ಕಾಲದ ಎದುರು ಎಲ್ಲರೂ ತಲೆಬಾಗಲೇಬೇಕು ಎಂದ ಆ ರಾಜ.ಇದನ್ನು ಕೇಳಿದ ಮೂವರು ಮಕ್ಕಳಲ್ಲಿ ಒಬ್ಬ, ಕಾಲವನ್ನು ಮೀರಲು ಸಾಧ್ಯವಿಲ್ಲವೇ? ಎಂದು ಕೇಳಿದ. ಸಾಧ್ಯವಿದೆ, ಆದರೆ ಎಲ್ಲರಿಂದಲೂ ಸಾಧ್ಯವಿಲ್ಲ ಎಂದ ರಾಜ. ಇದರಿಂದ ಮಕ್ಕಳಲ್ಲಿನ ಕುತೂಹಲ ಹೆಚ್ಚಿತು. ಮತ್ತೂಬ್ಬ ಕಾಲವೆಂದರೆ ಯಾರು ಎಂದು ಕೇಳಿದ. ಅದಕ್ಕೆ ರಾಜ, ನಾಳೆ ಬೆಳಗ್ಗೆ ಬನ್ನಿ ಹೇಳುವೆ ಎಂದ. ಮಕ್ಕಳೆಲ್ಲರೂ ತಮ್ಮ ತಮ್ಮ ಕೋಣೆಗೆ ಹೋದರು. ಎಲ್ಲರಲ್ಲೂ ಹಾಗಾದರೆ ಕಾಲ ಯಾರು ಎಂಬ ಕುತೂಹಲವೇ ತುಂಬಿಕೊಂಡಿತ್ತು.
ಬೆಳಗ್ಗೆಯಾಯಿತು, ಮೂವರೂ ಮಕ್ಕಳು ತಮ್ಮ ತಂದೆಯಲ್ಲಿ ಬಂದರು. ತಂದೆ ಮೂರು ಸಣ್ಣ ಪೊಟ್ಟಣಗಳಲ್ಲಿ ಬೀಜಗಳನ್ನು ಇಟ್ಟುಕೊಂಡಿದ್ದ. ಅದನ್ನು ಕೊಟ್ಟು ಬಿತ್ತಿ, ಬೆಳೆದುಕೊಂಡು ಬನ್ನಿ ಎಂದು ಕಳುಹಿಸಿದ.
ಮೂವರೂ ತೋಟಗಳಿಗೆ ಹೋದರು. ಮೂವರಿಗೂ ಕೃಷಿ ಯೇ ಗೊತ್ತಿರಲಿಲ್ಲ. ಏನು ಮಾಡುವುದೆಂದೇ ತೋಚಲಿಲ್ಲ. ಒಂದಿಷ್ಟು ಕೃಷಿಕರನ್ನು ಕರೆಸಿದರು. ಇಬ್ಬರು ಮಕ್ಕಳು ಆ ಕೃಷಿಕ ರಿಗೆ ತಮ್ಮ ಕೈಯಲ್ಲಿದ್ದ ಪೊಟ್ಟಣಗಳನ್ನು ಕೊಟ್ಟು ಇದನ್ನು ಬೆಳೆದು ಕೊಡಿ ಎಂದು ಹೇಳಿ ತಮ್ಮ ಕೋಣೆಗೆ ಹೋದರು. ಮೂರು ತಿಂಗಳು ಬಿಟ್ಟು ಬಂದರೆ ಆಯಿತು ಎಂದುಕೊಂಡರು. ಒಬ್ಬ ಮಾತ್ರ ಒಬ್ಬ ಕೃಷಿಕನನ್ನು ಕರೆದು, ನೀನು ಈ ಗದ್ದೆಯಲ್ಲಿ ಇದನ್ನು ಬಿತ್ತಲಿಕ್ಕೆ ಏನು ಪೂರ್ವ ಸಿದ್ಧತೆ ಮಾಡಬೇಕೋ ಅದನ್ನು ಮಾಡು. ನಾನು ಅದನ್ನು ಅನುಸರಿಸುತ್ತಾ ಈ ಗದ್ದೆಯಲ್ಲಿ ಮಾಡುತ್ತೇನೆ ಎಂದು ಪಕ್ಕದ ಗದ್ದೆಯನ್ನು ತೋರಿಸಿದ. ಇಬ್ಬರೂ ಕೃಷಿ ಆರಂಭಿಸಿದರು.
