ದೇವದುರ್ಗ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೋ ವಲಯ ಮೇಲ್ವಿಚಾರಕಿ ಅಂಗನವಾಡಿ ಕಾರ್ಯಕರ್ತೆಯ ನಿರ್ಲಕ್ಷವೋ ಗೊತ್ತಿಲ್ಲ. ಪಟ್ಟಣದ ಫಲಾನುಭವಿಯೊಬ್ಬರು ಕಳೆದ ಮೂರು ವರ್ಷಗಳಿಂದ ಭಾಗ್ಯಲಕ್ಷ್ಮೀ ಬಾಂಡ್ ಗಾಗಿ ಕಚೇರಿಗೆ ಅಲೆಯುತ್ತಿದ್ದಾರೆ.
ಪಟ್ಟಣದ ನೇತಾಜಿ ವಾರ್ಡ್‌ನ ನಾಜಿಯಾ ಆಲ್ ತಾಫ್ ಹುಸೇನ್ ಎನ್ನುವವರೇ ಭಾಗ್ಯ ಲಕ್ಷ್ಮೀ ಬಾಂಡ್ ಗಾಗಿ ಅಲೆಯುತ್ತಿರುವ ಫಲಾನುಭವಿ. 2016 ಮಾರ್ಚ್ ತಿಂಗಳಲ್ಲಿ ವಿಮಾ ಕಂಪನಿಯಿಂದ ಮಂಜೂರಿಯಾಗಿ ಇಲಾಖೆಗೆ ಬಂದಿದೆ. ಪಟ್ಟಣದ ಎ.ವಲಯ ಮೇಲ್ವಿಚಾರಕಿ ಸಂಬಂಧಪಟ್ಟ ಕಾರ್ಯಕರ್ತೆಗೆ ಇಲಾಖೆಯಿಂದ ಭಾಗ್ಯ ಲಕ್ಷ್ಮೀ ಬಾಂಡ್ ವಿತರಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಆದರೆ ಕೈಗೆ ಬಾರದೇ ಹಿನ್ನೆಲೆ ಫಲಾನುಭವಿ ಕಳೆದ ಮೂರು ವರ್ಷಗಳಿಂದ ಕಚೇರಿಗೆ ಅಲೆಯುವುದು ತಪ್ಪಿಲ್ಲ.
ಆರೇಳು ತಿಂಗಳಗೊಮ್ಮೆ ಅಧಿಕಾರಿಗಳು ವರ್ಗಾವಣೆ ಆಗುತ್ತಿರುವುದ್ದರಿಂದ ನೊಂದ ಫಲಾನುಭವಿ ಸಮಸ್ಯೆ ಕೇಳ್ಳೋವವರೇ ಇಲ್ಲದಾಗಿದೆ. ಸರಕಾರ ಸೌಲಭ್ಯ ಪಡೆದ ಭಾಗ್ಯ ಲಕ್ಷ್ಮೀ ಬಾಂಡ್ ಯಾವುದೇ ಕಾರಣಕ್ಕೂ ಫಲಾನುಭವಿಗಳು ಕಳೆಯದಂತೆ ನೋಡಿಕೊಳ್ಳಬೇಕು ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ. ಆದರೆ ಫಲಾನುಭವಿ ಕೈಗೆ ಸೇರದ ಮೊದಲೇ ಬಾಂಡ್ ಕಳೆದು ಹೋಗಿದೆ ಎಂಬುವುದು ಇದೀಗ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಒಬ್ಬರೂ ಒಂದೊಂದು ಹೇಳಿ ಕಳೆದ ಮೂರು ವರ್ಷಗಳಿಂದ ಫಲಾನುಭವಿಯನ್ನು ಕಚೇರಿಗೆ ಅಲೆದಾಡುಸುತ್ತಿದ್ದಾರೆ. ಕೆಲಸ ಕಾರ್ಯ ಬಿಟ್ಟು ನಿತ್ಯ ಕಚೇರಿಗೆ ಅಲೆಯುವ ಫಲಾನುಭವಿಗೆ ಸೂಕ್ತ ಪರಿಹಾರ ಒದಗಿಸಲು ಇಲ್ಲಿನ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ.
