲ್ಲ.
ಮೆಕ್ಕೆಜೋಳ: ವರ್ಜೀನಿಯಾ ತಂಬಾಕು ಪಿರಿಯಾ ಪಟ್ಟಣ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ವ್ಯಾಪಿಸಿದ್ದರೂ ಟಿಬೆಟಿ ಯನ್ನರು ಮಾತ್ರ ಆಹಾರ ಬೆಳೆ ಮೆಕ್ಕೆಜೋಳ ವನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಟಿಬೆಟ್ ಕ್ಯಾಂಪ್‌ನಲ್ಲಿ ಹೋಟೆಲ್, ಅಂಗಡಿಗಳನ್ನು ತೆರೆದು, ಈ ಭಾಗದ ವಾರದ ಸಂತೆಗಳಲ್ಲಿ ಉಣ್ಣೆಯ ಸ್ವೆಟರ್, ಜೀನ್ಸ್ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ ಕೃಷಿ, ಹೈನುಗಾರಿಕೆ ಜೊತೆಗೆ ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದಾರೆ.
ಕನ್ನಡ ಸಲೀಸು: ಟಿಬೆಟಿಯನ್ ಕ್ಯಾಂಪ್‌ನ ಶಾಲೆಗಳಲ್ಲಿ ಕೇಂದ್ರಿಯ ಪಠ್ಯಕ್ರಮ, ಅವರ ಮಾನೆಸ್ಟ್ರಿಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಡಿಸುತ್ತಿದ್ದರೂ ಸುತ್ತ ಮುತ್ತಲಿನ ಹಳ್ಳಿಗಳ ಕನ್ನಡಿಗರ ಜೊತೆಗೆ ಸುಲಲಿತವಾಗಿ ಕನ್ನಡ ಮಾತನ್ನಾಡುತ್ತಾ ವ್ಯವಹಾರಿಕವಾಗಿ ಲೀಲಾ ಜಾಲವಾಗಿ ಕನ್ನಡ ಬಳಸುತ್ತಾ ಕನ್ನಡಿಗರ ಮನ ಗೆದ್ದಿದ್ದಾರೆ. ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ಬರುವ ಬೈಲುಕುಪ್ಪೆ ವಾಣಿಜ್ಯ ಉದ್ದೇಶದಿಂದ ಸಾಕಷ್ಟು ಬೆಳೆದಿದೆ. ಇದರಿಂದಾಗಿಯೇ ಈ ಭಾಗದಲ್ಲಿ ಕನ್ನಡಿಗರು ಮತ್ತು ಟಿಬೆಟಿಯನ್ನರ ನಡುವೆ ಅಂತಹ ವ್ಯತ್ಯಾಸ ಕಾಣುವುದಿಲ್ಲ. ಕನ್ನಡಿಗರೊಂದಿಗೆ ಬೆರೆತು ಹೋಗಿದ್ದಾರೆ ಎನ್ನುತ್ತಾರೆ ಇಂಡೋ – ಟಿಬೆಟಿಯನ್ ಫ್ರೆಂಡ್‌ಶಿಪ್ ಸೊಸೈಟಿ ಅಧ್ಯಕ್ಷರಾದ ಹಿರಿಯ ವಕೀಲ ಬಿ.ವಿ.ಜವರೇಗೌಡ.
ಕನ್ನಡಿಗರು ಮತ್ತು ಟಿಬೆಟಿಯನ್ನರ ನಡುವೆ ಪರಸ್ಪರ ಸ್ನೇಹ, ಸೌಹಾರ್ದ ವಾತಾವರಣ ಮೂಡಿಸಲು ಈ ಸೊಸೈಟಿಯನ್ನು ಹುಟ್ಟುಹಾಕಲಾಗಿದೆ. ನಮ್ಮ ಜನರ ಸಂಸ್ಕೃತಿಯನ್ನು ವಿರೋಧಿಸದೆ ನಮ್ಮ ಜನರ ಜೊತೆಗೆ ಬೆರೆತು ಸಹಬಾಳ್ವೆ ನಡೆಸುತ್ತಾ ಬಂದಿದ್ದಾರೆ. ನಮ್ಮ ಸಮಸ್ಯೆಗೆ ಅವರು, ಅವರ ಸಮಸ್ಯೆಗೆ ನಾವು ಸ್ಪಂದಿಸುತ್ತಾ ಬಂದಿದ್ದೇವೆ. ಹೀಗಾಗಿ ಇಲ್ಲಿ ಕನ್ನಡಿಗರು ಮತ್ತು ಟಿಬೆಟಿಯನ್ನರ ನಡುವೆ ಅಂತಹ ವ್ಯತ್ಯಾಸ ಕಾಣುವುದಿಲ್ಲ.
ಫ್ರೆಂಡ್‌ಶಿಪ್ ಸೊಸೈಟಿಯಿಂದ ಆಗಾಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವರ ಹೋರಾಟಗಳಲ್ಲಿ ನಾವೂ ಭಾಗಿ ಯಾಗುತ್ತಾ ಬಂದಿದ್ದೇವೆ. ಇತ್ತೀಚೆಗೆ ಉಂಟಾದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲೂ ಟಿಬೆಟಿಯನ್ನರು ನೆರೆ ಪರಿಹಾರಕ್ಕೆ ಉದಾರವಾಗಿ ದೇಣಿಗೆ ನೀಡಿದ್ದಾರೆ ಎನ್ನುತ್ತಾರೆ ಬಿವಿಜೆ.
ಪ್ರವಾಸಿ ತಾಣ: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಮಾನೆಸ್ಟ್ರಿಗಳು, ಅದರಲ್ಲೂ ಪ್ರಮುಖವಾಗಿ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡದೆ ಮುಂದೆ ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ.
ಟಿಬೆಟಿಯನ್ನರು ವ್ಯಾವ ಹಾರಿಕವಾಗಿ ಕನ್ನಡವನ್ನು ಕಲಿತಿದ್ದಾರೆ. ಇಲ್ಲಿನ ನೆಲ – ಜಲ ವನ್ನು ಬಳಸಿಕೊಂಡು ಬದುಕು ಕಟ್ಟಿ ಕೊಂಡಿರುವ ಅವರು ಕನ್ನಡವನ್ನು ಆಡುಭಾಷೆ ಯಾಗಷ್ಟೇ ಅಲ್ಲ, ಅವರ ಶಾಲೆಗಳಲ್ಲೂ ಕನ್ನಡ ಕಲಿಸುವಂತಾಗಬೇಕು.
–ಬಿ.ವಿ.ಜವರೇಗೌಡ, ಅಧ್ಯಕ್ಷರು, ಇಂಡೋ – ಟಿಬೇಟಿಯನ್ ಫ್ರೆಂಡ್‌ಶಿಪ್ ಸೊಸೈಟಿ
-ಗಿರೀಶ್ ಹುಣಸೂರು