Advertisement

ಉಕ್ರೇನ್‌ನಲ್ಲಿ ಮಂಗಳೂರಿನ ಮೂವರು ವಿದ್ಯಾರ್ಥಿಗಳು ಕ್ಷೇಮ

12:29 AM Feb 25, 2022 | Team Udayavani |

ಮಂಗಳೂರು: ಉಕ್ರೇನ್‌ನಲ್ಲಿ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು, ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಎಲ್ಲರೂ ಸುರಕ್ಷಿತ ರಾಗಿದ್ದಾರೆ; ಯಾವುದೇ ಆತಂಕ ಪಡುವ ಆವಶ್ಯಕತೆ ಇಲ್ಲ ಎಂದು ಈ ಮೂವರ ಕುಟುಂಬದ ಮೂಲಗಳು ತಿಳಿಸಿವೆ. ಮಂಗಳೂರು ನಗರದ ಪಡೀಲ್‌ನ ಕ್ಲೇಟನ್‌ ಡಿ’ಸೋಜಾ, ದೇರೆಬೈಲ್‌ನ ಅನೈನಾ ಅನ್ನ  ಮತ್ತು ಗುರುಪುರ ಕೈಕಂಬದ ಲಾಯ್ಡ  ಪಿರೇರಾ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು.

Advertisement

ಕ್ಲೇಟನ್‌ ಅವರು ಉಕ್ರೇನ್‌ನ ರಾಜಧಾನಿ ಕಿವ್‌ನಲ್ಲಿರುವ ಬೊಗೊಮೊಲೆಟ್ಸ್‌ ನ್ಯಾಶನಲ್‌ ಮೆಡಿಕಲ್‌ ಯೂನಿವರ್ಸಿಟಿಯಲ್ಲಿ, ಅನೈನಾ ಅನ್ನ ಉಕ್ರೇನ್‌ನ ಖಾರ್ಕಿವ್‌ ನ್ಯಾಶನಲ್‌ ಮೆಡಿಕಲ್‌ ಯೂನಿವರ್ಸಿಟಿಯಲ್ಲಿ  ಹಾಗೂ ಲಾಯ್ಡ ಪಿರೇರಾ ಪೆಟ್ರೋ ಮೊಹಿಲಾ ಬ್ಲ್ಯಾಕ್‌ ಸೀ ನ್ಯಾಶನಲ್‌ ಯೂನಿವರ್ಸಿಟಿಯಲ್ಲಿ  ಎಂಬಿಬಿಎಸ್‌ ಶಿಕ್ಷಣ ಪಡೆಯುತ್ತಿದ್ದಾರೆ.

ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್‌ :

ಇಲ್ಲಿ ಸದ್ಯದ ಮಟ್ಟಿಗೆ ಯಾವುದೇ ಆತಂಕ ಇಲ್ಲ. ಆದರೆ ಇಲ್ಲಿಂದ ಬೇರೆ ಕಡೆಗೆ ತೆರಳಲು ಸದಾ ಸನ್ನದ್ಧರಾಗಿರುವಂತೆ ಭಾರತೀಯ ಎಂಬೆಸಿ ನಮಗೆ ಸೂಚಿಸಿದೆ. ಯಾವುದೇ ಕ್ಷಣದಲ್ಲಿ ನಮ್ಮನ್ನು ಏರ್‌ ಲಿಫ್ಟ್‌  ಮಾಡುವ ಸಾಧ್ಯತೆ ಇದೆ… ಇದು ಕ್ಲೇಟನ್‌ ಡಿ’ಸೋಜಾ ಅವರ ಮಾತು.

ಪಡೀಲ್‌ನ ಕೆಂಬಾರು ನಿವಾಸಿ ಮರ್ವಿನ್‌ ಡಿ’ಸೋಜಾ ಮತ್ತು ಒಲಿನ್‌ ಡಿ’ಸೋಜಾ ದಂಪತಿಯ ಪುತ್ರ ಕ್ಲೇಟನ್‌ ಮೇರಿಹಿಲ್‌ನ ಮೌಂಟ್‌ ಕಾರ್ಮೆಲ್‌ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಮುಗಿಸಿ ನೀಟ್‌ ಪರೀಕ್ಷೆ ಬರೆದು ಉತ್ತೀರ್ಣರಾಗಿ 3 ತಿಂಗಳ ಹಿಂದಷ್ಟೇ ಉಕ್ರೇನ್‌ಗೆ ತೆರಳಿದ್ದರು. ಅಲ್ಲಿ  ಹಾಸ್ಟೆಲ್‌ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಅಲ್ಲಿ ಆನ್‌ಲೈನ್‌ ತರಗತಿ ನಡೆಯುತ್ತಿದೆ.

