Advertisement

ಮೂರು ದಾರಿಗಳು

12:45 PM May 07, 2018 | |

ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (ಪಿಪಿಎಫ್) ನಮ್ಮಲ್ಲಿ ಜನಪ್ರಿಯವಾಗಿರುವ ಸಣ್ಣ ಹೂಡಿಕೆಯ ವಿಧಾನ. ಈ ಯೋಜನೆಯಲ್ಲಿ ಹಣ ಹೂಡಿದರೆ ಅದಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ. 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಹಣ ಕೈಗೆ ಬರುತ್ತದೆ. ಆ ಮೊತ್ತವನ್ನು ಹೇಗೆಲ್ಲಾ ಬಳಸಬಹುದು ಗೊತ್ತಾ?

Advertisement

ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (ಪಿಪಿಎಫ್) ನಮ್ಮಲ್ಲಿ ಜನಪ್ರಿಯವಾಗಿರುವ ಸಣ್ಣ ಹೂಡಿಕೆಯ ವಿಧಾನ. ಇದರ ಜನಪ್ರಿಯತೆಗೆ ಅನೇಕ ಕಾರಣಗಳಿವೆ. ಮೊದಲನೆಯದು, ಈ ಹೂಡಿಕೆಗೆ ಸರ್ಕಾರದ ಬೆಂಬಲವಿದೆ. ಹಾಗಾಗಿ ಅಸಲು ಮತ್ತು ಬಡ್ಡಿಗೆ ಮೋಸ ಆಗುವುದಿಲ್ಲ. ಎರಡನೆಯದಾಗಿ, ಬಡ್ಡಿ ಸಂಪೂರ್ಣವಾಗಿ ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ. ಇದರಿಂದಾಗಿ ಈಗಿನ ಶೇ.7.6ರಷ್ಟು ಕಡಿಮೆ ಬಡ್ಡಿ ದರದ ವೇಳೆಯಲ್ಲೂ ಪಿಪಿಎಫ್ ಮಧ್ಯಮ ವರ್ಗವನ್ನು ಆಕರ್ಷಿಸುತ್ತಿದೆ.

ಮೂರನೆಯದಾಗಿ, ಪಿಪಿಎಫ್ನಲ್ಲಿ ಹೂಡಿಕೆಯ ಮೊತ್ತವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆಯಿಂದ ವಿನಾಯ್ತಿ ಹೊಂದಿದೆ.  ಕೊನೆಯದಾಗಿ, ವಾಯಿದೆಯಾಗುವ ಮೊತ್ತವು ವಿಮೋಚನಾ ವರ್ಷದಂದು ಸಂಪೂರ್ಣವಾಗಿ ತೆರಿಗೆ ಮುಕ್ತ. ಇಷ್ಟೊಂದು ಅನುಕೂಲಗಳಿರುವ ಪಿಪಿಎಫ್ ವಾಯಿದೆ ಮುಗಿದು, ಕೈಗೆ ಸಿಗುವ ದೊಡ್ಡ ಮೊತ್ತವನ್ನು ಏನು ಮಾಡಬಹುದು? ಇಲ್ಲಿವೆ ಆಯ್ಕೆಗಳು:

1. ಹೆಚ್ಚುವರಿ ಕೊಡುಗೆಯಿಲ್ಲದೆ ಪಿಪಿಎಫ್ ಖಾತೆ ವಿಸ್ತರಿಸಬಹುದು: ಇದು ಪಿಪಿಎಫ್ನಲ್ಲಿ ಡಿಫಾಲ್ಟ್ ಆಯ್ಕೆ. ಬೇರೆ ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳದಿದ್ದರೆ, ಆಗ ಡಿಫಾಲ್ಟ್ ಆಗಿ ವಾಯಿದೆಗೊಂಡ ಪಿಪಿಎಫ್ ಯಾವುದೇ ಹೆಚ್ಚುವರಿ ಕೊಡುಗೆಗಳಿಲ್ಲದೆ 5 ವರ್ಷಗಳ ಅವಧಿಗೆ ವಿಸ್ತರಣೆಗೊಳ್ಳುತ್ತದೆ. ಐದೈದು ವರ್ಷಗಳಂತೆ ಬೇಕೆನಿಸಿದಷ್ಟು ಕಾಲ ಮುಂದಕ್ಕೊಯ್ಯಬಹುದು. ಪಿಪಿಎಫ್ ಮೇಲೆ ತೆರಿಗೆ ರಹಿತ ಬಡ್ಡಿಯ ಗಳಿಕೆ ಆಗಲೂ ಮುಂದುವರಿಯಲಿದೆ. ಹೂಡಿಕೆದಾರರು ಬಯಸಿದಾಗ ಈ ಹಣವನ್ನು ವಿತ್‌ ಡ್ರಾ ಮಾಡಬಹುದು.

