ಬೆಂಗಳೂರು: ಪಡಿತರ ಆಹಾರ ವಿತರಣೆಯಲ್ಲಿ ಅಕ್ರಮ ಕಂಡುಬಂದ ಹಿನ್ನಲೆಯಲ್ಲಿ ನಗರದ ಮೂರು ನ್ಯಾಯ ಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ.
ಪಡಿತರ ಆಹಾರ ವಿತರಣೆಯಲ್ಲಿ ಲೋಪ ಕಂಡುಬಂದ ಹಿನ್ನಲೆಯಲ್ಲಿ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿ ನಗರದ ಮೂರು ನ್ಯಾಯ ಬೆಲೆ ಅಂಗಡಿಗಳ ಪರವಾನಗಿಗಳನ್ನು ರದ್ದು ಪಡಿಸಲು ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಘೋಷಿಸಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಮ್ಮೆಲೆ ನೀಡಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಡಿತರ ವಿತರಣೆ ಹಾಗೂ ದಾಸ್ತಾನು ಮಳಿಗೆಯಲ್ಲಿ ವ್ಯವಸ್ಥೆ ಬಗ್ಗೆ ತಪಾಸಣೆ ಕೈಗೊಳ್ಳಲಾಯಿತು ಎಂದು ಅವರು ಮಾಹಿತಿ ನೀಡಿದರು.
ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪಡಿತರ ವಿತರಣೆ ಮಾಡಿರುವ ಹಿನ್ನೆಲೆಯಲ್ಲಿ ಶಿವಾಜಿ ನಗರದ ಸತ್ಯ ಬಳಕೆದಾರರ ಸಹಕಾರ ಸಂಘ ನಡೆಸುತ್ತಿರುವ ಎಸ್.ಆರ್. 33 ಮತ್ತು 32 ಪಡಿತರ ವಿತರಣಾ ಕೇಂದ್ರಗಳು ಹಾಗೂ ಸ್ಯಾಪಿಂಗ್ ರಸ್ತೆಯಲ್ಲಿರುವ ಎಸ್.ಆರ್. 21 ಪಡಿತರ ವಿತರಣಾ ಕೇಂದ್ರಗಳನ್ನು ಮುಚ್ಚಿ ಅಮಾನತಿನಲ್ಲಿಡಲು ಆಹಾರ ಇಲಾಖೆಯ ಉಪನಿರ್ದೇಶಕರಾದ ನಾಗಭೂಷಣ್ ಅವರಿಗೆ ಸೂಚಿಸಿದರು.
ಕಾರ್ಯಾಚರಣೆಯಲ್ಲಿ ಆಹಾರ ಆಯೋಗದ ಸದಸ್ಯ ಹೆಚ್.ವಿ. ಶಿವಶಂಕರ್ ಸೇರಿದಂತೆ ಉಪಸ್ಥಿತರಿದ್ದರು.