ಬೆಂಗಳೂರು: ಕೋವಿಡ್ ಮಹಾಮಾರಿ ಸೃಷ್ಟಿಸಿರುವ ಕೋಲಾಹಲಕ್ಕೆ ಪ್ರಪಂಚದ ಹಲವಾರು ದೇಶಗಳು ತತ್ತರಿಸಿಹೋಗಿವೆ. ಜನಸಾಮಾನ್ಯರು ಮಾತ್ರವಲ್ಲದೇ ಬೃಹತ್ ಉದ್ದಿಮೆಗಳು, ವ್ಯವಹಾರಗಳೇ ನೆಲಕಚ್ಚಿದ ಸ್ಥಿತಿಗೆ ತಲುಪಿವೆ.
ಇನ್ನೊಂದೆಡೆ ಈ ಮಹಾಮಾರಿಯಿಂದ ತನ್ನ ಜನರನ್ನು ರಕ್ಷಿಸಲು ಪ್ರತೀ ಸರಕಾರಗಳೂ ತಮ್ಮ ಗರಿಷ್ಠ ಪ್ರಯತ್ನವನ್ನು ಮಾಡುತ್ತಿವೆ. ಹಾಗೂ ಸರಕಾರದ ಈ ಪ್ರಯತ್ನಕ್ಕೆ ಸಂಘ ಸಂಸ್ಥೆಗಳು, ಉದ್ದಿಮೆದಾರರು, ಧಾರ್ಮಿಕ ಸಂಸ್ಥೆಗಳು ತಮ್ಮ ಕೈಲಾದ ಸಹಕಾರವನ್ನುನೀಡುತ್ತಿವೆ.
ಹಾಗೆಯೇ ರಾಜ್ಯದಲ್ಲಿ ಮುಖ್ಯಮಂತ್ರಿಯವರ ಕೋವಿಡ್ ಪರಿಹಾರ ನಿಧಿಗೆ ಹಲವರು ತಮ್ಮ ದೇಣಿಗೆಯನ್ನು ಸಲ್ಲಿಸುತ್ತಿದ್ದಾರೆ. ಇದರಲ್ಲಿ ಕೆಲವರು ಸಲ್ಲಿಸುವ ದೇಣಿಗೆಗಳು ಸಮಾಜಕ್ಕೆ ಪ್ರೇರಣೆಯಾಗುವಂತಿರುತ್ತದೆ.
ಈ ನಿಟ್ಟಿನಲ್ಲಿ ಹಾವೇರಿಯ ಮೂವರು ಪುಟಾಣಿ ವಿದ್ಯಾರ್ಥಿನಿಯರು ಇದೀಗ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ತಮ್ಮ ಉಳಿಕೆಯ ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಯ ವಿದ್ಯಾರ್ಥಿನಿಯರಾದ ಅವನಿ, ಸನ್ನಿಧಿ ಹಾಗೂ ದೀಪ್ತಿ ಎಂಬುವವರೇ ತಮ್ಮ ಮೂರು ವರ್ಷಗಳ ಪಿಗ್ಗಿ ಬ್ಯಾಂಕ್ ಸೇವಿಂಗ್ಸ್ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಿರುವ ಚಿಣ್ಣರಾಗಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ಪರಿಹಾರ ನಿಧಿಗೆ ನೀಡಿರುವ ಒಟ್ಟು ಮೊತ್ತ ಎಷ್ಟು ಗೊತ್ತೇ? 25 ಸಾವಿರ ರೂಪಾಯಿಗಳು!