Advertisement

ಮೂರು ಸಾವಿರ ಪತ್ನಿಯರೊಡೆಯನಿಗೆ ಸೀತೆ ಬೇಕಿತ್ತೇ?

06:24 PM Dec 09, 2019 | mahesh |

ರಾವಣನ ಅಂತಃಪುರದಲ್ಲಿ ಮೂರು ಸಾವಿರ ಸ್ತ್ರೀಯರು ಇದ್ದರು. ಮೂಲ ರಾಮಾಯಣದಲ್ಲಿ ಇವರಲ್ಲಿ ಯಾರನ್ನೂ ಅಪಹರಿಸಿಲ್ಲ, ಅವರೆಲ್ಲ ಒಲಿದುಬಂದವರು ಎಂದು ವರ್ಣಿಸಲಾಗಿದೆ. ಒಬ್ಬರಾದರೆ, ಇಬ್ಬರಾದರೆ, ನೂರು ಮಂದಿಯಾದರೆ, ರಾವಣನಂತಹ ಸಾಮ್ರಾಟನಿಗೆ ಒಲಿದುಬಂದವರು ಎನ್ನಬಹುದಿತ್ತು. ಮೂರು ಸಾವಿರ ಮಂದಿಯನ್ನೂ ಒಲಿದು ಬಂದವರು ಎನ್ನಲು ಸಾಧ್ಯವೇ? ಅಪಹರಣಕ್ಕೊಳಗಾದ ಜಾನಕಿ ಅಶೋಕವನದಲ್ಲಿ ರಾಮನಿಗಾಗಿ ಶೋಕಿಸುತ್ತಿರುವಾಗಲೇ, ಸುಂದರಕಾಂಡದಲ್ಲಿ ಅವರೆಲ್ಲ ಒಲಿದುಬಂದವರು ಎಂಬ ಮಾತು ಕೇಳಿಸುತ್ತದೆ. ಸೀತೆಯೊಬ್ಬಳೇ ಅಪಹರಣಕ್ಕೊಳಗಾದವಳು ಎಂಬ ಧ್ವನಿಯೂ ಇದರ ಹಿಂದಿದೆ. ವಸ್ತುಸ್ಥಿತಿಯಲ್ಲಿ ರಾವಣ ಸೀತೆಯನ್ನು ಅಪಹರಿಸಿದ್ದು, ತನ್ನ ಮಲತಾಯಿಯ ಮಗಳು ಶೂರ್ಪನಖಿಗಾಗಿ (ಮೊರದಂತಹ ಉಗುರುಗಳಿರುವವಳು ಶೂರ್ಪನಖಿ, ಈಕೆಯನ್ನು ಕುವೆಂಪು ತಮ್ಮ ರಾಮಾಯಣ ದರ್ಶನಂನಲ್ಲಿ ಚಂದ್ರನಖಿ ಎಂದು ವರ್ಣಿಸಿದ್ದಾರೆ).

