Advertisement

ಇಳಿ ವಯಸ್ಸಿನಲ್ಲೂ ಕುಗ್ಗದ ಓದಿನ ಉತ್ಸಾಹ ಇಂಗ್ಲಿಷ್‌ ಪರೀಕ್ಷೆ ಬರೆದ ಮೂವರು ಹಿರಿಯರು

06:06 PM Jun 08, 2024 | Nagendra Trasi |

ಉದಯವಾಣಿ ಸಮಾಚಾರ
ವಿಜಯಪುರ:ಶೈಕ್ಷಣಿಕ ಸಾಧನೆಗಾಗಿ ಯುವ ಸಮೂಹ ಓದಿನ ಹಳವಂಡದಲ್ಲಿ ಕಂಗಲಾಗಿ ಜೀವನೋತ್ಸಾಹವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಗರದಲ್ಲಿ ಮೂವರು ಹಿರಿಯ ನಾಗರಿ ಕರು ವಯೋಮಾನದ ಹಂಗಿಲ್ಲದೇ ಸ್ನಾತಕೋತ್ತರ ಪರೀಕ್ಷೆ ಎದುರಿಸಿದ್ದು ವಿದ್ಯಾರ್ಥಿ ಯುವ ಸಮೂಹಕ್ಕೆ ಮಾದರಿ ಮಾತ್ರವಲ್ಲ, ಸ್ಫೂರ್ತಿಯಾಗಿದ್ದಾರೆ.

