“ಬ್ಯಾಂಕ್ ದರೋಡೆ ದೃಶ್ಯಗಳು ಇದ್ದುದಕ್ಕೇ ಸೆನ್ಸಾರ್ ಮಂಡಳಿ ನಮಗೆ “ಎ’ ಪ್ರಮಾಣ ಪತ್ರ ನೀಡಿದೆ. ನಿಜವಾಗಿಯೂ ನಮಗೆ ಅದೊಂದು ಬೇಸರದ ವಿಷಯ…’ ಹೀಗೆ ಹೇಳಿ ಕೊಂಚ ಬೇಸರ ಹೊರ ಹಾಕಿದರು ನಿರ್ದೇಶಕ ಕೆ.ಪಿ.ನವೀನ್‌ಕುಮಾರ್. ಅವರು ಹೇಳಿಕೊಂಡಿದ್ದು, “ಪಾನಿ ಪುರಿ’ ಚಿತ್ರದ ಕುರಿತು. ಹೊಸತಂಡ ಸೇರಿಕೊಂಡು “ಪಾನಿ ಪುರಿ’ ಚಿತ್ರ ಮಾಡಿ ಮುಗಿಸಿದೆ. ಮುಂದಿನ ತಿಂಗಳು ಬಿಡುಗಡೆಗೂ ರೆಡಿಯಾಗಿದೆ. ಸಿನಿಮಾ ಬಗ್ಗೆ ಹೇಳಿಕೊಳ್ಳಲೆಂದೇ ನಿರ್ದೇಶಕ ನವೀನ್ ತಮ್ಮ ತಂಡವನ್ನು ಪತ್ರಕರ್ತರ ಮುಂದೆ ಕರೆ ತಂದಿದ್ದರು.
ಮೊದಲು ಮಾತಿಗಿಳಿದ ನಿರ್ದೇಶಕ ನವೀನ್‌ಕುಮಾರ್, “ಇದೊಂದು ಥ್ರಿಲ್ಲರ್ ಸಬೆಕ್ಟ್. ಒಂದು ಬ್ಯಾಂಕ್ ದರೋಡೆ ಮಾಡಿ ದಿಢೀರ್ ಶ್ರೀಮಂತರಾಗಬೇಕು ಅಂತ ಹೊರಡುವ ಮಂದಿ ಎಷ್ಟೆಲ್ಲಾ ಸಮಸ್ಯೆ ಎದುರಾಗುತ್ತೆ ಎಂಬುದು ಹೈಲೈಟ್. ಇಲ್ಲಿ ಒಳ್ಳೆಯ ಕೆಲಸ ಮಾಡಿದರೆ, ಒಳ್ಳೆಯದಾಗುತ್ತೆ, ಕೆಟ್ಟ ದಾರಿಗೆ ಹೋದವರು ಏನೆಲ್ಲಾ ಸಂಕಷ್ಟ ಅನುಬವಿಸುತ್ತಾರೆ. ಅಡ್ಡ ದಾರಿ ಹಿಡಿದರೆ ಎಷ್ಟೆಲ್ಲಾ ಸಮಸ್ಯೆ ಎದುರಾಗುತ್ತೆ ಎಂಬುದು ಸಿನಿಮಾದ ಪ್ರಮುಖ ಅಂಶ’ ಅಂತ ವಿವರ ಕೊಟ್ಟರು ಅವರು. ಅಂದಹಾಗೆ, ಈ ಚಿತ್ರ ಶುರುವಾಗಿ ಎರಡು ವರ್ಷಗಳೇ ಕಳೆದಿವೆ.
