ಮೈಸೂರು: ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್‌ನ 2018-19ನೇ ಸಾಲಿನ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಮೂವರು ವಿದ್ಯಾರ್ಥಿಗಳು ರ್‍ಯಾಂಕ್ ಹಾಗೂ ಚಿನ್ನದ ಪದಕ ಗಳಿಸಿದ್ದಾರೆ.
ಮೈಸೂರಿನ ರಾಯಲ್ ಕಾನ್ಕಾರ್ಡ್ ಇಂಟರ್‌ನ್ಯಾಷನಲ್ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಮೊನಿಶಾ ರಾಜ್ ಎಂ., ಅಂತಾರಾಷ್ಟ್ರೀಯ ಗಣಿತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಒಂದನೇ ರ್‍ಯಾಂಕ್ ಹಾಗೂ ಚಿನ್ನದ ಪದಕ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಇಂಗ್ಲಿಷ್ ಒಲಿಂಪಿಯಾಡ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ 1ನೇ ರ್‍ಯಾಂಕ್ ಮತ್ತು ಚಿನ್ನದ ಪದಕವನ್ನು ವಿದ್ಯಾ ವಿಕಾಸ್ ಪ್ರೌಢಶಾಲೆಯ 1ನೇ ತರಗತಿ ವಿದ್ಯಾರ್ಥಿಗಳಾದ ಮಾಯಾಂಕ್ ಎಸ್ ಅಥೇರಿಯಾ ಮತ್ತು ಸಾಕೇತ್ ಎಂ.ಕೆ. ಪಡೆದರು.
33 ಸಾವಿರ ವಿದ್ಯಾರ್ಥಿಗಳು: 2018-19ನೇ ಸಾಲಿನ ಎಸ್‌ಒಎಫ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ 30 ದೇಶಗಳ 1400ಕ್ಕೂ ಹೆಚ್ಚು ನಗರಗಳ 50 ಸಾವಿರ ಶಾಲೆಗಳ 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗ ವಹಿಸಿದ್ದರು. ಮೈಸೂರು ನಗರದಿಂದಲೇ 33 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸನ್ಮಾನ ಕಾರ್ಯಕ್ರಮ: ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್ ನವದೆಹಲಿಯಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಒಲಿಂಪಿ ಯಾಡ್ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆರು ಒಲಿಂಪಿಯಾಡ್ ಪರೀಕ್ಷೆ ಗಳಲ್ಲಿ ಅಗ್ರ 3 ಅಂತಾರಾಷ್ಟ್ರೀಯ ರ್‍ಯಾಂಕ್ ಪಡೆದವ ರನ್ನು ಸನ್ಮಾನಿಸಲಾಯಿತು. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅತಿಥಿಗಳಾಗಿದ್ದರು.
ಶೈಕ್ಷಣಿಕ ಜ್ಞಾನ ಹೆಚ್ಚಿಸಲು ಕ್ರಮ: ಎಸ್‌ಒಎಫ್ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮಹಬೀರ್ ಸಿಂಗ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದವರ ಜತೆಗೆ ಸುಮಾರು 6300 ಶಾಲೆಗಳ 61000 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಅಗ್ರ ರ್‍ಯಾಂಕ್ ನೀಡಲಾಗಿದೆ. ಇದರ ಜತೆಗೆ ಸುಮಾರು 8 ಲಕ್ಷ ಮಕ್ಕಳಿಗೆ ತಮ್ಮ ಶಾಲೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಕ್ಕಾಗಿ ಮೆಡಲ್ಸ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2000 ಮಂದಿ ಪ್ರಾಚಾರ್ಯರು ಹಾಗೂ ಶಿಕ್ಷಕರನ್ನು ಅವರ ಶೈಕ್ಷಣಿಕ ಬದ್ಧತೆಗಾಗಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನವನ್ನು ಸುಧಾರಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಿದ್ದಕ್ಕಾಗಿ ಗೌರವಿಸಲಾಗಿದೆ ಎಂದು ವಿವರಿಸಿದರು.
2019-20ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಒಎಫ್ ಹಾಲಿ ಇರುವ ಒಲಿಂಪಿಯಾಡ್ ಪರೀಕ್ಷೆಗಳ ಜತೆಗೆ ಎಸ್‌ಒಎಫ್ ಅಂತಾರಾಷ್ಟ್ರೀಯ ವಾಣಿಜ್ಯ ಒಲಿಂಪಿ ಯಾಡ್ ಪರೀಕ್ಷೆಗಳನ್ನು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ. ಪರೀಕ್ಷಾ ಮಂಡಳಿ ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳನ್ನು ಸಜ್ಜು ಗೊಳಿಸುವ ಸಲುವಾಗಿ ಈ ಪರೀಕ್ಷೆ ಆಯೋ ಜಿಸಲಾಗುತ್ತಿದೆ ಎಂದರು.