Advertisement

ಮೂರು ಪ್ಲಸ್‌ ಮೂರು ಮೈನಸ್‌

05:01 AM May 23, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮೂರು ವಾರ್ಡ್‌ಗಳು ಶುಕ್ರವಾರ ಕಂಟೈನ್ಮೆಂಟ್‌ ಝೋನ್‌ ವ್ಯಾಪ್ತಿಗೆ ಸೇರಿಸಲಾಗಿದೆ. ಇದರ ಬೆನ್ನಿಗೇ ಮೂರು ವಾರ್ಡ್‌ಗಳು ಕೋವಿಡ್‌ 19 ಕಂಟಕದಿಂದ ಸರಿದು ಹಸಿರು ವಲಯಕ್ಕೆ  ಸೇರ್ಪಡೆಯಾಗಿದೆ. ದಕ್ಷಿಣ ವಲಯದ ಲಕ್ಕಸಂದ್ರ ವಾರ್ಡ್‌, ಪೂರ್ವ ವಲಯದ ಅಗರಂ ವಾರ್ಡ್‌ ಹಾಗೂ ಯಲಹಂಕ ವಲಯದ ಥಣಿಸಂದ್ರ ವಾರ್ಡ್‌ಗಳಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್‌ ಎಂದು  ಘೋಷಿಸಲಾಗಿದೆ.

Advertisement

ಅಲ್ಲದೆ, 21 ದಿನಗಳಿಂದ ಹೊಸ ಸೋಂಕು ಪ್ರಕರಣಗಳು ದೃಢಪಡದ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಹಂಪಿನಗರ, ದಕ್ಷಿಣ ವಲಯದ ಬೈರಸಂದ್ರ ಹಾಗೂ ಆರ್‌.ಆರ್‌. ನಗರದ ವಲಯದ ಯಶವಂತಪುರ  ವಾರ್ಡ್‌ಗಳನ್ನು ಹಸಿರು ವಲಯಕ್ಕೆ ಸೇರ್ಪಡೆಯಾಗಿದೆ. ಅಗರಂ ವಾರ್ಡ್‌ನ ಆಸ್ಟಿನ್‌ ಟೌನ್‌ನ ಬಿಡಿಎ ವಸತಿ ಸಮುತ್ಛಯದಲ್ಲಿ ನೆಲೆಸಿದ್ದ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 5ಜನ  ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 14ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೆ, ಬಿಡಿಎ ಮೂರು ಮಹಡಿಯ ಸಮುತ್ಛಯ ವನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಪೂರ್ವ ವಲಯದ ಜಂಟಿ ಆಯುಕ್ತೆ ಪಲ್ಲವಿ ತಿಳಿಸಿದ್ದಾರೆ.

ಲಕ್ಕಸಂದ್ರ ಸಂಕಟ: ರಾಮನಗರದಲ್ಲಿ ಸೋಂಕು ದೃಢಪಟ್ಟ ಮಹಿಳೆ ಕಳೆದ ಒಂದು ತಿಂಗಳನಿಂದ ಬಿಟಿಎಂ ವಿಧಾನಸಭಾ ಕ್ಷೇತ್ರದ ಲಕ್ಕಸಂದ್ರದಲ್ಲಿ ನೆಲೆಸಿದ್ದ ಹಿನ್ನೆಲೆಯಲ್ಲಿ ಲಕ್ಕಸಂದ್ರ ವಾರ್ಡ್‌ ಅನ್ನು ಶುಕ್ರವಾರ ಕಂಟೈನ್ಮೆಂಟ್‌  ಝೋನ್‌ ವ್ಯಾಪ್ತಿಗೆ ತರಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ರಾಮನಗರದ ಮೂಲದ (36 ವರ್ಷ) ಮಹಿಳೆಯೊಬ್ಬರು ರಕ್ತದ ಕ್ಯಾನ್ಸರ್‌ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ, ಬೆಂಗಳೂರಿನ ಎಚ್‌ಜಿಸಿ ಆಸ್ಪತ್ರೆಯಲ್ಲಿ  ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಈ ಮಧ್ಯೆ ಲಾಕ್‌ಡೌನ್‌ನಿಂದಾಗಿ ನಗರದ ಲಕ್ಕಸಂದ್ರದಲ್ಲಿ ತನ್ನ ಸಹೋದರಿ ಮನೆಯಲ್ಲಿ ವಾಸವಿದ್ದರು. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಹೋದರಿ ಹಾಗೂ ಕುಟುಂಬ ಸ್ವಂತ ಊರಿಗೆ ತೆರಳಿದ್ದು, ಈ  ವೇಳೆ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪತಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ.ಶಿವಕುಮಾರ್‌  ತಿಳಿಸಿದ್ದಾರೆ.

