ಕೊಪ್ಪಳ: ದೆಹಲಿಯ ನಿಜಾಮುದ್ದೀನ್ ಜಮಾತ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ 20 ಜನರ ಗಂಟಲು ದ್ರವ್ಯ ಪಡೆದು ಜಿಲ್ಲಾಡಳಿತವು ಮುಂಜಾಗ್ರತೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ. ಇವರ ಆರೋಗ್ಯದಲ್ಲಿ ಯಾವ ಲಕ್ಷಣಗಳಿಲ್ಲದಿದ್ದರೂ ಎಚ್ಚರಿಕೆ ವಹಿಸಿದೆ. ಇನ್ನೂ ಜಿಲ್ಲೆಯಲ್ಲಿ ಲಾಕ್‌ಡೌನ್ ನಿಷೇಧಾಜ್ಞೆ ಜಾರಿಯಿದ್ದರೂ ಮುಸ್ಲಿಂ ಸಮಾಜದ ಕೆಲವರು ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದು, ಅವರ ಮೇಲೆ ಪ್ರಕರಣವೂ ದಾಖಲಾಗಿದೆ.
ಹೌದು. ನಿಜಾಮುದ್ದೀನ್ ಜಮಾತ್‌ನಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚು ಕೋವಿಡ್ 19 ಸೋಂಕು ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಮೂಡಿಸಿದೆ. ರಾಜ್ಯದಿಂದ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಸರ್ಕಾರವು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಹೆಚ್ಚಿನ ಕಾಳಜಿ ವಹಿಸುವ ಜೊತೆಗೆ ಆರೋಗ್ಯ ತಪಾಸಣೆಗೂ ಮುಂದಾಗಿದೆ. ಜಿಲ್ಲೆಯ ಮಟ್ಟಿಗೆ 22 ಜನರು ದೆಹಲಿಯ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವುದು ಪೊಲೀಸ್ ಇಲಾಖೆಯಿಂದ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕ ವಲಯದಲ್ಲೂ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜನರ ಗಂಟಲು ದ್ರವ್ಯ ಪರೀಕ್ಷೆ ಮಾಡಿಸಬೇಕೆಂಬ ಒತ್ತಾಯಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾಡಳಿತವು ಮುಂಜಾಗ್ರತೆಯಿಂದ 20 ರೋಗದ ಲಕ್ಷಣಗಳು ಇಲ್ಲವಾದರೂ ಗಂಟಲು ದ್ರವ್ಯ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡಿದೆ. ಇನ್ನೂ ಪ್ರಯೋಗಾಲಯದ ವರದಿ ಬಂದಿಲ್ಲ. ವರದಿಗಾಗಿ ಕಾಯುತ್ತಿದೆ.
ಸಾಮೂಹಿಕ ಪ್ರಾರ್ಥನೆ: ದೇಶವೇ ಲಾಕ್‌ಡೌನ್ ಆಗಿದೆ. ಆದರೂ ಜಿಲ್ಲೆಯ ಕೆಲ ಭಾಗದಲ್ಲಿ ಮುಸ್ಲಿಂ ಬಾಂಧವರು ರೋಗ ಭೀತಿ ಮಧ್ಯೆಯೂ ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುತ್ತಿರುವುದು ಕಂಡು ಬಂದಿದೆ. ಗಂಗಾವತಿ ನಗರದಲ್ಲಿ 20 ಜನರು ಗುಂಪಾಗಿ ಸೇರಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಗುಂಪು ಸೇರುವಿಕೆಯನ್ನು ತಡೆಯಲು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ, ಜಿಲ್ಲಾಡಳಿತ ನೂರೆಂಟು ಬಾರಿ ಹೇಳುತ್ತಿದ್ದರೂ ಇವರು ನಿಯಮ ಉಲ್ಲಂಘಿಸಿ ಪ್ರಾರ್ಥನೆ ನಡೆಸಿದ್ದಾರೆ. ಇನ್ನೂ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಜುಮ್ಮಾ ಮಸೀದಿ ಹತ್ತಿರ ವಜೀರ್, ರಾಜಸಾಬ್, ಯೂನಿಸ್, ಹಸನ್ ಸಾಬ, ದಾದಾಪೀರ್ ಎನ್ನುವವರು ಗುಂಪು ಸೇರಿ ಪ್ರಾರ್ಥನೆಗೆ ಮುಂದಾಗಿದ್ದಾರೆ. ಇದನ್ನು ತಡೆದು ಪೊಲೀಸರು ಐವರ ಮೇಲೂ ಕೇಸ್ ದಾಖಲಿಸಿ ಮೊದಲಿಬ್ಬರನ್ನು ಬಂಧಿ ಸಿ, ಜಾಮೀನಿನ ಮೇಲೆ ಬಿಟ್ಟಿದ್ದಾರೆ. ಇನ್ನುಳಿದ ಮೂವರು ಪರಾರಿಯಾಗಿದ್ದು ಅವರ ಶೋಧಕಾರ್ಯ ನಡೆದಿದೆ.
20 ಜನರ ಮೇಲೆ ನಿಗಾ: ಜಿಲ್ಲಾಡಳಿತವು 80 ಜನರ ಮೇಲೆ ಹೆಚ್ಚಿನ ನಿಗಾ ಇರಿಸಿದೆ. ಇವರಲ್ಲಿ 57 ಜನರು 14 ದಿನಗಳ ಕಾಲ ಐಸೋಲೇಶನ್ ಪೂರೈಸಿದ್ದಾರೆ. 38 ಜನರು 28 ದಿನಗಳ ಐಸೋಲೇಶೆನ್ ಪೂರೈಸಿದ್ದಾರೆ. ಶನಿವಾರಕ್ಕೆ 23 ಜನರನ್ನು ಗೃಹಬಂಧನದಲ್ಲಿ ನಿಗಾ ಇರಿಸಲಾಗಿದೆ. ಜಮಾತ್‌ನಲ್ಲಿ ಪಾಲ್ಗೊಂಡ 20 ಜನರ ಗಂಟಲು ದ್ರವ್ಯ ಪಡೆದು ಪ್ರಯೋಗಾಲಯಕ್ಕೆ ರವಾನಿಸಿದೆ.