Advertisement

ಕ್ಲೇಟನ್‌ ತನ್ನ ಮನೆಯವರ ಜತೆ ನಿಕಟ ಸಂಪರ್ಕದಲ್ಲಿದ್ದು, ಗುರುವಾರ ಬೆಳಗ್ಗೆ ಕೂಡ ಮಾತನಾಡಿದ್ದಾರೆ. ಆನ್‌ಲೈನ್‌ ತರಗತಿ ನಡೆಯುತ್ತಿರುವ ಕಾರಣ ತನ್ನ ದೂರವಾಣಿ ನಂಬರನ್ನು ಯಾರಿಗೂ ಕೊಡುವುದು ಬೇಡ ಎಂದು ಪುತ್ರ ತಿಳಿಸಿರುವುದಾಗಿ ತಂದೆ ಮರ್ವಿನ್‌ ಡಿ’ಸೋಜಾ “ಉದಯವಾಣಿ’ಗೆ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ  ನಾವು ಇರುವ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಿಂದ ಸುಮಾರು 50 ಕಿ.ಮೀ. ದೂರದಲ್ಲಿ ಕ್ಷಿಪಣಿಯೊಂದು ಅಪ್ಪಳಿಸಿದ ಬಗ್ಗೆ  ಮಾಹಿತಿ ಇದೆ. ನಮ್ಮ  ಕಾಂಪಸ್‌ನ ಹತ್ತಿರದಲ್ಲಿ ಎಲ್ಲೂ  ಈತನಕ ಯಾವುದೇ ಘಟನೆ ಸಂಭವಿಸಿಲ್ಲ. ಆತಂಕ ಪಡುವ ಅಗತ್ಯವಿಲ್ಲ. ಕ್ಯಾಂಪಸ್‌ ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಜನಜೀವನ ಸಾಮಾನ್ಯ ಸ್ಥಿತಿಯಲ್ಲಿದೆ ಎಂದು ಕ್ಲೇಟನ್‌ ವಿವರಿಸಿದ್ದಾರೆ.

ಪುತ್ರ ಕ್ಲೇಟನ್‌ ಉಕ್ರೇನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ  ಮರ್ವೀನ್‌ ಅವರು ದ.ಕ. ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಮಿಲಿಟರಿ ನೆಲೆಗಳ ಮೇಲೆ ದಾಳಿ  :

ಉಕ್ರೇನ್‌ನ ಪೂರ್ವ ಭಾಗದಲ್ಲಿ ದಾಳಿ ನಡೆಯುತ್ತಿದ್ದು, ಅದರಲ್ಲೂ ವಿಶೇಷವಾಗಿ ಮಿಲಿಟರಿ ವಾಯುನೆಲೆಗಳ ಮೇಲೆ ಮಾತ್ರ ದಾಳಿ ನಡೆಯುತ್ತಿದೆ. ಪಶ್ಚಿಮ ಉಕ್ರೇನ್‌ ಸದ್ಯದ ಮಟ್ಟಿಗೆ ಸುರಕ್ಷಿತವಾಗಿದೆ ಎಂದು ಲಾಯ್ಡ  ಪಿರೇರಾ “ಉದಯವಾಣಿ’ಗೆ ತಿಳಿದ್ದಾರೆ.

ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗೆ ಆತಂಕಿತರಾಗಿದ್ದಾರೆ. ಆದರೆ ಭಾರತೀಯ ರಾಯಭಾರ ಕಚೇರಿಯವರು ಶಿಷ್ಟಾಚಾರದ ಪ್ರಕಾರ ಎಲ್ಲರಿಗೂ ನೆರವು ಒದಗಿಸುತ್ತಿದ್ದಾರೆ ಹಾಗೂ ಜನರನ್ನು ಪೂರ್ವ ಭಾಗದಿಂದ ಪಶ್ಚಿಮ ಭಾಗಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಬ್ರಹ್ಮಾವರದ ಎಂಬಿಬಿಎಸ್‌ ವಿದ್ಯಾರ್ಥಿ ರೋಹನ್‌ ಬಗ್ಲಿ :

ಉಡುಪಿ: ಬ್ರಹ್ಮಾವರ ಕೃಷಿ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಧನಂಜಯ ಬಗ್ಲಿಯವರ ಪುತ್ರ ರೋಹನ್‌ ಬಗ್ಲಿ ಉಕ್ರೇನ್‌ನ ಖಾರ್ಕಿವ್‌ ನ್ಯಾಶನಲ್‌ ಮೆಡಿಕಲ್‌ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು, ಸದ್ಯ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ.

ಉಕ್ರೇನ್‌ನಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದ ರೋಹನ್‌ ಅವರ ತಂದೆ ಜಿಲ್ಲಾಡಳಿತಕ್ಕೆ ಮಗನ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ರೋಹನ್‌ ಸುರಕ್ಷಿತವಾಗಿದ್ದಾರೆ.

ಮಗ ಖಾರ್ಕಿವ್‌ ವಿವಿಯಲ್ಲಿ 5ನೇ ವರ್ಷದ ಎಂಬಿಬಿಎಸ್‌ ಓದುತ್ತಿದ್ದಾನೆ. ಮಗನೊಂದಿಗೆ ರಾತ್ರಿ 8 ಗಂಟೆ ಸುಮಾರಿಗೆ ಆನ್‌ಲೈನ್‌ ಕಾಲ್‌ ಮೂಲಕ ಮಾತನಾಡಿದ್ದೇವೆ.

ಮಗ ಸುರಕ್ಷಿತವಾಗಿದ್ದಾನೆ. ಈಗಾಗಲೇ ವಾಸವಾಗಿದ್ದ ಸ್ಥಳದಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದಾರೆ. ಅಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಮಾಹಿತಿ ನೀಡಲಾಗಿದೆ.

ನೆಟ್‌ವರ್ಕ್‌, ವಿದ್ಯುತ್‌ ಕಡಿತ ಮಾಡಿರುವುದರಿಂದ ಸ್ವಲ್ಪ ಸಮಸ್ಯೆ ಯಾಗಿದೆಯಂತೆ ಎಂದು  ಡಾ| ಧನಂಜಯ ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next