ಕೆ.ಆರ್.ಪುರ: “ಪ್ರತಿಪಕ್ಷಗಳ ಟೀಕೆ, ಅಪಪ್ರಚಾರಕ್ಕೆ ಪ್ರತಿಯಾಗಿ ನಾನು ಟೀಕೆ ಮಾಡುವುದಿಲ್ಲ. ಬದಲಾಗಿ ಅಭಿವೃದ್ಧಿ ಮೂಲಕ ಟೀಕೆಗಳಿಗೆ ಉತ್ತರ ನಿಡುತ್ತೇನೆ,” ಎಂದು ಶಾಸಕ ಬಿ.ಎ.ಬಸವರಾಜ್ ಹೇಳಿದ್ದಾರೆ. ರಾಮಮೂರ್ತಿನಗರದ ಹೊರವರ್ತುಲ ರಸ್ತೆಯಲ್ಲಿ ರೈಲ್ವೆ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದರು.
“ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಪ್ರತಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುವುದು ಸಹಜ. ನಾನು ಅಭಿವೃದ್ಧಿಯಲ್ಲಿ ನಂಬಿಕೆಯಿಟ್ಟಿದ್ದೇನೆ. ಟೀಕೆ ಮಾಡಲಾರೆ,” ಎಂದರು. “ರಾಮಮೂರ್ತಿನಗರ ಮೇಲ್ಸೇತುವೆ ಇಲ್ಲಿನ ಬಹುದಿನಗಳ ಬೇಡಿಕೆಯಾಗಿತ್ತು.
ಈ ಭಾಗದ ಸಂಚಾರದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದರು. ಇದಕ್ಕೆ ಮುಕ್ತಿ ನೀಡಲು ರಾಜ್ಯ ಸರ್ಕಾರದ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. 135 ಅಡಿ ಉದ್ದದ 40 ಅಡಿ ಅಗಲದ ಈ ರೈಲ್ವೆ ಮೇಲ್ಸೇತುವೆ 17ಕೋಟಿ ವೆಚ್ಚದ ನಿರ್ಮಾಣವಾಗುತ್ತಿದೆ.
ಕಾಮಗಾರಿ ಹೊಣೆಯನ್ನು ರೈಲ್ವೆಇಲಾಖೆ ವಹಿಸಿಕೊಳ್ಳಲಿದೆ. ರಾಮಮೂರ್ತಿನಗರ, ಟಿ.ಸಿಪಾಳ್ಯ, ಕಲ್ಕೆರೆ, ಶಾಂತಿ ಬಡಾವಣೆ, ಚನ್ನಸಂದ್ರ, ಕನಕನಗರ ಸೇರಿದಂತೆಹಲವು ಪ್ರದೇಶಗಳ ಜನರಿಗೆ ಇದರಿಂದ ಅನುಕೂಲ ವಾಗಲಿದೆ,” ಎಂದು ತಿಳಿಸಿದರು.
ಬಿಬಿಎಂಪಿ ಅಯುಕ್ತೆ ವಾಸಂತಿ ಅಮರ್, ಬಿಡಿಎ ಅಭಿಯಂತರ ನಾಗರಾಜ್, ಬಿಡಿಎ ಸದಸ್ಯ ಜಗದೀಶ್‌ರೆಡ್ಡಿ, ಪಾಲಿಕೆ ಸದಸ್ಯ ವಿ.ಸುರೇಶ್, ಶ್ರೀಕಾಂತ್, ಜಯಪ್ರಕಾಶ್, ಎಸ್,ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಸೈಯ್ಯದ್ ಮಸ್ತಾನ್ ಸೇರಿದಂತೆ ರೈಲ್ವೆಇಲಾಖೆ ಹಾಗೂ ಬಿಡಿಎ ಅಧಿಕಾರಿಗಳು ಇದ್ದರು.