Advertisement

ಕ್ಷೌರಿಕನಿಗೆ ಗಂಟಲಿನ ಕ್ಯಾನ್ಸರ್‌: ನೆರವು ಯಾಚನೆ

11:32 PM Jul 16, 2019 | mahesh |

ನಗರ: ಇಬ್ಬರು ಪುಟಾಣಿ ಮಕ್ಕಳು, ವೃತ್ತಿ ಸಣ್ಣದಾದರೂ, ಬಾಡಿಗೆ ಮನೆಯಲ್ಲಿ ವಾಸವಿದ್ದರೂ ಆ ಮನೆಯಲ್ಲಿ ಖುಷಿ, ನೆಮ್ಮದಿ ಇತ್ತು. ಆದರೆ ಕೆಲವು ತಿಂಗಳ ಹಿಂದೆ ಮನೆಯ ಆಧಾರ ಸ್ತಂಭವಾದ ಯಜಮಾನನಿಗೆ ಆನಾರೋಗ್ಯ ಕಾಡಿ ಮನೆಯವರ ಕಣ್ಣೀರಿಗೆ ಕಾರಣವಾಗಿದೆ.

Advertisement

ಮುರದಲ್ಲಿ ಸೆಲೂನ್‌ ನಡೆಸುತ್ತ ಬಾಡಿಗೆ ಮನೆಯಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿರುವ ಚಂದ್ರಶೇಖರ ಭಂಡಾರಿ (61) ಸಂಸಾರವನ್ನು ಕಷ್ಟದಲ್ಲೇ ನಿಭಾಯಿಸುತ್ತಿದ್ದರು. ಪತ್ನಿ ಪುಷ್ಪಾ ಹೊಟೇಲ್ಗಳಲ್ಲಿ ಸ್ವಚ್ಛತೆಯ ಕೆಲಸಕ್ಕೆ ತೆರಳಿ ಪತಿಗೆ ನೆರವಾಗುತ್ತಿದ್ದರು. ಅವರ ಪುತ್ರಿ ಲಿಖೀತಾ (7) ಮುರ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದರೆ, ಪುತ್ರ ಹೇಮಂತ್‌ (4) ಅಂಗನವಾಡಿಗೆ ಹೋಗುತ್ತಿದ್ದಾನೆ.

ಕಾಡಿತು ಕ್ಯಾನ್ಸರ್‌
ಚಂದ್ರಶೇಖರ ಭಂಡಾರಿ ಅವರಿಗೆ ಮೂರು ತಿಂಗಳ ಹಿಂದೆ ಅನಾರೋಗ್ಯ ಉಂಟಾದಾಗ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಯಿತು. ಆಗ ಗಂಟಲು ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಅನಂತರ ಮಂಗಳೂರಿನ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ದಾಖಲಾಗಿ 2 ತಿಂಗಳು ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ 1.20 ಲಕ್ಷ ರೂ. ಖರ್ಚಾಗಿದ್ದು, ಆಯುಷ್ಮಾನ್‌ ಯೋಜನೆಯ ಮೂಲಕ ಹಾಗೂ ದಾನಿಗಳ ನೆರವಿನಿಂದ ಅದನ್ನು ಭರಿಸಲಾಗಿದೆ. ಆಸ್ಪತ್ರೆಯಲ್ಲಿ ಇನ್ನೂ ಒಂದು ತಿಂಗಳು ಇರುವಂತೆ ಹೇಳಿದರೂ ಮನೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಪುಷ್ಪಾ ಅವರು ಚಂದ್ರಶೇಖರ ಭಂಡಾರಿ ಅವರನ್ನು ಮನೆಗೆ ಕರೆತಂದು ಆರೈಕೆ ಮಾಡುತ್ತಿದ್ದಾರೆ. ತಿಂಗಳ ಅನಂತರ ಮತ್ತೆ ಆಸ್ಪತ್ರೆಗೆ ಹೋಗಿ ಗುಣವಾಗಿದ್ದರೆ ಗಂಟಲಿನ ಬಳಿ ಪ್ಲಾಸ್ಟಿಕ್‌ ಸರ್ಜರಿ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಮನೆಯವರ ಪರದಾಟ
ಪತಿಯ ಅನಾರೋಗ್ಯ ಹಾಗೂ ಪತ್ನಿ ಅವರ ಆರೈಕೆಗೆ ಸಮಯ ಮೀಸಲಿಡಬೇಕಾದ ಕಾರಣ ಈ ಕುಟುಂಬದಲ್ಲಿ ಈಗ ದುಡಿಯುವ ಕೈಗಳಿಲ್ಲ. ಪುಟ್ಟ ಮಕ್ಕಳು ಬೇರೆ. ಹೀಗಾಗಿ, ಕುಟುಂಬ ನಿರ್ವಹಣೆ ಹಾಗೂ ಚಿಕಿತ್ಸೆಗೆ ಆರ್ಥಿಕ ಅಡಚಣೆ ಆಗಿದೆ. ದಾನಿಗಳು ನೆರವಾಗುವಂತೆ ಪುಷ್ಪಾ ಮನವಿ ಮಾಡಿದ್ದಾರೆ.

ದಾನಿಗಳು ಪುಷ್ಪಾ ಎನ್‌. ಅವರ ಕರ್ಣಾಟಕ ಬ್ಯಾಂಕ್‌ ಕಬಕ ಶಾಖೆಯ ಖಾತೆ ಸಂಖ್ಯೆ: 4012500101048101, ಐಎಫ್‌ಎಸ್‌ಸಿ ಕೋಡ್‌: ಕೆಎಆರ್‌ಬಿ 0000401ಗೆ ಹಣ ಜಮೆ ಮಾಡಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next