Advertisement

ಬೆಳಪು ಗ್ರಾಮ: ಏಕಕಾಲದಲ್ಲಿ  ಮೂರು ಯೋಜನೆಗಳಿಗೆ ಚಾಲನೆ

02:00 AM Nov 13, 2018 | Team Udayavani |

ಕಾಪು: ಸುಡುಗಾಡು – ಕುಗ್ರಾಮ ಎಂದೇ ಪ್ರಸಿದ್ಧಿ ಹೊಂದಿದ್ದ ಬೆಳಪು ಗ್ರಾಮದಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಮಂಜೂರುಗೊಂಡಿದ್ದ ಸಣ್ಣ ಕೈಗಾರಿಕೆಗಳ ಪಾರ್ಕ್‌, ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ನಿರ್ಮಾಣ ಕಾಮಗಾರಿಯ ಪ್ರಕ್ರಿಯೆಗಳು ಅಂತಿಮಗೊಂಡಿವೆ. ಸುಮಾರು 156 ಕೋ. ರೂ. ವೆಚ್ಚದಲ್ಲಿ  ಪ್ರಥಮ ಹಂತದ ಕಾಮಗಾರಿ ನಡೆಸಲು ಕರ್ನಾಟಕ ಸರಕಾರದಿಂದ ಮಂಜೂರಾತಿ ಕೂಡಾ ದೊರಕಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ.

Advertisement

ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಳಪು ಗ್ರಾಮಕ್ಕೆ ಆಗಮಿಸಿ ಈ ಮೂರೂ ಯೋಜನೆಗಳ ಸಹಿತವಾಗಿ ಹಲವು ಬೃಹತ್‌ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಮಾತ್ರವಲ್ಲದೇ ಅಗತ್ಯವಿರುವ ಅನುದಾನ ಒದಗಿಸುವ ಭರವಸೆಯನ್ನೂ ನೀಡಿದ್ದರು. ಅದರಂತೆ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಪ್ರಥಮ ಕಂತು ರೂಪದಲ್ಲಿ 50 ಕೋ. ರೂ. ಅನುದಾನ ಬಿಡುಗಡೆಗೊಳಿಸಿ ಉಳಿಕೆ ಮೊತ್ತವನ್ನು ಹಂತ ಹಂತವಾಗಿ ಸರಕಾರದಿಂದ ಬಿಡುಗಡೆಗೊಳಿಸುವಂತೆ ಆದೇಶ ಹೊರಡಿಸಿದ್ದರು.

ಏಕಕಾಲದಲ್ಲಿ 3 ಯೋಜನೆಗಳಿಗೆ ಚಾಲನೆ


ಸುಮಾರು 68 ಎಕ್ರೆ ಸರಕಾರಿ ಜಾಗದಲ್ಲಿ ಸಣ್ಣ ಕೈಗಾರಿಕಾ ಪಾರ್ಕ್‌ ರಚನೆ ಕಾಮಗಾರಿಗೆ ಪೂರಕವಾಗಿ 10 ಕೋ. ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳ ಜೋಡಣೆ ಪೂರ್ಣಗೊಂಡಿದೆ. ಯೋಜನೆಗೆ ಅನುಗುಣವಾಗಿ ಕೈಗಾರಿಕೆಗಳಿಗೆ ಅರ್ಜಿ ನೀಡುವ ಅವಕಾಶ ಕಲ್ಪಿಸಲಾಗಿದೆ. ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ 8 ಕೋ. ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು, ರೈಟ್ಸ್‌ ಸ‌ಂಸ್ಥೆಯು ಕಾಮಗಾರಿಯನ್ನು ಅನುಷ್ಟಾನಗೊಳಿಸುತ್ತಿದೆ. ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೌಸಿಂಗ್‌ ಬೋರ್ಡ್‌ನ ಮೂಲಕ ಕಾಪುವಿನ ಗುತ್ತಿಗೆದಾರ ವಾಸುದೇವ ಶೆಟ್ಟಿ ಕಾಮಗಾರಿಯ ಗುತ್ತಿಗೆ ಟೆಂಡರ್‌ ವಹಿಸಿಕೊಂಡಿದ್ದಾರೆ.

ಬೆಳಪುವಿನಲ್ಲಿ ವಿವಿಧ ಜನಪರ ಯೋಜನೆಗಳು ಅನುಷ್ಠಾನಗೊಳ್ಳುವಲ್ಲಿ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರ ಪ್ರಯತ್ನ ಮುಖ್ಯ ಕಾರಣವಾಗಿದೆ. ಬೆಳಪು ಕಾಡು ಎಂದೇ ಬಾಯಿ ಮಾತಾಗಿರುವ ಬೆಳಪು ಗ್ರಾಮವನ್ನು ಮುಂದಿನ ಯುವ ಪೀಳಿಗೆಗೆ ಬೆಳಕಾಗಿಸುವ ನಿಟ್ಟಿನಲ್ಲಿ ಶಿಕ್ಷಣ, ಉದ್ಯೋಗ, ಉದ್ದಿಮೆ ಮತ್ತು ಸಂಶೋಧನೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಆ ಮೂಲಕವಾಗಿ ಬೆಳಪು ಗ್ರಾಮವನ್ನು ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.


ಬಹುಕಾಲದ ಆಶಯಕ್ಕೆ ಈಗ ಮನ್ನಣೆ

ಗ್ರಾಮದ ಜನರು ದೀರ್ಘ‌ ಕಾಲದಿಂದ ವಿಶ್ವಾಸವಿರಿಸಿ, ಬೆಂಬಲಿಸಿದ ಕಾರಣದಿಂದಾಗಿ ನಿರಂತರವಾಗಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವಂತಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಯುವ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಹಾಗೂ ಹೊಸ ಅನ್ವೇಷಣೆಗಳ ಸಂಶೋಧನೆಯ ಕೇಂದ್ರವನ್ನು ಬೆಳಪುವಿನಲ್ಲಿ ಸ್ಥಾಪಿಸಬೇಕೆಂಬ ಬಹುಕಾಲದ ಆಶಯಕ್ಕೆ ಈಗ ಮನ್ನಣೆ ದೊರಕಿದಂತಾಗಿದೆ. ಒಂದೇ ಗ್ರಾಮದಲ್ಲಿ ಏಕಕಾಲದಲ್ಲಿ ಮೂರು ಬೃಹತ್‌ ಯೋಜನೆಗಳನ್ನು ಪ್ರಾರಂಭಿಸುತ್ತಿರುವುದು ರಾಜ್ಯದಲ್ಲೇ ಪ್ರಥಮದ್ದಾದ ಸಾಧನೆಯಾಗಿದೆ.
– ಡಾ| ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next