Advertisement

ರಾಜ್ಯದಲ್ಲಿ ಸಿಡಿಲಾಘಾತಕ್ಕೆ ಹತ್ತು ವರ್ಷದಲ್ಲಿ 1096 ಜನ ಬಲಿ!

11:23 PM Oct 11, 2019 | Lakshmi GovindaRaju |

ಕಲಬುರಗಿ: ಇತ್ತೀಚೆಗೆ ಮಳೆ ಅಬ್ಬರಕ್ಕಿಂತ ಸಿಡಿಲಬ್ಬರವೇ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಸಿಡಿಲಿಗೆ ಜನ-ಜಾನುವಾರುಗಳ ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಸಿಡಿಲಿನ ಹೊಡೆತ ಜೋರಾಗಿದೆ.

Advertisement

ಕಳೆದ ಅ.10ರಂದು ಒಂದೇ ದಿನ ಕಲಬುರಗಿ ಜಿಲ್ಲೆಯಲ್ಲಿ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. ಹಿಂದಿನ ವರ್ಷಗಳಲ್ಲಿ 8ರಿಂದ 10 ಜನರು ಮೃತಪಡುತ್ತಿದ್ದರೆ, ಈ ವರ್ಷ ಇಲ್ಲಿವರೆಗೆ 17 ಮಂದಿ ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಳೆದ ಮಾರ್ಚ್‌ನಿಂದ ಇಲ್ಲಿವರೆಗೆ 65ಕ್ಕೂ ಹೆಚ್ಚು ಜನರು ಸಿಡಿಲಿಗೆ ಮೃತಪಟ್ಟಿದ್ದಾರೆ. ಇದರಲ್ಲಿ ಶೇ.70 ಉತ್ತರ ಕರ್ನಾಟಕ ಭಾಗದವರೇ ಎಂಬುದು ಗಮನಾರ್ಹ. ರಾಜ್ಯದಲ್ಲಿ ಕಳೆದ 10 ವರ್ಷದಲ್ಲಿ ಒಟ್ಟು 1096 ಜನ ಬಲಿಯಾಗಿದ್ದಾರೆ.

ಕರಾವಳಿ, ಮೈಸೂರು, ಬೆಳಗಾವಿ ಭಾಗದಲ್ಲಿ ಮಳೆ ಜಾಸ್ತಿಯಾದರೂ ಸಿಡಿಲು ಕಡಿಮೆ. ಉತ್ತರ ಕರ್ನಾಟಕದ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಮೃತಪಡುತ್ತಿರುವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಳೆಗಾಲದ ವೇಳೆ ರೈತರು, ಕೂಲಿಕಾರರು ಕೃಷಿ ಕಾಯಕದಲ್ಲಿ ತೊಡಗಿಸಿ ಕೊಂಡಿ ರುತ್ತಾರೆ. ಮಳೆಗೆ ಆಶ್ರಯ ಪಡೆಯಲೆಂದು ಗಿಡ ಮರಗಳಡಿ ನಿಂತಾಗ ಸಿಡಿಲಿಗೆ ಬಲಿಯಾಗುತ್ತಿದ್ದಾರೆ.

ಸಿಡಿಲು ಹೆಚ್ಚಳಕ್ಕೆ ಕಾರಣ ಏನು?: ಪ್ರತಿ ವರ್ಷ ಜಗತ್ತಿನಲ್ಲಿ ಸರಾಸರಿ 24 ಸಾವಿರ ಜನರು ಬಲಿಯಾ ಗುತ್ತಿದ್ದು, ಏಷ್ಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಸಿಡಿಲಿನ ತೀವ್ರತೆ ಹೆಚ್ಚು ಇರುತ್ತದೆ. ಭಾರತದಲ್ಲಿ ವರ್ಷಕ್ಕೆ 2500-3000 ಜನರು ಸಿಡಿಲಿಗೆ ಬಲಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿ ವರ್ಷ ಸರಾಸರಿ 100 ಮಂದಿ ಬಲಿಯಾಗುತ್ತಿದ್ದರೆ, 600ಕ್ಕಿಂತ ಹೆಚ್ಚು ಜಾನುವಾರುಗಳು ಸಿಡಿಲಿನಿಂದ ಮೃತ ಪಡುತ್ತಿವೆ.

