Advertisement

ರೈತರ ಜಮೀನು ಸರ್ವೇಗೆ ಮೂರು ವರ್ಷ ಬೇಕಾ?

03:05 PM Sep 10, 2019 | Suhan S |

ಲಿಂಗಸುಗೂರು: ಜಮೀನಿನ ಸರ್ವೇ ಕೆಲಸಗಳಿಗಾಗಿ ವಿನಾಕಾರಣ ರೈತರಿಗೆ ತೊಂದರೆ ನೀಡಿ ಅವರ ಜೊತೆ ಚೆಲ್ಲಾಟ ಆಡಬೇಡಿ ಎಂದು ರಾಯಚೂರು ಲೋಕಾಯುಕ್ತ ಡಿವೈಎಸ್‌ಪಿ ಅಯ್ಯನಗೌಡ ಪಾಟೀಲ ಸರ್ವೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ತಾಲೂಕಿನ ರಾಮತ್ನಾಳ ಗ್ರಾಮದ ರೈತರೊಬ್ಬರು ತಮ್ಮ ಜಮೀನಿನ ಸರ್ವೇಗೆ ಅರ್ಜಿ ಹಾಕಿ ಮೂರು ವರ್ಷ ಕಳೆಯುತ್ತಿದ್ದರೂ ಈವರೆಗೆ ಸರ್ವೇ ಮಾಡಿಲ್ಲ ಎಂದು ದೂರು ಸಲ್ಲಿಸಿದ್ದಾರೆ. ಒಂದು ಹೊಲದ ಸರ್ವೇ ಮಾಡೋಕೆ ಮೂರು ವರ್ಷ ಬೇಕಾ..? ನೀವು ರೈತರೊಂದಿಗೆ ಆಟ ಆಡಬೇಡಿ, ದೂರಿನನ್ವಯ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭೂಮಾಪನ ಎಡಿಎಲ್ಆರ್‌ ಬಲವಂತ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ನೆಪ ಹೇಳದೇ ರೈತರ ಕೆಲಸ ಮಾಡಿಕೊಡಿ ಎಂದು ತಾಕೀತು ಮಾಡಿದರು.

ಲೇಟಾಗಿ ಬರುವುದು ಅಪರಾಧ: ಸರ್ಕಾರಿ ನೌಕರರು ಕಚೇರಿಗಳಿಗೆ ಲೇಟಾಗಿ ಬರುವುದು ಕೂಡಾ ಅಕ್ಷಮ್ಯ ಅಪರಾಧವಾಗಿದೆ. ಕೆಲ ಅಧಿಕಾರಿಗಳು ಕಚೇರಿಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಹೊರಗೆ ಹೋಗಿಬಿಡುತ್ತಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಕಚೇರಿಗೆ ಹಠಾತ್‌ ಬೇಟಿ ನೀಡುತ್ತೇನೆ. ಸರ್ಕಾರಿ ಸೇವೆಯಲ್ಲಿರುವವರು ಸರಿಯಾದ ಸಮಯಕ್ಕೆ ಕಚೇರಿಗೆ ಬಂದು ಕೆಲಸ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಪಿಡಿಒಗಳು ಹಾಗೂ ಪಟ್ಟಣ ಪ್ರದೇಶದಲ್ಲಿ ಪುರಸಭೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಸಾಕು ಜನರ ಅಲೆದಾಟ ತಪ್ಪಿಸಿದಂತಾಗುತ್ತದೆ. ಆದರೆ ಪಿಡಿಒಗಳು ಸಮರ್ಪಕವಾಗಿ ಕೆಲಸ ಮಾಡದ್ದರಿಂದ ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ನೀಡುವ ಪರಿಸ್ಥಿತಿ ಬಂದಿದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಸರ್ಕಾರಿ ಶಾಲೆಗಳ ಶಿಕ್ಷಕರು ಸರಿಯಾಗಿ ಶಾಲೆಗೆ ಹೋಗುವುದಿಲ್ಲ, ಉಳಿದ ಶಿಕ್ಷಕರನ್ನು ಹೊಂದಾಣಿಕೆ ಮಾಡಿಕೊಂಡು ತರಗತಿಗಳನ್ನು ನಡೆಸುತ್ತಿರುವ ದೂರುಗಳು ಬಂದಿವೆ. ಅದಲ್ಲದೇ ಶಿಕ್ಷಕರು ರಾಜಕಾರಣ ಮಾಡುತ್ತಿದ್ದಾರೆ. ಆದ್ದರಿಂದ ಶಾಲೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಬಿಇಒ ಅಶೋಕಕುಮಾರಗೆ ಸೂಚಿಸಿದರು.

ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಈವರೆಗೂ ಎಷ್ಟು ಜನ ನಕಲಿ ವೈದ್ಯರ ಮೇಲೆ ದೂರು ದಾಖಲಿಸಿದ್ದೀರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ರುದ್ರಗೌಡ ಪಾಟೀಲರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ| ರುದ್ರಗೌಡ ಪಾಟೀಲ, ಕಳೆದ ಆರು ತಿಂಗಳ ಹಿಂದೆ ನಕಲಿ ವೈದ್ಯರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಮತ್ತೂಬ್ಬರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು.

Advertisement

5 ಕೋಟಿ ಅವ್ಯವಹಾರ: ತಾಲೂಕಿನ ಗೊರೇಬಾಳ ಗ್ರಾಮ ಪಂಚಾಯಿತಿಯಲ್ಲಿ ನರೇಗಾದಡಿ 5 ಕೋಟಿ ರೂ. ಅವ್ಯವಹಾರವಾಗಿದೆ. ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೊರೇಬಾಳ ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ಈ ಬಗ್ಗೆ ಕೂಡಲೇ ಕ್ರಮ ಜರಗಿಸುವಂತೆ ಲೋಕಾಯುಕ್ತ ಡಿವೈಎಸ್‌ಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ ವಿ. ಅವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next