Advertisement

ಶ್ರೀರಾಮನ ಮೇಲೆ ಮೋಹಗೊಂಡ ಶೂರ್ಪನಖಿ, ಜನಸ್ಥಾನದಲ್ಲಿದ್ದ ರಾಮನ ಬಳಿ ತೆರಳಿ, ತನ್ನನ್ನು ಮದುವೆಯಾಗು ಎಂದು ಬೇಡಿಕೆಯಿಡುತ್ತಾಳೆ. ನಾನು ವಿವಾಹಿತ, ನನ್ನ ತಮ್ಮನ ಬಳಿ ಹೋಗು ಎಂದು ರಾಮ ತಪ್ಪಿಸಿಕೊಳ್ಳುತ್ತಾನೆ. ಲಕ್ಷ್ಮಣ, ನಾನೂ ಒಲ್ಲೆ ಎನ್ನುತ್ತಾನೆ. ಆಕೆ ಮತ್ತೆ ರಾಮನ ಬಳಿ ಬರುತ್ತಾಳೆ. ಆಗ ಲಕ್ಷ್ಮಣ ಅವಳ ಮೂಗನ್ನು ಕತ್ತರಿಸಿ ವಿಕಾರಗೊಳಿಸುತ್ತಾನೆ. ಆಕೆ ಸಿಟ್ಟು, ಬೇಸರ, ಹತಾಶೆಯಿಂದ ಪೂತ್ಕರಿಸುತ್ತ ತನ್ನ ಸಹೋದರರಾದ ಖರದೂಷಣರ (ಇವರೂ ರಾವಣನಿಗೆ ಮಲತಾಯಿಯ ಮಕ್ಕಳು) ಬಳಿ ದೂರು ಸಲ್ಲಿಸುತ್ತಾಳೆ. ಅವರೆಲ್ಲ ಒಂದು ದೊಡ್ಡ ದಂಡನ್ನೇ ಕಟ್ಟಿಕೊಂಡು ಬಂದು ರಾಮನ ಮೇಲೆ ದಾಳಿ ಮಾಡುತ್ತಾರೆ. 14 ಕೋಟಿ ರಾಕ್ಷಸರನ್ನು ಏಕಾಂಗಿಯಾಗಿ ರಾಮ ಸಂಹರಿಸುತ್ತಾನೆ ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಅಂತಹ ಭೀಕರ ಯುದ್ಧದಲ್ಲಿ ಖರದೂಷಣರು ಮೃತರಾದಾಗ ರಾವಣ ಕೆರಳುತ್ತಾನೆ. ತನ್ನ ಅತ್ಯಾಪ್ತ ಸೋದರರ ಸಾವು, ತಂಗಿಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಅವನು ಸೀತೆಯನ್ನು ಅಪಹರಿಸುತ್ತಾನೆ. ಆಕೆಯ ಅಪಹರಣವನ್ನು ಬಹಳ ಯೋಜಿತವಾಗಿ, ಶಿಸ್ತುಬದ್ಧವಾಗಿ ಮಾರೀಚನ ಸಹಾಯದಿಂದ ರಾವಣ ಮಾಡಿ ಮುಗಿಸುತ್ತಾನೆ. ಅವನ ಉದ್ದೇಶ ರಾಮನ ಮೇಲೆ ಸೇಡು ತೀರಿಸಿಕೊಳ್ಳುವುದು, ಅವನನ್ನು ಅವಮಾನಿಸುವುದು. ಸೀತೆಯನ್ನು ಅಪಹರಿಸಿದ ನಂತರ ರಾವಣನ ಯೋಚನೆ ಬದಲಾಗುತ್ತದೆ. ಅವಳ ಸೌಂದರ್ಯ ನೋಡಿ ಮಾರುಹೋದ ಅವನು, ಅವಳನ್ನು ತನ್ನ ಪತ್ನಿಯಾಗಿ ಹೊಂದಲು ಬಯಸುತ್ತಾನೆ. ಬೇರೊಬ್ಬನ ಪತ್ನಿಯನ್ನು ಬಲಾತ್ಕಾರವಾಗಿ ಅಪಹರಿಸಿ ತನ್ನ ಪತ್ನಿಯಾಗಿ ಮಾಡಿಕೊಳ್ಳಲು ಬಯಸಿದ ರಾವಣ, ಆಕೆಯನ್ನು ಸತತವಾಗಿ ಅನುನಯಿಸುತ್ತಲೇ ಹೋಗುತ್ತಾನೆ. ಎಲ್ಲಿಯೂ ಬಲಾತ್ಕರಿಸುವುದಿಲ್ಲ. ಇದಕ್ಕೆ ಕಾರಣ ತಲೆ ಸಿಡಿದು ಹೋಳಾಗುವ ಶಾಪದ ಭೀತಿ. ಸೀತೆ ಇನ್ನೊಂದು ಕಡೆ ಶಪಥ ಮಾಡಿರುತ್ತಾಳೆ. ಇನ್ನೊಂದು ವರ್ಷದೊಳಗೆ ಶ್ರೀರಾಮ ಬಂದು ತನ್ನನ್ನು ಕರೆದುಕೊಂಡು ಹೋಗದಿದ್ದರೆ, ತಾನು ಪ್ರಾಯೋಪವೇಶ (ಉಪವಾಸ ಮಾಡಿ ಮಾಡಿಯೇ ಸಾಯುವುದು) ಮಾಡಿ ಸಾಯುತ್ತೇನೆ ಎನ್ನುವುದು ಅವಳ ಪ್ರತಿಜ್ಞೆ. ಅಚ್ಚರಿಯೆಂದರೆ ಅಷ್ಟರೊಳಗೆ ರಾಮಬಂದು ಆಕೆಯನ್ನು ಬಿಡಿಸಿಕೊಳ್ಳುತ್ತಾನೆ. ಆಗ ಸರಿಯಾಗಿ ಒಂದುವರ್ಷ ಮುಗಿದಿರುತ್ತದೆ.

ಸೇಡಿಗೆ ಅಪಹರಿಸಿ ನಂತರ, ಸೀತೆಯನ್ನು ಮದುವೆಯಾಗಲು ಬಯಸಿದ ರಾವಣ, ಉಳಿದ 3000 ಪತ್ನಿಯರನ್ನು ಅಪಹರಿಸಿಲ್ಲ ಎಂದರೆ ನಂಬಲು ಸಾಧ್ಯವೇ? ಅಷ್ಟಕ್ಕೂ ಇಷ್ಟು ಹೆಂಡತಿಯರು ಯಾಕೆ ಬೇಕು? ಇವೆಲ್ಲ ಒಂದು ಶೋಕಿಯಲ್ಲವೇ? ಅವರಾಗಿಯೇ ಒಲಿದು ಬಂದರೂ ಎಂದಿಟ್ಟುಕೊಂಡರೂ, ಅವರನ್ನೆಲ್ಲ ಇಟ್ಟುಕೊಂಡು ಏನು ಮಾಡಬೇಕೆಂಬ ವಿವೇಚನೆ ಆತನಿಗಿರಲಿಲ್ಲವೇ? ರಂಭೆಯನ್ನು ಅತ್ಯಾಚಾರ ಮಾಡಿದ ಆ ವ್ಯಕ್ತಿಯ ಚಾರಿತ್ರ್ಯವನ್ನು ನಂಬಲು ಸಾಧ್ಯವೇ? ತನ್ನ ಹಿತಕ್ಕಾಗಿ, ತನ್ನ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಮಾತನಾಡುವ, ಬದಲಾಗುವ ರಾವಣ ಒಬ್ಬ ಸ್ತ್ರೀಲಂಪಟ. ಅವನ ಅತಿದೊಡ್ಡ ದೌರ್ಬಲ್ಯವೂ ಹೌದು. ಅವನ ನಾಶಕ್ಕೆ ಕಾರಣವಾದ ಸತ್ಯವೂ ಹೌದು.

-ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next