ನಾಯಕಿಯರಾದ ಅನು, ಅಕ್ಷತಾ, ದರ್ಶಿತಾ ಸಿನಿಮಾ ಶುರುವಿಗೆ ಕಾರಣ. ಇನ್ನು, ಸೆನ್ಸಾರ್ ಮಂಡಳಿ ಕೊಟ್ಟ ಪ್ರಮಾಣ ಪತ್ರದಿಂದ ನಮಗೆ ಬೇಸರವೂ ಆಗಿದೆ. ಯಾಕೆಂದರೆ, ಬ್ಯಾಂಕ್ ದರೋಡೆ ದೃಶ್ಯಗಳಿವೆ ಎಂಬ ಒಂದೇ ಕಾರಣಕ್ಕೆ, “ಎ’ ಪ್ರಮಾಣ ಪತ್ರ ನೀಡಿದೆ. ಇದು ಎಷ್ಟರ ಮಟ್ಟಿಗೆ ಸರಿನೋ ಗೊತ್ತಿಲ್ಲ’ ಅಂತ ಸಣ್ಣದ್ದೊಂದು ಆರೋಪ ಮಾಡಿದರು ಅವರು. ನಿರ್ದೇಶಕರ ಬೇಸರದ ಈ ಮಾತಿಗೆ ಪ್ರತಿಕ್ರಿಯಿಸಿದ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಕಲಾದರ ಹಾಗು ನಿರ್ಮಾಪಕರ ಸಂಘಕ್ಕೆ ದೂರು ನೀಡಬೇಕಾಗಿತ್ತು. ಎಲ್ಲವೂ ಮುಗಿದ ಮೇಲೆ ಈಗ ಏನು ಮಾಡಲು ಬರುವುದಿಲ್ಲ.
ಸೆನ್ಸಾರ್‌ಗೆ ಸಂಬಂಧಿಸಿದಂತೆ ಅಲ್ಲಿನ ಅಧಿಕಾರಿಗಳನ್ನು ಕರೆಸಿ, ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿ ಹೋಗಬಹುದೆಂಬ ಭರವಸೆ ನಮಗಿದೆ ಎಂದರು ಬಣಕಾರ್. ಇನ್ನು, ಚಿತ್ರದಲ್ಲಿ ಮೂವರು ನಾಯಕರಿದ್ದಾರೆ. ಆ ಪೈಕಿ ಜಗದೀಶ್ ಮತ್ತು ವೈಭವ್ ಮಾತ್ರ ಹಾಜರಿದ್ದರು. ಇನ್ನೊಬ್ಬ ನಾಯಕ ಸಂಜಯ್ ಗೈರಾಗಿದ್ದರು. ಜಗದೀಶ್ ಹಾಗೂ ವೈಭವ್ ತಮ್ಮ ಪಾತ್ರ ಹಾಗೂ ಚಿತ್ರದ ಅನುಭವ ಹಂಚಿಕೊಂಡರು. ಹಂಸಲೇಖ ಅವರ ಶಿಷ್ಯ ಸಂತೋಷ್ ಬಾಗಲಕೋಟೆ ಐದು ಹಾಡುಗಳಿಗೆ ರಾಗ ಒದಗಿಸಿದ್ದಾರೆ.
ಆ ಹಾಡುಗಳಲ್ಲಿ ಉತ್ತರ ಕರ್ನಾಟಕ ಶೈಲಿಯ ಕವಾಲಿ ಹಾಡು ಇರುವುದು ವಿಶೇಷವಂತೆ. ಇಲ್ಲಿ ರೋಬೋ ಗಣೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಪಾತ್ರ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂಬುದು ಚಿತ್ರತಂಡದ ಮಾತು. ಪುಟ್ಟರಾಜು ಅವರಿಗೆ ಇದು ಮೊದಲ ನಿರ್ಮಾಣದ ಸಿನಿಮಾ. ಆದರೆ, ಅವರು ಸಂಪೂರ್ಣ ಜವಬ್ದಾರಿಯನ್ನು ನಿರ್ದೇಶಕರ ಮೇಲೆ ಹೊರಿಸಿದ್ದರಿಂದ ಅವರೇ ಎಲ್ಲವನ್ನೂ ನೋಡಿಕೊಂಡಿದ್ದಾರಂತೆ. ಅಂದಹಾಗೆ, ಅಕ್ಟೋಬರ್‌ನಲ್ಲಿ “ಪಾನಿಪುರಿ’ ತೆರೆಗೆ ಬರುವ ಸಾಧ್ಯತೆ ಇದೆ.