ಭಾಗ್ಯ ಲಕ್ಷ್ಮೀ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ನಾಜಿಯಾ ಎಂಬ ಫಲಾನುಭವಿ 13:10:2015ರಲ್ಲೇ ಅರ್ಜಿ ಸಲ್ಲಿಸಿದರು. 2016 ಮಾರ್ಚ್‌ಗಳಲ್ಲಿ ಮಂಜೂರಿಯಾಗಿ ಬ್ಯಾಂಡ್ ಇಲಾಖೆಗೆ ಪೂರೈಸಲಾಗಿದೆ. ಆದರೆ ಇಲ್ಲಿವರೆಗೆ ಫಲಾನುಭವಿ ಕೈಗೆ ಭಾಗ್ಯ ಲಕ್ಷ್ಮೀ ಬಾಂಡ್ ಬಾರದೇ ಇರುವುದರಿಂದ ಬೇಸತ್ತಿದ್ದಾರೆ. 1:8:2008 ನಂತರ ಜನಿಸಿದ ಹೆಣ್ಣು ಮಗುವಿಗೆ 18 ವರ್ಷದವರೆಗೆ 1ಲಕ್ಷ ರೂ. ನೀಡಲಾಗುತ್ತದೆ. ಅದರಲ್ಲಿ ತಂದೆ ಮೃತ ಪಟ್ಟರೆ ವಿಮಾ ಕಂಪನಿಯಿಂದ ಪರಿಹಾರ ನೀಡಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಇಂತಹ ಯೋಜನೆ ಜಾರಿಗೆ ತರಲಾಗಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮೇಲ್ವಿಚಾರಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯ ಎಡವಟ್ಟಿನಿಂದ ಕಳೆದ ಮೂರು ವರ್ಷಗಳಿಂದ ಭಾಗ್ಯ ಲಕ್ಷ್ಮೀ ಬಾಂಡ್‌ಗಾಗಿ ಫಲಾನುಭವಿ ನಾಜಿಯಾ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ ಇಲ್ಲಿವರೆಗೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟತೆ ಉತ್ತರ ಬಾರದೇ ಇರುವುದರಿಂದ ಬೇಸತ್ತಿದ್ದಾರೆ. ತಪ್ಪಿನಿಂದ ಜಾರಿಕೊಳ್ಳಲು ಫಲಾನುಭವಿಗೆ ಅಧಿಕಾರಿಗಳು ದಿನಕ್ಕೊಂದು ನೆಪ ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ ನಾಜಿಯಾ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೂ ಮನವಿ ಮಾಡಿದ್ದಾರೆ.
ಪಟ್ಟಣ ಸೇರಿ ತಾಲೂಕಿನ್ಯಾದಂತ ಇಂತಹ ಪ್ರಕರಣಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಇಲಾಖೆಯ ಮೇಲಾಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ಕೈಗೊಂಡಾಗ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮೂರು ವರ್ಷಗಳಿಂದ ಸತಾಯಿಸುತ್ತಿರುವ ಮೇಲ್ವಿಚಾರಕಿ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕ್ರಮಕೈಗೊಳ್ಳಬೇಕು. ನೊಂದ ಫಲಾನುಭವಿಗೆ ಭಾಗ್ಯ ಲಕ್ಷ್ಮೀ ಬಾಂಡ್ ನೀಡಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಎಂ.ಡಿ. ಅಯೂಬ್ ಆಗ್ರಹಿಸಿದ್ದಾರೆ.
ಭಾಗ್ಯ ಲಕ್ಷ್ಮೀ ಬಾಂಡ್‌ಗಾಗಿ ಕಳೆದ ಮೂರು ವರ್ಷಗಳಿಂದ ಕಚೇರಿಗೆ ಅಲೆದು ಬೇಸತ್ತಿದ್ದೇನೆ. ಅವರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗೆ ಮನವಿ ನೀಡಲಾಗಿದೆ. ಬಾಂಡ್ ಕಳೆದು ಹೋಗಿದೆ ಎಂದು ಹೇಳಲಾಗುತ್ತಿದೆ.-
ನಾಜಿಯಾ, ನೊಂದ ಫಲಾನುಭವಿ
-ನಾಗರಾಜ ತೇಲ್ಕರ್