ಒಟ್ಟು 581 ಜನರಿಗೆ ಕೋವಿಡ್‌ 19 ಸೋಂಕು ಪರೀಕ್ಷೆ: ಪಾದರಾಯನಪುರದಲ್ಲಿ ಶುಕ್ರವಾರ 151ಜನರಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 92 ಮಂದಿ ಪುರುಷರು, 59 ಮಂದಿ ಮಹಿಳೆ ಯರು ಇದ್ದಾರೆ ಎಂದು ಬಿಬಿಎಂಪಿ  ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದ್ದಾರೆ. ಮೇ 14ರಿಂದ 581 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 276 ಮಂದಿಯ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ. ಇನ್ನು 305 ಮಂದಿ ವರದಿ ಇನ್ನಷ್ಟೇ ಬರಬೇಕಿದೆ.  ಸಾಮುದಾ ಯಿಕ ಕೋವಿಡ್‌ 19 ಸೋಂಕು ಪರೀಕ್ಷೆ ಪ್ರಕ್ರಿಯೆಯಲ್ಲಿ ಒಟ್ಟು 581 ಮಂದಿಯ ಗಂಟಲ ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಅದರಲ್ಲಿ 275 ಮಂದಿ ಪುರುಷರು, 306 ಮಹಿಳೆಯರಿದ್ದಾರೆ ಎಂದು  ಮಾಹಿತಿ ನೀಡಿದರು.

Advertisement

ಪಶ್ಚಿಮ ವಲಯದಲ್ಲಿ ಹೆಚ್ಚಿದ ಕೋವಿಡ್‌ 19 ಆಘಾತ: ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಸೋಂಕು ಪ್ರಕರಣಗಳು ಹಾಗೂ ಕಂಟೈನ್ಮೆಂಟ್‌ ಝೋನ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ  ವಲಯದಲ್ಲಿನ ಪಾದರಾಯನಪುರ, ಜಗಜೀವನರಾಮ ನಗರ, ಮಲ್ಲೇಶ್ವರ ಹಾಗೂ ಕೆ.ಆರ್‌. ಮಾರುಕಟ್ಟೆಯ ನಾಲ್ಕು ವಾರ್ಡ್‌ಗಳಲ್ಲಿ ಕೋವಿಡ್‌ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು. ಈ ವಾರ್ಡ್‌ಗಳನ್ನು ಕಂಟೈನ್ಮೆಂಟ್‌ ಝೋನ್‌  ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ.

ಪಶ್ಚಿಮ ವಲಯದಲ್ಲಿ ಒಟ್ಟು 68 ಸೋಂಕು ಪ್ರಕರಣಗಳು ದೃಢಪಟ್ಟಂತಾಗಿದ್ದು, ಪಾದರಾಯನಪುರದಲ್ಲಿ 41 ಕೋವಿಡ್‌ 19 ಸೋಂಕು ಪ್ರಕರಣಗಳು ಸಕ್ರಿಯವಾಗಿವೆ. ಈ ಸಂಬಂಧ ಪ್ರತಿಕ್ರಿಯಿಸಿದ  ಪಶ್ಚಿಮ  ವಲಯದ ಆರೋಗ್ಯಾಧಿಕಾರಿ ಡಾ. ಮನೋರಂಜನ್‌ ಹೆಗ್ಡೆ, ಪಾದರಾಯನಪುರದಲ್ಲಿ ಈ ಹಿಂದೆಯಿಂದಲೂ ಕೋವಿಡ್‌ 19 ಸೋಂಕು ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next