ಸಾವಿನ ಪ್ರಮಾಣದಲ್ಲಿ ಶೇ.89 ಪುರುಷರು, ಶೇ.5 ಮಹಿಳೆಯರು, ಶೇ.6 ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ರೈತರು ಹಾಗೂ ಕುರಿಗಾಹಿಗಳೇ ಹೆಚ್ಚು. 2 ರಿಂದ 5 ಕಿಮೀವರೆಗೆ ಇರುವ ದೊಡ್ಡ ಮೋಡಗಳ ಘರ್ಷಣೆಯಿಂದಾಗಿ ಸಿಡಿಲು ಉಂಟಾಗುತ್ತದೆ. ಸಿಡಿಲು ಅತಿ ಹೆಚ್ಚು ಕಾಂತೀಯ ಹಾಗೂ ಉಷ್ಣ ಶಕ್ತಿ ಹೊಂದಿದ್ದು, ಮನುಷ್ಯರಿಗೆ ಹಾಗೂ ಜಾನುವಾರುಗಳಿಗೆ ಮಾರಕವಾ ಗಿದೆ ಎನ್ನುತ್ತಾರೆ ಸಿಡಿಲು ಕುರಿತಾಗಿ ಅಧ್ಯಯನ ಮಾಡಿರುವ ಪಶು ವೈದ್ಯಾಧಿಕಾರಿ ಡಾ| ಅಣ್ಣಾರಾವ್‌ ಪಾಟೀಲ.

Advertisement

ನಿಯಂತ್ರಣ ಹೇಗೆ?: ಸಿಡಿಲಿನ ಅವಘಡವು ಪ್ರಾಕೃತಿಕ ವಿಕೋಪವಾಗಿದ್ದು, ಯಾವುದೇ ರೀತಿಯ ನಿಯಂತ್ರಣ ಸಾಧ್ಯವಿಲ್ಲ. ಭೂಕಂಪ, ಮಳೆ, ಚಳಿ ರೀತಿ ಸಿಡಿಲಿನ ಮುನ್ಸೂಚನೆ ಕೊಡಲು ಸಾಧ್ಯವಿಲ್ಲ. ಇದಕ್ಕೆ ಮಿಂಚು ಬಂಧಕ ಬಳಸುವುದು ಉತ್ತಮ. ಮಿಂಚು ಬಂಧಕ ತಾಮ್ರದ ಕಡ್ಡಿಗಳಿಂದ ಮಾಡಿದ ಸಾಧನ. ಸಿಡಿಲಿನ ಕಾಂತೀಯ ಶಕ್ತಿಯನ್ನು ಭೂಮಿಗೆ ಕಳುಹಿಸಿ, ಅದರ ಶಕ್ತಿ ಕಡಿಮೆ ಮಾಡಿ ಹಾನಿ ತಪ್ಪಿಸುತ್ತದೆ. ನಗರ ಪ್ರದೇಶಗಳ ಎತ್ತರವಾದ ಕಟ್ಟಡಗಳಿಗೆ ವಿದ್ಯುತ್‌ ಪರಿವರ್ತಕಗಳಿಗೆ ಮಿಂಚುಬಂಧಕ ಅಳವಡಿಸಿರುತ್ತಾರೆ. ಈ ಕುರಿತು ಹೆಚ್ಚಿನ ಅಧ್ಯಯನದ
ಅವಶ್ಯಕತೆ ಇದೆ.

10 ವರ್ಷಗಳಲ್ಲಿ ಸಿಡಿಲಿಗೆ ಬಲಿಯಾದವರು
ವರ್ಷ ಜನರ ಸಾವು
2009 132
2010 64
2011 103
2012 90
2013 87
2014 142
2015 137
2016 104
2017 64
2018 108
2019 65

ಸಿಡಿಲು ಬಡಿದು ಮೃತಪಟ್ಟ ವಾರ್ತೆ ಕೇಳಿ ಒಂದು ಕ್ಷಣ ಮನಸ್ಸು ಘಾಸಿಗೊಳ್ಳುತ್ತದೆ. ತದನಂತರ ಸಿಡಿಲಿನ ಕುರಿತು ಎಲ್ಲೂ ಚರ್ಚೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಮುಂಜಾಗೃತೆ ವಹಿಸುವುದು ಉತ್ತಮ. ಕಳೆದ ದಶಕದಿಂದ ಸಿಡಿಲು ಕುರಿತಾಗಿ ನಾನು ಹೆಚ್ಚಿನ ಅಭ್ಯಾಸ ಮಾಡಿದ್ದು, ಹೆಚ್ಚಿನ ಸಂಶೋಧನೆ ಸೂಕ್ತವೆನಿಸುತ್ತಿದೆ.
-ಡಾ| ಅಣ್ಣಾರಾವ್‌ ಪಾಟೀಲ, ಹಿರಿಯ ಪಶು ವೈದ್ಯಾ ಧಿಕಾರಿ, ಕಲಬುರಗಿ

* ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next