Advertisement

ಶುಕ್ರವಾರ ಮಧ್ಯಾಹ್ನ 2ರಿಂದ 5ರವರೆಗೆ ನಗರದ ಜೆಎಸ್ಸೆಸ್‌ ಕಾಲೇಜಿನಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ) ಕೇಂದ್ರಲ್ಲಿ ಈ ಮೂವರು ಹಿರಿಯ ನಾಗರಿಕರು ಸ್ನಾತಕೋತ್ತರ ಇಂಗ್ಲಿಷ್‌ ವಿಷಯದ ಪರೀಕ್ಷೆ ಎದುರಿಸಿದ್ದಾರೆ. ಈಗಾಗಲೇ ಕನ್ನಡ, ಹಿಂದಿ, ಸಮಾಜ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪರೀಕ್ಷೆ ಎದುರಿಸಿ, ಯಶಸ್ವಿಯಾಗಿರುವ 83ರ ಇಳಿಹರೆಯದ ನಿಂಗಯ್ಯ ಬಸಯ್ಯ ಒಡೆಯರ್‌, ಇದೀಗ ಇಂಗ್ಲಿಷ್‌ ವಿಷಯದಲ್ಲಿ ಸ್ನಾತಕೋತ್ತರ ಪರೀಕ್ಷೆ ಎದುರಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಗುಡೂರ ಮೂಲದ 83 ವರ್ಷದ ನಿಂಗಯ್ಯ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, 24 ವರ್ಷಗಳ ಹಿಂದೆಯೇ ಸೇವಾ ನಿವೃತ್ತಿ ಹೊಂದಿದ್ದಾರೆ. ಆದರೂ ಓದು ಹಂಬಲ, ಪದವಿ ಗಳಿಸಲು ಪರೀಕ್ಷೆ ಎದುರಿಸುವ ಕಲಿಕಾ ಆಸಕ್ತಿ ಕುಗ್ಗಿಲ್ಲ. ಬಡತನದ ಹಿನ್ನೆಲೆ ಇದ್ದರೂ 1956ರಲ್ಲಿ ಮೊದಲ ಬಾರಿಗೆ 1ನೇ ತರಗತಿ ಪರೀಕ್ಷೆ ಎದುರಿಸಿದ್ದೆ. ಸರ್ಕಾರಿ ಸೇವಾ ಹಂತದಲ್ಲಿ ಹೆಚ್ಚಿನ ಹಾಗೂ ಉನ್ನತ ಶಿಕ್ಷಣದ ಓದು ಸಾಧ್ಯವಾಗಲಿಲ್ಲ. ನಿವೃತ್ತಿ ಬಳಿಕ ಬಡತನದಿಂದ ಸಾಧ್ಯವಾಗದ ಶೈಕ್ಷಣಿಕ ಪದವಿಗಳನ್ನು ಪಡೆಯುವ ಹಂಬಲವನ್ನು ನಿವೃತ್ತಿ ಬಳಿಕ ಡೇರಿಸಿಕೊಳ್ಳಲು
ಮುಂದಾಗಿದ್ದೇನೆ. ನನ್ನ ಕನಸು ಕೈಗೂಡಲು ಇಗ್ನೊ ನೆರವಿಗೆ ಬಂದಿದೆ ಎನ್ನುತ್ತಾರೆ ನಿಂಗಯ್ಯ. ಕನ್ನಡ, ಹಿಂದಿ, ಸಂಸ್ಕೃತ ಹಾಗೂ ಇಂಗ್ಲಿಷ್‌ ಭಾಷಾ ಪ್ರವೀಣರಾಗಿರುವ ನಿಂಗಯ್ಯ, ಕನ್ನಡದಲ್ಲಿ ವಿವಿಧ ವಿಷಯಗಳ 15 ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಕಲಿಕೆಗೆ ವಯಸ್ಸಿನ ಹಂಗಿಲ್ಲ ಎನ್ನುವ ಈ ಹಿರಿಯ ಜೀವ, ಕಲಿಕೆಯಿಂದ ಹಿಂದೆ ಸರಿದ ದಿನದಿಂದಲೇ ನಮ್ಮ ಜ್ಞಾನ ಕಬ್ಬಿಣದಂತೆ ತುಕ್ಕು ಹಿಡಿಯಲಾರಂಭಿಸುತ್ತದೆ ಎನ್ನುವ ಮೂಲಕ ಶಿಕ್ಷಣದ ಮಹತ್ವ ಸಾರುತ್ತಿದ್ದಾರೆ. ಜಿಲ್ಲೆಯ ಸಿಂದಗಿ ಮೂಲದ ನಿವೃತ್ತ ಉಪನ್ಯಾಸಕ ಪಿ.ಎಂ.ಮಡಿವಾಳ ಕೂಡ ಇಂಗ್ಲಿಷ್‌ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದಾರೆ. ಉಪನ್ಯಾಸಕರಾಗಿ ನಿವೃತ್ತರಾದರೂ ಓದುವ ಹಂಬಲ, ಪರೀಕ್ಷೆ ಬರೆಯುವ ತುಡಿತ ಮಾತ್ರ ಇವರಿಗೆ ಇಂಗಿಲ್ಲ.

ಓರ್ವ ಪ್ರಾಧ್ಯಾಪಕನಾಗಿ ನಿತ್ಯೂ ಓದಿನಲ್ಲಿ ನಿರತನಾಗಿರಬೇಕು ಎಂಬ ಆಶಯದೊಂದಿಗೆ ಜ್ಞಾನ ಸಂಪಾದನೆಗಾಗಿ ಹೊಸತನ್ನು ಹುಡುಕು, ಸಂಶೋಧಿಸುವ ಮನಸ್ಥಿತಿ ಇರಬೇಕು. ನನ್ನ ಮಗಳು ಇಗ್ನೊ ಮೂಲಕವೇ ಸ್ನಾತಕೋತ್ತರ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾಗ ನಾನೂ ಅರ್ಜಿ ಹಾಕಿದ್ದೆ. ವಿದ್ಯಾರ್ಥಿಗಳು ಗುಣಮಟ್ಟದ ಬೋಧನೆ ಮಾಡುವ ಉದ್ದೇಶದಿಂದ ನಿವೃತ್ತಿ ನಂತರವೂ ಎಂಎ ಪರೀಕ್ಷೆ ಬರೆಯಲು ಮುಂದಾದೆ ಎನ್ನುತ್ತಾರೆ.