2. ಹೆಚ್ಚುವರಿ ಕೊಡುಗೆಯೊಂದಿಗೆ ಪಿಪಿಎಫ್ ಖಾತೆ ವಿಸ್ತರಿಸಬಹುದು: ನೆನಪಿಡಿ, ನಿಮ್ಮ ಪಿಪಿಎಫ್ ಖಾತೆಯ ವಾಯಿದೆಯಾದಾಗ, ಕೊಡುಗೆ ಸಹಿತ ಪಿಪಿಎಫ್ ಖಾತೆ ವಿಸ್ತರಣೆಯಾಗಬೇಕಾದರೆ, ನಿರ್ದಿಷ್ಟವಾಗಿ ಫಾರಂ ಎಚ್‌ ಅನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ಈ ಆಯ್ಕೆಯಲ್ಲೂ ಐದೈದು ವರ್ಷಗಳ ಅವಧಿಗೆ ವಿಸ್ತರಿಸುತ್ತಾ ಹೋಗಬಹುದಾಗಿದೆ. ಆದರೆ, ನಿಮ್ಮ ಪಿಪಿಎಫ್ ವಾಯಿದೆಯಾದ 1 ವರ್ಷದೊಳಗೆ ಕೊಡುಗೆ ಸಹಿತ ಖಾತೆಯ ವಿಸ್ತರಣೆಗಾಗಿ ಫಾರಂ ಎಚ್‌ ಸಲ್ಲಿಸಬೇಕು.

Advertisement

ಒಂದು ವೇಳೆ ಫಾರಂ ಎಚ್‌ ಸಲ್ಲಿಸದೇ ಹೋದರೆ, ಆ ನಂತರ ನೀವು ಖಾತೆಗೆ ಜಮಾ ಮಾಡುವ ಹೆಚ್ಚುವರಿ ಠೇವಣಿಗೆ ಹಾಗೂ ಗಳಿಸುವ ಬಡ್ಡಿಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ಯಾವುದೇ ಪ್ರಯೋಜನ ಸಿಗುವುದಿಲ್ಲ. ನೆನಪಿಡಿ, ಒಮ್ಮೆ ನೀವು ಕೊಡುಗೆ ಸಹಿತ ವಿಸ್ತರಣೆಗಾಗಿ ಫಾರಂ ಎಚ್‌ ಅನ್ನು  ಆಯ್ಕೆ ಮಾಡಿಕೊಂಡರೆ, ಆ ಬಳಿಕ ಹಿಂದಿನ ಆಯ್ಕೆಗೆ ಹೋಗಲು ಸಾಧ್ಯವಾಗುವುದಿಲ್ಲ. 

3. ವಾಯಿದೆಯಾದಾಗ ಪಿಪಿಎಫ್ ಖಾತೆಯನ್ನು ಮುಚ್ಚಬಹುದು: ಪಿಪಿಎಫ್ನಲ್ಲಿ ನಿಯಮಿತವಾಗಿ ನಿಮಗೆ ಬಡ್ಡಿ ಕೈಗೆ ಸಿಗುವುದಿಲ್ಲ, ಆದರೆ ಪಿಪಿಎಫ್ ಖಾತೆಯಲ್ಲಿ ಸೇರುತ್ತಾ ಹೋಗಿರುತ್ತದೆ. . ನೀವು ವಿತ್‌ಡ್ರಾ ಮಾಡುವಾಗ, ಯಾವುದೇ ತೆರಿಗೆಯ ಬಾಧ್ಯತೆಯಿಲ್ಲದೆ ಅಸಲು ಮತ್ತು ಬಡ್ಡಿಯನ್ನು ಪಡೆಯುತ್ತೀರಿ.

ವಿತ್‌ಡ್ರಾವಲ್‌ ಅನ್ನು ಆಯ್ಕೆ ಮಾಡುವಾಗ ಒಮ್ಮೆಲೇ ಪೂರ್ತಿ ಮೊತ್ತವನ್ನು ಹಿಂಪಡೆಯಬಹುದು ಅಥವಾ 12 ತಿಂಗಳ ಗರಿಷ್ಠ ಅವಧಿಯ ತನಕ ಕಂತುಗಳಲ್ಲೂ ಹಿಂಪಡೆದುಕೊಳ್ಳಬಹುದಾಗಿದೆ. ಪಿಪಿಎಫ್ ಅನ್ನು ಮುಚ್ಚುವ ಸಂಬಂಧ ನಿರ್ದಿಷ್ಟವಾಗಿ ನೀವು ಅರ್ಜಿ ಕೊಡದೇ ಹೋದರೆ ಅದು ಡಿಫಾಲ್ಟ್ ಆಗಿ ಕೊಡುಗೆ ರಹಿತವಾಗಿ 5 ವರ್ಷಗಳ ಅವಧಿಗೆ ವಿಸ್ತರಣೆಗೊಳ್ಳುತ್ತದೆ.

15 ವರ್ಷಗಳ ಕಾಲ ಹನಿ ಹನಿಯಂತೆ ಪೈಸೆಗೆ ಪೈಸೆ ಜೋಡಿಸಿ ಕೂಡಿಟ್ಟರೆ, ನಂತರ ದೊಡ್ಡ ಮೊತ್ತ ಒಟ್ಟಿಗೇ ಕೈಗೆ ಸಿಗುತ್ತಿದೆ. ಯೋಚನೆ ಮಾಡಿ ನಿಮ್ಮ ಕುಟುಂಬದ ನೆಮ್ಮದಿಗೆ, ಅನುಕೂಲಕ್ಕೆ ಅದನ್ನು ವಿನಿಯೋಗಿಸಿ. ಆಯ್ಕೆ ಸಂಪೂರ್ಣವಾಗಿ ನಿಮ್ಮದೇ! 

* ರಾಧ

Advertisement

Udayavani is now on Telegram. Click here to join our channel and stay updated with the latest news.

Next