ಸೋಮವಾರಪೇಟೆ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಕುಶಾಲನಗರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಾದ ಆರ್.ಆಕಾಶ್ (18), ಮ್ಯಾನ್ಸ್ ಕಾಂಪೌಂಡ್ ಬಳಿಯ ಗಗನ್ (18) ಮತ್ತು ಮೇಕೇರಿ ಗ್ರಾಮದ ಶಶಾಂಕ (18) ಮೃತ ದುರ್ದೈವಿಗಳು.
ರಮ್ಜಾನ್ ಆಚರಣೆಗೆಂದು ಸುಂಟಿಕೊಪ್ಪ ಸಮೀಪದ ಸಾಂಡಲ್‌ಕಾಡ್‌ನ ಸ್ನೇಹಿತನ ಮನೆಗೆ ಬಂದು ಊಟದ ನಂತರ ಕುಶಾಲನಗರದ ಮಾದಾಪಟ್ಟಣ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ ಸಂದರ್ಭ ಈ ಘಟನೆ ಸಂಭವಿಸಿದೆ. ಒಟ್ಟು 10 ವಿದ್ಯಾರ್ಥಿಗಳು ಮಡಿಕೇರಿಯಿಂದ ಸಾಂಡಲ್‌ಕಾಡ್‌ಗೆ ಬಂದಿದ್ದು,
ಈ ಪೈಕಿ ಮೃತ ಮೂವರು ಆಕಾಶ್‌ಗೆ ಸೇರಿದ ದ್ವಿಚಕ್ರ ವಾಹನದಲ್ಲಿ ಕುಶಾಲನಗರದ ಸರಕಾರಿ ಎಂಜಿನಿಯರಿಂಗ್ ಕಾಲೇಜು ಮುಂಭಾಗ ಕಾವೇರಿ ನದಿಗೆ ತೆರಳಿ ಈಜಲು ಪ್ರಾರಂಭಿಸಿದ್ದರು. ಈ ನಡುವೆ ಉಳಿದ ಸ್ನೇಹಿತರು ಸಾಂಡಲ್‌ಕಾಡಿನಿಂದ ಮಾದಾಪಟ್ಟಣದವರೆಗೆ ಬಸ್‌ನಲ್ಲಿ ಬಂದು ನದಿ ತಟಕ್ಕೆ ಬರುವ ಸಂದರ್ಭ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮುಳುಗುತ್ತಿದ್ದ ಸ್ನೇಹಿತರನ್ನು ಸಮೀಪದಲ್ಲಿದ್ದ ಸ್ಥಳೀಯರು ರಕ್ಷಿಸಲು ಮುಂದಾದರೂ ಪ್ರಯೋಜನವಾಗಿಲ್ಲ. ತಕ್ಷಣ ಕುಶಾಲನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ತಂಡ ಸ್ಥಳಕ್ಕೆ ಬಂದಿದ್ದು, ಮುಳುಗು ತಜ್ಞ ರಾಮಕೃಷ್ಣ ಸೇರಿ ಮೃತದೇಹಗಳನ್ನು ನದಿಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಕಾಶ್, ಮಡಿಕೇರಿಯ ಉಕ್ಕಡ ರಮೇಶ್ ಅವರ ಪುತ್ರನಾಗಿದ್ದು, ಗಗನ್, ಚೆಲುವರಾಜು ಅಲಿಯಾಸ್ ತಂಬಿ ಎಂಬುವರ ಪುತ್ರ. ಶಶಾಂಕ್, ಉಮೇಶ್ ಎಂಬುವರ ಪುತ್ರನಾಗಿದ್ದು, ಎಲ್ಲರೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.