ಮಣ್ಣು ಹದ ಮಾಡುವುದರಿಂದ ಹಿಡಿದು ಬಿತ್ತುವವರೆಗೆ ಎಲ್ಲವನ್ನೂ ಈ ರಾಜಕುಮಾರ ಕಲಿತ. ಮೊದ ಮೊದಲು ಕಷ್ಟವಾಯಿತು. ಹಾಗೆಂದು ಬಿಡಲಿಲ್ಲ. ಎಲ್ಲವನ್ನೂ ಹದಗೊಳಿಸಿ, ಬೀಜ ಬಿತ್ತಿದರು. ಬಳಿಕ ಯಾವ ಆರೈಕೆ ಕೊಡಬೇಕೋ ಎಲ್ಲವೂ ಮಾಡಿದ. ದಿನ ಬೆಳಗ್ಗೆ ಸೂರ್ಯೋದಯದ ಹೊತ್ತಿಗೆ ಈತ ತೋಟದಲ್ಲಿರುತ್ತಿದ್ದ. ಮೊಳಕೆ ಹೊಡೆಯಲಾರಂಭಿಸಿತು. ಅದರಲ್ಲಿ ಒಂದಿಷ್ಟು ತರಕಾರಿ ಗಿಡಗಳು, ಒಂದಿಷ್ಟು ಹೂಗಿಡ ಗಳೆಲ್ಲಾ ಇದ್ದವು. ಅದಕ್ಕೆ ಎಲ್ಲ ರೀತಿಯ ಆರೈಕೆಗಳನ್ನು ಮಾಡತೊಡಗಿದ. ದಿನಪೂರ್ತಿ ಅವನದ್ದು ತೋಟದಲ್ಲೇ ಬದುಕು. ಬಹುತೇಕ ಅವನೊಬ್ಬ ಕೃಷಿಕನೇ ಆಗಿ ಹೋದ. ಅವನಿಗೆ ಅದರಲ್ಲಿ ಸಿಕ್ಕ ಖುಷಿಯೇ ಬೇರೆ. ಬೆಳವಣಿಗೆ ಎಂಬುದನ್ನು ಹತ್ತಿರದಿಂದ ನೋಡುತ್ತಾ, ತನ್ನೊಳಗೂ ಆಗುತ್ತಿದ್ದ ಒಂದು ಬಗೆಯ ಪರಿವರ್ತನೆಯನ್ನು ಕಂಡುಕೊಂಡ. ತಾಳ್ಮೆ ಹೆಚ್ಚಿತು, ಬದುಕಿನ ಅರ್ಥ ತಿಳಿಯತೊಡಗಿದ. ಮೂರು ತಿಂಗಳ ಬಳಿಕ ಮೂರೂ ಮಂದಿ ರಾಜನಲ್ಲಿಗೆ ಬಂದರು.
ಮೂವರೂ ರಾಜಕುಮಾರರು ಬೆಳೆದ ತರಕಾರಿಗಳನ್ನು ತಂದು ರಾಶಿ ಹಾಕಲಾಗಿತ್ತು. ರಾಜ ಹತ್ತಿರ ಬಂದು ಒಂದೊಂದೇ ತರಕಾರಿಗಳನ್ನು ನೋಡತೊಡಗಿದ. ಎಲ್ಲವೂ ಬಣ್ಣದಲ್ಲಿ ಒಂದೇ ಆಗಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಎಲ್ಲ ತರಕಾರಿಗಳಲ್ಲಿ ಲವಲವಿಕೆಯ ಅಂಶಗಳಲ್ಲಿ ವ್ಯತ್ಯಾಸವಿತ್ತು. ಎಲ್ಲವೂ ಒಂದೇ ಸಮಯಕ್ಕೆ ಕಟಾವು ಮಾಡಿದವೇ ಎಂದು ಕೇಳಿದ. ಹೌದೆಂದರು ರಾಜಕುಮಾರರು.
