Advertisement

ಚಿಂಚೋಳಿಯಲ್ಲಿ ರಭಸದ ಮಳೆ: ಜನಜೀವನ ಅಸ್ತವ್ಯಸ

10:57 AM Jun 10, 2018 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಶುಕ್ರವಾರ ಸಂಜೆ ವೇಳೆ ಸಿಡಿಲು, ಗುಡುಗು-ಮಿಂಚಿನ ಆರ್ಭಟದಿಂದ ಕೂಡಿದ ರಭಸದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ತಾಲೂಕಿನಲ್ಲಿ ಒಟ್ಟು 314 ಮಿಲಿ ಮೀಟರ್‌ ದಾಖಲೆ ಮಳೆ ಆಗಿದೆ. ಮುಲ್ಲಾಮಾರಿ ಜಲಾಶಯ ಮತ್ತು ಸಣ್ಣ ನೀರಾವರಿ ಕೆರೆಗಳು ಭರ್ತಿಗೊಳ್ಳುತ್ತಿವೆ. ಪಟ್ಟಣದಲ್ಲಿ ಒಂದೇ ದಿನದಲ್ಲಿ 65.5 ಮಿ.ಮೀ ದಾಖಲೆ ಮಳೆ ಸುರಿದಿದೆ.

Advertisement

ಕೋಡ್ಲಿಯಲ್ಲಿ 48.5 ಮಿ.ಮೀ, ಸುಲೇಪೇಟ 47.2 ಮಿ.ಮೀ, ಕುಂಚಾವರಂ 20.4 ಮಿ.ಮೀ, ಐನಾಪುರ 52.4 ಮಿ.ಮೀ, ಚಿಮ್ಮನಚೋಡ 35.2 ಮಿ.ಮೀ, ನಿಡಗುಂದಾ 45 ಮಿ.ಮೀ ಮಳೆ ಆಗಿದೆ. ತಾಲೂಕಿನಲ್ಲಿ ರಭಸದಿಂದ ಕೂಡಿದ ಮಳೆ ಆಗುತ್ತಿರುವುದರಿಂದ ಕೊಟಗಾ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಂದಾಪುರ, ಗರಗಪಳ್ಳಿ, ಪೋಲಕಪಳ್ಳಿ ಗ್ರಾಮಗಳ ಹತ್ತಿರ ಹರಿಯುವ ಮುಲ್ಲಾಮಾರಿ ನದಿಗೆ ಕಟ್ಟಿದ ಬ್ರಿಡ್ಜ್ ಕಮ್‌ ಬ್ಯಾರೇಜಿಗೆ ಅಳವಡಿಸಿದ ಎಲ್ಲ ಗೇಟುಗಳನ್ನು ಮೇಲೆ ಎತ್ತಲಾಗಿದೆ.

ಕೋಡ್ಲಿ, ಸಾಲೇಬೀರನಳ್ಳಿ, ಚಿಕ್ಕನಿಂಗದಳ್ಳಿ, ಹೂಡದಳ್ಳಿ, ದೋಟಿಕೊಳ, ಹುಲಸಗೂಡ, ಧರ್ಮಸಾಗರ, ಮುಕರಂಬ, ತುಮಕುಂಟಾ, ನಾಗಾಇದಲಾಯಿ, ಹಸರಗುಂಡಗಿ, ಐನಾಪುರ, ಚಂದನಕೇರಾ ಸಣ್ಣ ನೀರಾವರಿ ಕೆರೆಗಳಿಗೆ ಅಲ್ಪ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಶರಣಬಸಪ್ಪ ಕೇಶ್ವಾರ ತಿಳಿಸಿದ್ದಾರೆ. 

ತಾಲೂಕಿನ ಮಧ್ಯಮ ನೀರಾವರಿ ಯೋಜನೆ ಕೆಳದಂಡೆ ಮುಲ್ಲಾಮಾರಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ
ವ್ಯಾಪಕ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ ಶುಕ್ರವಾರ 1742 ಕ್ಯುಸೆಕ್‌, ಶನಿವಾರ ಬೆಳಗ್ಗೆ 562 ಕುಸೆಕ್‌ ಒಳಹರಿವು ಇತ್ತು. ಜಲಾಶಯದ ಗರಿಷ್ಠ ನೀರಿನಮಟ್ಟ 491ಮೀಟರ್‌ ಇದ್ದು, 489.33ಮೀಟರ್‌ ಕನಿಷ್ಠಮಟ್ಟವಿದೆ ಎಂದು ಜಲಾಶಯದ ಜೆ.ಇ ಹಣಮಂತರಾವ್‌ ತಿಳಿಸಿದ್ದಾರೆ.

ತಾಲೂಕಿನಲ್ಲಿ ರಭಸದ ಮಳೆ ಆಗುತ್ತಿರುವುದರಿಂದ ಚಿಮ್ಮನಚೋಡ- ಹಸರಗುಂಡಗಿ ಗ್ರಾಮಗಳಿಗೆ ಹೋಗುವ
ರಸ್ತೆಯ ಸಣ್ಣ ಸೇತುವೆ ಕೊಚ್ಚಿಕೊಂಡು ಹೋಗಿ, ಮಧ್ಯೆ ದೊಡ್ಡದಾದ ತೆಗ್ಗು ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಹಸರಗುಂಡಗಿ ಗ್ರಾಮಸ್ಥರಾದ ಕಾಶಿನಾಥ ಸಿಂಧೆ, ಜಗದೇವ ಗೌತಮ ತಿಳಿಸಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನ ರೋಹಿಣಿ ಮಳೆ ಅಬ್ಬರ ದಿನದಿನಕ್ಕೆ ಹೆಚ್ಚುತ್ತಿದ್ದು ಬಿತ್ತನೆಗೆ ಅನುಕೂಲವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next