Advertisement

ತುಂಬೆ ಡ್ಯಾಂ ಮುಳುಗಡೆ ಪ್ರದೇಶ: ಒರತೆ ಪ್ರದೇಶಕ್ಕೆ ಸಿಕ್ಕಿಲ್ಲ ಪರಿಹಾರ

12:58 AM Feb 01, 2022 | Team Udayavani |

ಬಂಟ್ವಾಳ: ಮಂಗಳೂರು ನಗರದ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ತುಂಬೆಯಲ್ಲಿ 7 ಮೀ. ಎತ್ತರಕ್ಕೆ ನೀರು ನಿಲ್ಲಿಸುವ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ ಬಂಟ್ವಾಳ ತಾಲೂಕಿನ 4 ಗ್ರಾಮಗಳ ಸಂತ್ರಸ್ತ ರೈತರ ಕೃಷಿ ಭೂಮಿಯ ಒರತೆ ಪ್ರದೇಶ (ಸಿಪೇಜ್‌ ಎಫೆಕ್ಟೆಡ್‌ ಏರಿಯಾ)ಕ್ಕೆ ಪರಿಹಾರದ ಬೇಡಿಕೆ ಇನ್ನೂ ಈಡೇರಿಲ್ಲ. 2016ರಲ್ಲೇ ಅಂದಿನ ಜಿಲ್ಲಾಧಿಕಾರಿ ಒರತೆ ಪ್ರದೇಶದ ಸರ್ವೇಗೆ ಆದೇಶನೀಡಿ ಪರಿಹಾರದ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಸಂತ್ರಸ್ತರ ವಾದ.

Advertisement

ಅಣೆಕಟ್ಟಿನಲ್ಲಿ ಪ್ರಸ್ತುತ
6 ಮೀ. ನೀರು ನಿಲ್ಲಿಸಲಾಗಿದ್ದು, ಸಜಿಪಮುನ್ನೂರು, ಪಾಣೆ ಮಂಗಳೂರು, ಬಿ.ಮೂಡ ಹಾಗೂ ಕಳ್ಳಿಗೆ ಗ್ರಾಮ ಗಳ 67.51 ಎಕರೆ ಪ್ರದೇಶ ಮುಳುಗಡೆ ಯಾಗಿದೆ. ಅದಕ್ಕಾಗಿ ಸುಮಾರು 17.5 ಕೋ.ರೂ. ಪರಿಹಾರ ಬಿಡುಗಡೆಗೊಂಡು ಶೇ. 80ರಷ್ಟು ಮಂದಿಯ ಕೈಸೇರಿದೆ.

2016ರಲ್ಲಿ ಅಂದಿನ ಡಿಸಿ ಆದೇಶ
ಹೊಸ ಅಣೆಕಟ್ಟು ನಿರ್ಮಾಣ 2004ರಲ್ಲಿ ಆರಂಭಗೊಂಡಿದ್ದರೂ ಹಲವು ಕಾರಣಗಳಿಂದ ವಿಳಂಬವಾಗಿತ್ತು. 2016ರಲ್ಲಿ ಮುಳುಗಡೆ ಪ್ರದೇಶದ ಸರ್ವೇಗೆ ಅಧಿಕಾರಿಗಳು ಬಂದಾಗ ಸಜೀಪಮುನ್ನೂರಿನಲ್ಲಿ ಕೃಷಿಕರು ತಡೆ ಒಡ್ಡಿದ್ದರು. ಬಳಿಕ ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮಲಾಯಿಬೆಟ್ಟಿ ನಲ್ಲಿ ರೈತರ ಸಭೆ ನಡೆಸಿ ಕೇಂದ್ರ ಜಲ ಆಯೋಗ(ಸೆಂಟ್ರಲ್‌ ವಾಟರ್‌ ಕಮಿಷನ್‌)ದ ನಿರ್ದೇಶನ ದಂತೆ ಒರತೆ ಪ್ರದೇಶದ ಸರ್ವೇಗೆ ಆದೇಶ ನೀಡಿ ಲಿಖಿತ ಪ್ರತಿಯನ್ನು ರೈತರಿಗೆ ಒದಗಿಸಿದ್ದರು.