ಮಂತ್ರಿಯನ್ನು ಕರೆದು, ಎರಡು ತರಕಾರಿಗಳನ್ನುಅವರ ಕೈಗೆ ಕೊಟ್ಟು ಇವುಗಳಲ್ಲಿ ವ್ಯತ್ಯಾಸವನ್ನು ಗುರುತಿಸಬಲ್ಲಿರಾ? ಎಂದು ಕೇಳಿದ. ಮಂತ್ರಿ ಅದನ್ನು ಸೂಕ್ಷ್ಮವಾಗಿ ಗಮನಿಸಿ, ಖಂಡಿತವಾಗಿ ಎಂದು ಹೇಳಿದ. ಒಂದು ತರಕಾರಿಯನ್ನು ಕೈಗೆತ್ತಿಕೊಂಡು, ಅದನ್ನು ಒಂದು ಸಣ್ಣಗೆ ತುಂಡು ಮಾಡಿ, ಇದು ಶ್ರೇಷ್ಠವಾದುದು ಎಂದು ಹೇಳಿದ. ಇದರಿಂದ ಆ ಇಬ್ಬರು ರಾಜಕುಮಾರರಿಗೆ ವಿಚಿತ್ರವೆನಿಸಿತು, “ಅದು ಹೇಗೆ ಶ್ರೇಷ್ಠ. ಎಲ್ಲ ರೂ ಒಂದೇ ಮಣ್ಣಿನಲ್ಲಿ, ಒಂದೇ ನೀರಿನಲ್ಲಿ ಬೆಳೆದವು’ ಎಂದ.
ಆಗ ರಾಜ, ನಿಜ. ಎಲ್ಲವೂ ಒಂದೇ ಮಣ್ಣಿನಲ್ಲಿ, ಒಂದೇ ನೀರಿನಲ್ಲಿ ಬೆಳೆದವು. ಆದರೆ ಈ ತರಕಾರಿಯಲ್ಲಿ ಅಷ್ಟೇ ಇಲ್ಲ, ಸ್ವ-ಶ್ರಮದ ಪರಿಮಳವಿದೆ ಎಂದ. ಆ ತರಕಾರಿಯನ್ನು ಬೆಳೆದ ರಾಜಕುಮಾರನಲ್ಲಿ ಕೇಳಿದ, ನೀನು ಇದನ್ನು ಹೇಗೆ ಬೆಳೆದೆ?
ಆಗ ಆತ ಪಕ್ಕದಲ್ಲಿದ್ದ ಕೃಷಿಕನನ್ನು ತೋರಿಸಿ, ಇವನಿಂದ ಕೆಲಸ ಕಲಿತುಕೊಂಡು, ನಾನು ಬೆಳೆದೆ ಎಂದು ಸಂಪೂರ್ಣವಾಗಿ ವಿವರಿಸಿದ. ಅದನ್ನು ಕೇಳಿ ಖುಷಿಪಟ್ಟ ರಾಜ, ನಿನ್ನಲ್ಲಿ ಕಾಲವನ್ನು ದುಡಿಸಿಕೊಳ್ಳುವ ಸಾಮರ್ಥ್ಯ ಇದೆ, ಎಂದಿಗೂ ನೀನು ಕಾಲದ ಅಡಿಯಾಳಾಗಲಾರೆ ಎಂದು ಹರಸಿ ಆಶೀರ್ವದಿಸಿದ.
ಕಾಲ ನಮ್ಮ ಕೈಯಲ್ಲೇ ಇರುವಂಥದ್ದು, ಅದನ್ನು ದುಡಿಸಿಕೊಂಡರೆ ನಾವು ಬೆಳೆಯುತ್ತೇವೆ, ಇಲ್ಲವಾದರೆ ನಾವು ಅದರ ಅಡಿಯಾಳಾಗುತ್ತೇವೆ ಎಂದು ನುಡಿದ ರಾಜ.
–
ಟೈಮ್ ಸ್ವಾಮಿ