Advertisement

ಇನ್ನು ಐದು ವರ್ಷಗಳಲ್ಲಿ ಸೇವಾ ನಿವೃತ್ತಿ ಆಗುತ್ತಿರುವ ಕಲಾ ಶಿಕ್ಷಕ ನಾಗನಗೌಡ ಪಾಟೀಲ ಕೂಡ ಎಂಎ ಇಂಗ್ಲಿಷ್‌ ಪರೀಕ್ಷೆ ಬರೆದಿದ್ದಾರೆ. ಶಿವಮೊಗ್ಗದ ನಾಗನಗೌಡ, ಓದು ಹಾಗೂ ಶೈಕ್ಷಣಿಕ ಪದವಿ ಪಡೆಯುವುದಕ್ಕೆ ವಯಸ್ಸಿನ ಮಿತಿ ಎಂಬ ಹಂಗೇ ಇಲ್ಲ ಎಂದರು.

ಹಿರಿಯ ನಾಗರಿಕರು ಜೀವನೋತ್ಸಾಹದ ಶೈಕ್ಷಣಿಕ ಕಲಿಕಾ ಪ್ರೀತಿಯ ಹಂಬಲ ಕಂಡು ಇಗ್ನೊ ಕೇಂದ್ರದ ಸಂಯೋಜಕ ಡಾ|ಮಂಜುನಾಥ ಕೋರಿ ಕೂಡ ಸಂತಸಗೊಂಡಿದ್ದಾರೆ. ಹಿರಿಯ ನಾಗರಿಕರು ವೃದ್ಧಾಪದ್ಯದಲ್ಲೂ ಉನ್ನತ ಶಿಕ್ಷಣ ಪಡೆಯುವ ಕನಸಿನೊಂದಿಗೆ ಪರೀಕ್ಷೆ ಎದುರಿಸುತ್ತಿರುವುದು ಇಂದಿನ ವಿದ್ಯಾರ್ಥಿ ಯುಜನರಿಗೆ ಸ್ಫೂರ್ತಿದಾಯಕ.

ಇಗ್ನೊ ಕೇಂದ್ರದಲ್ಲಿ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ಪಡೆಯುವವರಿಗೆ ಹೆಚ್ಚು ಅವಕಾಶಗಳಿದ್ದು ಅಗತ್ಯ ಮೂಲಭೂತ ಸೌಲಭ್ಯಗಳೂ ಇವೆ ಎನ್ನುತ್ತಾರೆ. ಇಗ್ನೊ ವಿಜಯಪುರ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ| ರವಿಕಾಂತ ಕಮಲೇಕರ, ರಾಜ್ಯದ ಉತ್ತರ ಕರ್ನಾಟಕದಲ್ಲಿ ನಾವು 12 ಜಿಲ್ಲೆಗಳು ಮತ್ತು ಮಹಾರಾಷ್ಟ್ರದ 2 ಜಿಲ್ಲೆಗಳು ನಮ್ಮ ಇಗ್ನೊ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಯುವಜನರಂತೆ ಹಿರಿಯ ನಾಗರಿಕರು, ಉತ್ಸಾಹದಿಂದ ಉನ್ನತ ಶಿಕ್ಷಣ ಪಡೆಯಲು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.

ಇಗ್ನೊ ಅಧ್ಯಯನ ಕೇಂದ್ರದ ಮೇಲ್ವಿಚಾರಕಿ ಡಾ|ಭಾರತಿ ಖಾಸನೀಸ್‌, ಜೂನ 7ರಿಂದ ಆರಂಭಗೊಂಡಿರುವ ಪರೀಕ್ಷೆಗಳು ಜುಲೈ 15ರವರೆಗೆ ನಡೆಯಲಿವೆ. ಸರ್ಟಿಫಿಕೆಟ್‌ ಕೋರ್ಸ್‌, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕೋರ್ಸ್‌ಗಳ ಅಧ್ಯಯನಕ್ಕೆ ನಮ್ಮಲ್ಲಿ ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next