Advertisement
ದಿಬ್ಬೂರಹಳ್ಳಿ ಗ್ರಾಪಂಗೆ ಬರುವ ಜರುಗಹಳ್ಳಿ ಗ್ರಾಮದಲ್ಲಿ ಸಂಶಯಾಸ್ಪದ ಗಂಟಲು ಮಾರಿ ರೋಗದಿಂದ ಬಳಲುತ್ತಿದ್ದ 5ನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಮೃತಪಟ್ಟಿದ್ದು, ಇನ್ನೂ ಹಲವು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಗಂಟಲು ರೋಗದಿಂದ ನರಳುತ್ತಿದ್ದು, ನೆಮ್ಮದಿಗೆ ಭಂಗ ಉಂಟು ಮಾಡಿದೆ.
Related Articles
Advertisement
ಹಲವರಿಗೆ ಗಂಟಲು ನೋವು: ಮೃತ ಬಾಲಕ ಪ್ರಜ್ವಲ್ರ ದೊಡ್ಡಪ್ಪ ಶಿವಣ್ಣ ಎಂಬುವರ ಪುತ್ರಿ ಎಸ್‌ಎಸ್‌ಎಲ್ಸಿ ಓದುತ್ತಿರುವ ವಿದ್ಯಾರ್ಥಿನಿ ಕಾವ್ಯ ಸಹ ಗಂಟಲು ನೋವಿನಿಂದ ಬಳಲುತ್ತಿದ್ದು, ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದು ತಿಳಿದುಬಂದಿದೆ.
ಗ್ರಾಮದ ಮುನಿರತ್ನಮ್ಮ ಹಾಗೂ ಸರೋಜಮ್ಮ, ಶ್ರೀನಿವಾಸ್ ಸಹಿತ ಹಲವರು ಗಂಟಲು ನೋವಿನಿಂದ ಬಳಲುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಆವರಿಸಿದೆ.
ಶಾಲೆಯ ವಿದ್ಯಾರ್ಥಿಗಳಿಗೆ ಗಂಟಲು ರೋಗ: ಗ್ರಾಮ ಸ.ಕಿ.ಪ್ರಾ.ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಜ್ವಲ್ ಮೃತಪಟ್ಟ ಬಳಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 10 ಮಂದಿ ವಿದ್ಯಾರ್ಥಿಗಳಿಗೆ ಗಂಟಲು ರೋಗ ಕಾಣಿಸಿಕೊಂಡಿದ್ದು, ಸ್ವತಃ ಪಾಠಪ್ರವಚನಗಳು ಮಾಡುವ ಶಿಕ್ಷಕರು ಸಹ ಭಯಭೀತಿಗೊಂಡಿದ್ದಾರೆ. ಶಾಲೆಯಲ್ಲಿ 22 ಮಂದಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ 10 ಮಂದಿ ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನು ನಿಲ್ಲಿಸಿದ್ದಾರೆ ಎಂದು ಮುಖ್ಯಶಿಕ್ಷಕಿ ವಿಜಯ ತಿಳಿಸಿದರು.
ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡ ಶಾಲೆಗೆ ಭೇಟಿ ನೀಡಿ ಎಲ್ಲಾ ಮಕ್ಕಳಿಗೆ ಚಿಕಿತ್ಸೆ ನೀಡಿದರಲ್ಲದೇ ಬಿಸಿನೀರು ತಣ್ಣಗೆ ಮಾಡಿ ಕುಡಿಯ ಬೇಕು. ಜೊತೆಗೆ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಗಾರ್ಲೀಗ್ ಮಾಡಲು ವೈದ್ಯರು ಸೂಚನೆ ನೀಡಿದ್ದಾರೆ. ಅದನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಮಕ್ಕಳು ಹೇಳಿದರು.
ನಿಲ್ಲದ ಆತಂಕ: ಗ್ರಾಮದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಗಂಟಲು ರೋಗದಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಸದ್ಯದ ಮಟ್ಟದಲ್ಲಿ ಯಾರೂ ಸಹ ಸಮಾಧಾನಗೊಳ್ಳುವ ಪರಿಸ್ಥಿತಿಯಲ್ಲಿಲ್ಲ.
