ಕಟಪಾಡಿ: ಮೂಡಬೆಟ್ಟು ಗ್ರಾಮದ ಶಂಕರಪುರ ಬಳಿಯ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯೊಡತಿ ಮೂರ್ಛೆ ತಪ್ಪಿದ್ದು, ಸುಮಾರು 2 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದ ಘಟನೆಯು ಶನಿವಾರ ರಾತ್ರಿ ನಡೆದಿದೆ
ಶನಿವಾರ ರಾತ್ರಿಯ ವೇಳೆಯಲ್ಲಿ ಏಕಾಏಕಿಯಾಗಿ ಸುರಿದ ಭಾರೀ ಮಳೆ, ಗುಡುಗು, ಸಿಡಿಲು ಮಿಂಚು ಮೇಳೈಸಿದ್ದು, ಪ್ರಾರ್ಥನೆ ಪೂರೈಸಿ ಮನೆಯೊಳಗೆ ಪ್ರವೇಶಿಸಿದ ಕೆಲವೇ ಹೊತ್ತಿನಲ್ಲಿ ಈ ಘಟನೆಯು ನಡೆದಿದೆ ಎಂದು ಮನೆಯೊಡತಿ ಲೀನಾ ಡಿಸೋಜ ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ.
ತೆಂಗಿನ ಮರದಿಂದ ಇಳಿದು ಮನೆಯೊಳಗೆ ಬಡಿದ ಸಿಡಿಲು :
ಆರಂಭದಲ್ಲಿ ಮನೆಯ ಮುಂಭಾಗದ ತೆಂಗಿನ ಮರಕ್ಕೆ ಬಡಿದ ಸಿಡಿಲು ವಾಸ್ತವ್ಯವಿದ್ದ ಥಾರಸಿ ಮನೆಯ ವಿದ್ಯುತ್ ಸಂಪರ್ಕವನ್ನು ಹಾನಿಗೊಳಿಸಿದೆ. ತಮ್ಮದೇ, ಪಕ್ಕದ ಹಂಚಿನ ಮನೆಯ ವಿದ್ಯುತ್ ಸಂಪರ್ಕವೂ ಸುಟ್ಟು ಕರಕಲಾಗಿದೆ.
ಮೂರ್ಛೆ ತಪ್ಪಿದ ಮನೆಯೊಡತಿ ಲೀನಾ ಡಿಸೋಜ:
ಸಿಡಿಲು ಬಡಿದ ಕೂಡಲೇ ದೊಡ್ಡ ಶಬ್ಧ ಉಂಟಾಗಿತ್ತು. ಮನೆಯೊಳಗೆ ಕತ್ತಲು ಆವರಿಸಿತ್ತು. ಈ ಸಂದರ್ಭದಲ್ಲಿ ಮನೆಯೊಡತಿ ಸುಮಾರು 15-20 ನಿಮಿಷ ಕಾಲ ಮೂರ್ಛೆ ತಪ್ಪಿದ್ದು, ಪತಿ ಅನಿಲ್ ಗ್ಲಾ ಡ್ವಿನ್ ಡಿಸೋಜ ಕೂಡಾ ದಂಪತಿ ಸಾವರಿಸಿಕೊಳ್ಳುವಲ್ಲಿ ಅಸಹಾಯಕರಾಗಿದ್ದರು.
ಥಾರಸಿ ಮನೆಯ ಗೋಡೆ ಸಿಡಿದು ಕಂದಕ :
ಕೆಲ ಹೊತ್ತಿನ ಬಳಿಕ ಕತ್ತಲಿನ ನಡುವೆ ಟಾರ್ಚ್ ಹಿಡಿದು ನೆರೆ ಮನೆಯವರಲ್ಲಿ ಸಹಾಯ ಯಾಚಿಸಿ ಎಲ್ಲೆಡೆ ನೋಡುವಾಗ ಥಾರಸಿ ಮನೆಯ ಗೋಡೆಯು ಕೆಲ ಭಾಗದಲ್ಲಿ ಒಡೆದು ಹೋಗಿದ್ದು, ಸಿಡಿತದಿಂದ ಗೋಡೆಯ ಕಲ್ಲುಗಳು ಮೈ ಮೇಲೆ ಬಿದ್ದಿದೆ. ಮನೆಯ ಫ್ಯಾನ್‌ಗಳು, ಫ್ರಿಡ್ಜ್, ಬಲ್ಬುಗಳು, ವಿದ್ಯುತ್ ಸಂಪರ್ಕ, ಮಿಕ್ಸಿ ಎಲ್ಲಾ ಸುಟ್ಟು ಹೋಗಿದ್ದು, ಅಸ್ತ್ರ ಒಲೆ ಒಡೆದು ಹೋಗಿದೆ. ಮನೆಯ ಗೋಡೆಯಲ್ಲಿ ಎರಡು ಮೂರು ಕಡೆಗಳಲ್ಲಿ ದೊಡ್ಡ ಗಾತ್ರದ ಕಂದಕ ಸೃಷ್ಟಿಯಾಗಿದೆ. ಇನ್ವರ್ಟರ್ ಕೂಡಾ ಹಾಳಾಗಿದೆ. ವಿದ್ಯುತ್ ಸಂಪರ್ಕದ ಸ್ವಿಚ್ ಬೋರ್ಡ್, ಮೀಟರ್ ಬೋರ್ಡ್, ಪಂಪ್ ಸೆಟ್‌ನ ಸ್ವಿಚ್ ಬೋರ್ಡ್, ಬಲ್ಬ್, ವಯರಿಂಗ್ ಸಹಿತ ಎಲ್ಲವೂ ಸುಟ್ಟು ಕರಕಲಾಗಿದ್ದು ಒಂದೂವರೆ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅ. 25ರಂದು ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ
ಮನೆಯಂಗಳದಲ್ಲಿದ್ದ ತೆಂಗಿನ ಮರದ ಸಿಪ್ಪೆಯು ಎದ್ದು ಹೋಗಿದ್ದು, ಮಿಂಚು ಇಳಿದು ಬಂದ ಭಾಗವು ಸ್ಪಷ್ಟವಾಗಿ ಗೋಚರಿಸುತ್ತಿದೆ. ನೆರೆಯ ಕೆಲ ಮನೆಗಳಲ್ಲಿಯೂ ಅಲ್ಪ ಸ್ವಲ್ಪ ಹಾನಿ ಸಂಭವಿಸಿದೆ. ಈ ಘಟನೆಯಿಂದ ಮನೆಯೊಡತಿ ತನ್ನ ದೇಹದ ಒಂದು ಪಾರ್ಶ್ವದಲ್ಲಿ ತಲೆಯಿಂದ ಕಾಲಿನವರೆಗೆ ಬಲಹೀನತೆಯನ್ನು ಅನುಭವಿಸುವಂತಾಗಿದ್ದು, ಇನ್ನು ವೈದ್ಯಕೀಯ ಶುಶ್ರೂಷೆ ಪಡೆಯಬೇಕಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ
ಘಟನಾ ಸ್ಥಳಕ್ಕೆ ಕಟಪಾಡಿ ಗ್ರಾಮ ಲೆಕ್ಕಿಗ ಡೇನಿಯಲ್ ಡೊಮ್ನಿಕ್ ಡಿಸೋಜ ತೆರಳಿ ಪರಿಶೀಲನೆ ನಡೆಸಿದ್ದಾರೆ.