ಅಂದರೆ ಅಣೆಕಟ್ಟಿನಲ್ಲಿ 7 ಮೀ. ಎತ್ತರಕ್ಕೆ ನೀರು ನಿಂತರೆ ಹೆಚ್ಚುವರಿ 1 ಮೀಟರ್‌ ಎತ್ತರಕ್ಕೆ ಒರತೆ ಪ್ರದೇಶವಿರುತ್ತದೆ. ಹೀಗಾಗಿ ಸಮುದ್ರ ಮಟ್ಟದಿಂದ 8 ಮೀ. ಎತ್ತರಕ್ಕೆ ಮುಳುಗಡೆ ಪ್ರದೇಶವನ್ನು ಅಲ್ಪಾವಧಿ ಟೆಂಡರ್‌ನಲ್ಲಿ ನುರಿತ ಸರ್ವೇ ಸಂಸ್ಥೆಯ ಮೂಲಕ ನಡೆಸುವಂತೆ ಆದೇಶ ನೀಡಿದ್ದರು.

ಅಧಿವೇಶನದಲ್ಲೂ ಪ್ರಸ್ತಾವ
ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಕಳೆದ ವರ್ಷ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾವಿಸಿ ಒರತೆ ಪ್ರದೇಶ ಎಷ್ಟಿರುತ್ತದೆ, ಸರ್ವೇ ನಡೆದಿದೆಯೇ ಎಂದು ಕಂದಾಯ ಸಚಿವರನ್ನು ಪ್ರಶ್ನಿಸಿದ್ದರು. ಆಗ ಸಚಿವರು, ಸರ್ವೇ ಪೂರ್ಣಗೊಂಡಿದ್ದು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ಬಂಟ್ವಾಳ ತಹಶೀಲ್ದಾರ್‌ ಅವರಿಂದ ವರದಿ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದ್ದರು.

Advertisement

ಪರಿಹಾರ ಕೊಡುವ ನಿಟ್ಟಿನಲ್ಲಿ ಸರ್ವೇ ನಡೆಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ನಿಂತಾಗ ಎಷ್ಟು ದೂರ ಒರತೆ ನೀರು ಹೋಗುತ್ತದೆ ಎಂಬ ಮಾಹಿತಿ ಸಿಗಲಿದ್ದು, ಅದನ್ನು ಪರಿಶೀಲಿಸಿ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಜನರುದೂರು ನೀಡುವ ಪ್ರಶ್ನೆ ಬರುವುದಿಲ್ಲ.
– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

ಕೇಂದ್ರ ಜಲ ಮಂಡಳಿಯ ನಿರ್ದೇ ಶನ ದಂತೆ ಒರತೆ ಪ್ರದೇಶಕ್ಕೂ ಪರಿಹಾರ ನೀಡಬೇಕು ಎಂಬುದು ನಮ್ಮ ಬೇಡಿಕೆ. 2016ರಲ್ಲಿ ಜಿಲ್ಲಾಧಿಕಾರಿ ಆದೇಶ ವನ್ನೂ ನೀಡಿ ದ್ದರು. ಪ್ರಸ್ತುತ ಶಾಸಕರ ಬಳಿ ಪರಿಹಾರಕ್ಕೆ ಮನವಿ ನೀಡ ಲಾಗಿದ್ದು, ಸಂತ್ರಸ್ತರ ಜತೆ ಮಾತುಕತೆ ನಡೆಸಿ ಮತ್ತೆ ಸರಕಾರದ ಗಮನ ಸೆಳೆಯುವ ಭರವಸೆ ನೀಡಿದ್ದಾರೆ.
– ಎಂ. ಸುಬ್ರಹ್ಮಣ್ಯ ಭಟ್‌
ಅಧ್ಯಕ್ಷರು, ತುಂಬೆ ಡ್ಯಾಂ ಸಂತ್ರಸ್ತರ
ಹೋರಾಟ ಸಮಿತಿ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next