ಮಣಿಪಾಲ: ಪಾಕಿಸ್ಥಾನದ ಉಗ್ರರು ನಡೆಸಿದ ಭಯೋತ್ಪಾದನ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಇಂದು ಮೂರು ವರ್ಷ ಪೂರ್ಣಗೊಂಡಿದೆ. ಅಂದು ನಮ್ಮ ಸೇನೆ ಅಕ್ಷರಶಃ ಮಿಂಚಿನ ದಾಳಿ ನಡೆಸಿತ್ತು. ನಮ್ಮ ತಂಟೆಗೆ ಬಂದರೆ ಯಾವ ರೀತಿ ಪಾಠ ಕಲಿಸುತ್ತೇವೆ ಎಂಬುದನ್ನು ತೋರ್ಪಡಿಸಿತ್ತು.
ಜಮ್ಮು ಕಾಶ್ಮೀರದ ಸೇನಾ ಉರಿ ನೆಲೆಯ ಮೇಲೆ 2016 ರ ಸೆಪ್ಟೆಂಬರ್ 18 ರಂದು ಉಗ್ರರು ಆತ್ಮಾಹುತಿ ದಾಳಿ ನಡೆಸಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದರು. ಹಠಾತ್ ದಾಳಿ ನಡೆಸಿ 19 ಭಾರತೀಯ ಯೋಧರನ್ನು ಬಲಿ ಪಡೆದಿದ್ದರು. ಈ ದಾಳಿಯಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪಾಕಿಸ್ಥಾನದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿತ್ತು. ಭಾರತೀಯ ಸೇನೆ ಮೇಲೆ ನಡೆದ ಅತ್ಯಂತ ಘೋರ ದಾಳಿಗಳಲ್ಲಿ ಇದು ಒಂದಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಐತಿಹಾಸಿಕ ಸರ್ಜಿಕಲ್ ದಾಳಿ ನಡೆಸಿತ್ತು. ಆ ಮೂಲಕ ಪಾಕಿಸ್ಥಾನಕ್ಕೆ ಮರ್ಮಾಘಾತ ನೀಡಿ ಇಡೀ ವಿಶ್ವಕ್ಕೆ ಸೇನೆಯ ಶಕ್ತಿ ಸಾಮಾರ್ಥ್ಯವನ್ನು ತೋರಿಸಿಕೊಟ್ಟಿತು.
2016ರ ಸೆಪ್ಟೆಂಬರ್ 28, 29ರ ಮಧ್ಯರಾತ್ರಿ ಭಾರತೀಯ ವಿಶೇಷ ಸೇನಾ ಪಡೆಗಳು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದ್ದವು . ಇದರಲ್ಲಿ20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಭಾರತದ ಮೇಲೆ ದಾಳಿ ಮಾಡಲು ಬಳಕೆಯಾಗುತ್ತಿದ್ದ ಈ ಉಗ್ರರ ಅಡ್ಡೆಗಳು ಭಾರತೀಯ ಸೇನೆಯ ಕರಾರುವಾಕ್ ದಾಳಿಗೆ ನಾಶವಾಗಿ ಹೋಗಿದ್ದವು.
ಭಾರತ ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಳಗೆ ನುಸುಳಲು ಉಗ್ರರು ,7 ನೆಲೆಗಳನ್ನು ಸ್ಥಾಪಿಸಿ ಸನ್ನದ್ಧರಾಗಿದ್ದರು. ಇದರ ಖಚಿತ ಮಾಹಿತಿ ಪಡೆದ ಗುಪ್ತಚರ ಇಲಾಖೆ ಸೇನೆಗೆ ಮಾಹಿತಿ ರವಾನಿಸಿತ್ತು. ನಂತರದಲ್ಲಿ ಕಾರ್ಯಾಚರಣೆಗಳಿದ ಸೇನೆ , ಉಗ್ರರ ಮೇಲೆ ದಾಳಿ ನಡೆಸಲು ಕರಾರುವಕ್ಕಾದ ಯೋಜನೆ ತಯಾರಿಸಿ, ಗುಪ್ತ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಸಂದೇಶ ರವಾನಿಸಿತ್ತು.
ಮಧ್ಯರಾತ್ರಿ ಸುಮಾರು 12 ಗಂಟೆಗೆ ದಾಳಿ ಮಾಡಲು ನಿರ್ಧರಿಸಿ , ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೈನಿಕರನ್ನು ವಿಮಾನದ ಮೂಲಕ ಇಳಿಸಲಾಗಿತ್ತು. ಗಡಿ ನಿಯಂತ್ರಣಾ ರೇಖೆಯಿಂದ 500 ಮೀಟರಿನಿಂದ ಹಿಡಿದು 2 ಕಿ. ಮೀ ವರೆಗೂ ಗುರುತಿಸಲಾಗಿದ್ದ 7 ಭಯೋತ್ಪಾದನಾ ಕ್ಯಾಂಪ್ ನ ಮೇಲೆ ಸೈನಿಕರು ಮುಗಿಬಿದ್ದಿದ್ದರು. ನಾಲ್ಕು ಗಂಟೆಯ ಸತತ ಕಾರ್ಯಾಚರಣೆಯಲ್ಲಿ ಉಗ್ರರ 7 ಬಂಕರ್ ಗಳನ್ನು ಧ್ವಂಸ ಮಾಡಲಾಗಿತ್ತು. ಬೆಳಗ್ಗೆ 4: 30ಕ್ಕೆ ಸರ್ಜಿಕಲ್ ದಾಳಿ ಮುಕ್ತಾಯವಾಗಿತ್ತು. ದಾಳಿ ನಡೆಸಿದ ನಂತರ ಯೋಧರು ಸುರಕ್ಷಿತವಾಗಿ ಮರಳುವುದು ಕಾರ್ಯಾಚರಣೆಯ ಅತ್ಯಂತ ಕಠಿಣ ಭಾಗವಾಗಿತ್ತು. ಏಕೆಂದರೆ ದಾಳಿಯ ಆಕ್ರೋಶದಲ್ಲಿ ಪಾಕಿಸ್ಥಾನಿ ಯೋಧರು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದರು.
ಪಾಕ್ ಮಣ್ಣಲ್ಲಿ ಭಾರತೀಯ ಸೇನೆ ನಡೆಸಿದ ಮಿಂಚಿನ ಪ್ರಹಾರಕ್ಕೆ ಇಂದು ಮೂರು ವರ್ಷ ತುಂಬಿದೆ. ಒಂದೆಡೆ ಹೆಮ್ಮೆಯ ಯೋಧರನ್ನು ಕಳೆದುಕೊಂಡ ದು:ಖವಾದರೇ ಮತ್ತೊಂದೆಡೆ ಭಯೋತ್ಪಾದನ ದಾಳಿಗೆ ತಕ್ಕ ಪ್ರತಿಕಾರ ತೀರಿಸಿಕೊಂಡ ಸಂತಸ. ಭಯೋತ್ಪಾದನೇಯ ನಿರ್ಮೂಲನೆಗೆ ಭಾರತೀಯ ಸೇನೆ ಅಂದು ತೆಗೆದಿಕೊಂಡ ದಿಟ್ಟ ನಿರ್ಧಾರ ಎಲ್ಲರ ಮಚ್ಚುಗೆಗೆ ಪಾತ್ರವಾಗಿತ್ತು.