ತುಮಕೂರು: ಪಾಠ ಪ್ರವಚನದ ಜೊತೆಗೆ ಮಕ್ಕಳಲ್ಲಿ ಸಂವಹನಾ ಕೌಶಲ್ಯ, ತಾರ್ಕಿಕ ಚಿಂತನೆ ಹಾಗೂ ಸಂಶೋಧನಾತ್ಮಕ ಪ್ರವೃತ್ತಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಅಭಿಪ್ರಾಯಪಟ್ಟರು.
ನಗರದ ಆರ್ಯನ್ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಅವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಯುವವಿಜ್ಞಾನಿ ಸ್ಪರ್ಧೆ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ಮಕ್ಕಳು ಹೆಚ್ಚಾಗಿ ಭಾಗವಹಿಸಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆ ಮನುಷ್ಯನ ಅಗತ್ಯತೆಗಳು ಹೆಚ್ಚಿವೆ. ಮನುಷ್ಯನ ಅಗತ್ಯತೆಗಳಿಂದ ಉಂಟಾಗುವ ಸಮಸ್ಯೆ ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ. ಇದು ಶಿಕ್ಷಕರಿಂದ ಮಾತ್ರ ಸಾಧ್ಯವಿದ್ದು ಇಂತಹ ಸ್ಪರ್ಧೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು.
ಶಿಕ್ಷಣ ನಮ್ಮ ಜವಾಬ್ದಾರಿ: ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯಲಿರುವ ಘಟನೆಗಳನ್ನು ನಾವು ಮನೆಯಲ್ಲಿಯೇ ಕುಳಿತು ಟೀವಿ, ಮೊಬೈಲ್ಗಳಲ್ಲಿ ನೋಡುವಂತಹ, ತಿಳಿದುಕೊಳ್ಳುವಂತಹ ತಂತ್ರಜ್ಞಾನ ಇದೆ. ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಲೋಚಿಸುವಂತೆ ಮಾಡುವ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿ ಎಂದು ನುಡಿದರು.
ಸಾಧಿಸುವ ಛಲವಿರಲಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲಲಿತಾಕುಮಾರಿ ಮಾತನಾಡಿ, ಮಕ್ಕಳ ಸಾಧನೆಗಳನ್ನು ತಿಳಿಸುತ್ತಾ ಮಕ್ಕಳು ವೈಚಾರಿಕತೆಯನ್ನು ಬೆಳೆಸಿಕೊಂಡು ಸಾಧಿಸುವ ಛಲವನ್ನು ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಇಲಾಖೆ ಸಹಕಾರ ನೀಡಲಿ: ಅಧ್ಯಕ್ಷತೆ ವಹಿಸಿದ್ದ ಕರಾವಿಪ ಜಿಲ್ಲಾ ಅಧ್ಯಕ್ಷ ಕ್ಯಾಲೆಂಡರ್ ಶಿವಕುಮಾರ್ ಮಾತನಾಡಿ, ಶಾಲಾ ಹಂತದಿಂದಲೇ ವಿದ್ಯಾರ್ಥಿಗಳು ಚಿಂತನಾಶೀಲತೆ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಕರಾವಿಪ ಹಮ್ಮಿಕೊಳ್ಳುತ್ತದೆ. ಶಿಕ್ಷಣ ಇಲಾಖೆ ಇದೇ ರೀತಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿ ವಿಜ್ಞಾನ ವಿಷಯ ಪರಿವೀಕ್ಷಕಿ ಪ್ರತಿಭಾ, ಆರ್ಯನ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋಪಾಲ್, ಕರಾವಿಪ ಜಿಲ್ಲಾ ಖಜಾಂಚಿ ಸಿದ್ದಪ್ಪ, ಜಿಲ್ಲಾ ಕಾರ್ಯದರ್ಶಿ ವಸಂತ ಕುಮಾರ್, ಶಿಕ್ಷಕರಾದ ನಾಗೇಶ್, ಪರಮೇಶ್ವರಯ್ಯ ಉಪಸ್ಥಿತರಿದ್ದರು.