ಕೊಪ್ಪಳ: ತುಂಗಭದ್ರಾ ಜಲಾಶಯ ಒಳ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ 4 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಹೆಚ್ಚಿನ ಪ್ರಮಾಣ ನೀರು ಹರಿಸುವ ಸಾಧ್ಯತೆಯಿದ್ದು, ನದಿಪಾತ್ರದ ಜನರಿಗೆ ಕಟ್ಟೆಚ್ಚರ ವಹಿಸುವಂತೆ ತುಂಗಭದ್ರಾ ಡ್ಯಾಂ ನೀರಾವರಿ ಇಲಾಖೆ ಎಚ್ಚರಿಕೆ ನೀಡಿದೆ.
ಈ ಕುರಿತು ಆಯಾ ಜಿಲ್ಲಾಧಿಕಾರಿಗಳಿಗೂ ಮಾಹಿತಿ ರವಾನೆ ಮಾಡಿದೆ. ಮಲೆನಾಡು ಭಾಗದಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಒಳ ಹರಿವು ಹೆಚ್ಚಾಗುತ್ತಿದೆ. ಡ್ಯಾಂ ಸಂಗ್ರಹ ಸಾಮರ್ಥ್ಯ 133 ಟಿಎಂಸಿ ಅಡಿ. ಆದರೆ ಐದು ದಶಕದಿಂದ ತುಂಬಿರುವ ಹೂಳಿನಿಂದಾಗಿ ಸಂಗ್ರಹಣಾ ಸಾಮರ್ಥ್ಯ 100 ಟಿಎಂಸಿ ಅಡಿಗೆ ಬಂದು ತಲುಪಿದೆ. ಕೆಲ ವರ್ಷಗಳಿಂದ ಕುಡಿಯುವ ನೀರಿಗೂ ಅಭಾವ ಎದುರಾಗಿತ್ತು. ಆದರೆ ಕಳೆದ ವರ್ಷ ಡ್ಯಾಂಗೆ 400 ಟಿಎಂಸಿ ಅಡಿಯಷ್ಟು ನೀರು ಹರಿದು ಬಂದಿತ್ತು. ಆದರೆ ಡ್ಯಾಂ ಸಾಮರ್ಥ್ಯಕ್ಕೆ ಅನುಸಾರ 100 ಟಿಎಂಸಿ ಅಡಿ ಸಂಗ್ರಹಿಸಿ ಉಳಿದ ನೀರನ್ನು ನದಿಪಾತ್ರಗಳಿಗೆ ಹರಿ ಬಿಡಲಾಗಿತ್ತು. ಈ ವರ್ಷವೂ ಅದೇ ಮುನ್ಸೂಚನೆ ಕಾಣುತ್ತಿದೆ.
ಪ್ರಸಕ್ತ ಆ.16ಕ್ಕೆ ಜಲಾಶಯದ ಮಟ್ಟ 1632.20 ರಷ್ಟಿದ್ದು ಭರ್ತಿಗೆ ಒಂದು ಅಡಿ ಮಾತ್ರ ಬಾಕಿಯಿದೆ. ಒಳ ಹರಿವಿನ ಪ್ರಮಾಣ 33,737 ಕ್ಯೂಸೆಕ್‌ನಷ್ಟಿದೆ. ಇನ್ನೂ ಡ್ಯಾಂನಲ್ಲಿ 97.777 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇನ್ನೂ 3 ಟಿಎಂಸಿ ಅಡಿ ನೀರು ಸಂಗ್ರಹವಾದರೆ ಡ್ಯಾಂ ಭರ್ತಿಯಾಗಲಿದೆ. ಆದರೆ ಡ್ಯಾಂನಲ್ಲಿ 98 ಅಥವಾ 99 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದ್ದಂತೆ ಒಳ ಹರಿವಿನ ಲೆಕ್ಕಾಚಾರದ ಆಧಾರದ ಮೇಲೆ ಡ್ಯಾಂನಿಂದ ನೀರು ಹರಿಬಿಡಲಾಗುತ್ತಿದೆ. ಹಾಗಾಗಿ ತುಂಗಭದ್ರಾ ನೀರಾವರಿ ಇಲಾಖೆ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಆಂಧ್ರ ಪ್ರದೇಶದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಡ್ಯಾಂನಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗುವುದು. ಹಾಗಾಗಿ ನದಿ ದಡದ ಹಳ್ಳಿಗಳ ಜನರಿಗೆ ನೀರಿಗೆ ಇಳಿಯದಂತೆ, ನದಿ ತಟಕ್ಕೆ ಧಾವಿಸದಂತೆ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದು, ಕೊಪ್ಪಳ ಜಿಲ್ಲಾಡಳಿತವು ಈಗಾಗಲೆ 40 ಹಳ್ಳಿಗಳ ಜನರಿಗೆ ಮುನ್ನೆಚ್ಚರಿಕೆ ನೀಡಿದೆ.
ಜಲಾಶಯದ ಒಳ ಹರಿವು 30 ಸಾವಿರ ಆತಂಕ ಸೃಷ್ಟಿಸಿದ ಜಿಟಿ ಜಿಟಿ ಮಳೆ ಕ್ಯೂಸೆಕ್‌ನಷ್ಟಿದೆ. ಹಾಗಾಗಿ ಡ್ಯಾಂ ಭರ್ತಿಗೆ ಇನ್ನೂ 3 ಟಿಎಂಸಿ ಅಡಿ ಬಾಕಿಯಿದ್ದು, ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ನದಿಪಾತ್ರದ 40 ಹಳ್ಳಿಗಳ ಜನರಿಗೆ ಕಟ್ಟೆಚ್ಚರ ವಹಿಸಲು ಡಂಗುರ ಸಾರಿಸಿದ್ದೇವೆ. ಜನರು ಸುರಕ್ಷಿತ ಸ್ಥಳದಲ್ಲಿರಬೇಕು. ಡ್ಯಾಂ ಅಧಿ ಕಾರಿಗಳ ಜೊತೆ ದಿನಕ್ಕೆ 2 ಬಾರಿ ಮಾಹಿತಿ ಪಡೆಯುತ್ತಿದ್ದೇನೆ.
-ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