ಗಂಟಲು ನೋವು ಕಾಣಿಸಿಕೊಂಡರೆ ಸಮೀಪದ ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಮತ್ತು ಬೆಂಗಳೂರಿನ ಆಸ್ಪತ್ರೆಗೆ ದೌಡಾಯಿಸುತ್ತಿದ್ದು, ರೋಗ ಮಾತ್ರ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂಬ ತಳಮಳ ಮತ್ತು ಆತಂಕ ಗ್ರಾಮಸ್ಥರಲ್ಲಿ ಬೇರೂರಿದೆ.
ಗ್ರಾಮದಲ್ಲಿ ಗಂಟಲು ರೋಗ ದಿನೇ ದಿನೇ ಮಕ್ಕಳು ಮತ್ತು ಹಿರಿಯರಿಗೆ ಹರಡುತ್ತಿದ್ದರು ಸಹ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುವ ಗೋಜಿಗೆ ಹೋಗಿಲ್ಲವೆಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೇವಲ ಸಾದಲಿ ಆಸ್ಪತ್ರೆಯ ವೈದ್ಯರು ಮತ್ತು ಆಶಾ ಕಾರ್ಯಕರ್ತರು,ದಾದಿಯರು ಮಾತ್ರ ನೀರಿನ ಮಾದರಿ ಸ್ವೀಕರಿಸಿ ಚಿಕಿತ್ಸೆ ನೀಡಿದ್ದಾರೆ ಆದರೂ ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೋಗವನ್ನು ನಿಯಂತ್ರಣ ಮಾಡಿ ಜನರ ಆರೋಗ್ಯವನ್ನು ಕಾಪಾಡಬೇಕೆಂದು ಅಳಲು ತೋಡಿಕೊಂಡಿದ್ದಾರೆ.
ಗ್ರಾಮದಲ್ಲಿ ಗಂಟಲು ರೋಗ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಗ್ರಾಮ ಪಂಚಾಯಿತಿಯಿಂದ ಅಥವಾ ಆರೋಗ್ಯ ಇಲಾಖೆಯಿಂದ ಯಾವುದೇ ರೀತಿಯ ಸ್ವಚ್ಛತೆ ಕಾರ್ಯ ನಡೆಯುತ್ತಿಲ್ಲ. ಎಲ್ಲೆಡೆ ಗಲೀಜು ತುಂಬಿದೆ. ಚರಂಡಿ ನೀರು ರಸ್ತೆಗೆ ಹರಿದು ಸೊಳ್ಳೆಗಳಿಗೆ ಆಶ್ರಯತಾಣವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.
ನೀರು ಶುದ್ಧೀಕರಣ ಘಟಕ ಮಂಜೂರು: ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕ0ವಾಗಿರುವ ಕುರಿತು ಶಾಸಕ ವಿ.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದ ಪರಿಣಾಮ ತಾಲೂಕಿನಾದ್ಯಂತ 40 ನೀರು ಶುದ್ಧೀಕರಣ ಘಟಕ ಮಂಜೂರು ಮಾಡಿದ್ದಾರೆ. ಅದರಲ್ಲಿ ಜರುಗಹಳ್ಳಿ ಸಹ ಸೇರಿದ್ದು, ಶೀಘ್ರವೇ ಘಟಕ ಆರಂಭಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷರು ತಿಳಿಸಿದ್ದಾರೆ.
ಗ್ರಾಮದಲ್ಲಿರುವ ಕೊಳವೆಬಾವಿಯಲ್ಲಿ ಲಭಿಸಿರುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕ ವಾಗಿದೆ ಎಂದು ಈಗಾಗಲೇ ತಿಳಿದು ಬಂದಿದೆ. ಗಂಟಲುರೋಗ ವ್ಯಾಪಕವಾಗಿರುವುದರಿಂದ ಕುಡಿಯುವ ನೀರು ಆರೋಗ್ಯ ಇಲಾಖೆಯ ಅಧಿಕಾರಿಗಳು ನಮೂನೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ನೀರು ಕುಡಿಯಲು ಯೋಗ್ಯವಿಲ್ಲವೆಂದು ಪ್ರಯೋಗಾ ಲಯದಿಂದ ಧೃಡಪಟ್ಟಿದೆ. ಕಲುಷಿತ ನೀರು ಸೇವಿಸಿ ಗಂಟಲು ರೋಗ ಕಾಣಿಸಿಕೊಂಡಿ ರಬಹುದು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.