Advertisement

Arrested: ಉದ್ಯಮಿ ಮನೆಯಲ್ಲಿ ಚಿನ್ನ ಬೆಳ್ಳಿ ಕದ್ದ ಅಡುಗೆ ಕಾರ್ಮಿಕ ಸೇರಿ ಮೂವರ ಸೆರೆ 

10:44 AM Jul 17, 2024 | Team Udayavani |

ಬೆಂಗಳೂರು: ಉದ್ಯಮಿಯೊಬ್ಬರ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಬಿಹಾರ ಮೂಲದ ಮೂವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಬಿಹಾರ ಮೂಲದ ಅಮಿರ್‌ ಅಲಿಯಾಸ್‌ ಅಜಿತ್‌ ಮುಖ್ಯ (24), ರಾಜಮುಖ್ಯ (21) ಹಾಗೂ ಶರವಣ್‌ ಮುಖ್ಯ(25) ಬಂಧಿತರು. ಆರೋಪಿಗಳು ಟೀ ಎಸ್ಟೇಟ್‌ ಮಾಲೀಕ ರಾಜೇಂದ್ರ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 30 ಲಕ್ಷ ರೂ.ಮೌಲ್ಯದ 26 ಕೆ.ಜಿ. 418 ಗ್ರಾಂ ಬೆಳ್ಳಿ ಪದಾರ್ಥಗಳು, 34 ಗ್ರಾಂ ತೂಕದ ಚಿನ್ನದ ಒಡವೆಗಳು, 5 ರೇಷ್ಮೆ ಸೀರೆಗಳು, 2 ಸ್ಮಾರ್ಟ್‌ ಫೋನ್‌ಗಳು, ಒಂದು ಸ್ಯಾಮ್‌ಸಂಗ್‌ ಟ್ಯಾಬ್‌, ಒಂದು ಕ್ಯಾಮೆರಾ, ವಿವಿಧ ಕಂಪನಿಯ 10 ವಾಚ್‌ಗಳು, 6 ಕೆ.ಜಿ ಕಂಚಿನ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಅಜಿತ್‌ ಮುಖ್ಯ ಎಂಬಾತ ಸ್ಯಾಂಕಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ಐಷಾರಾಮಿ ಪ್ಲ್ರಾಟ್‌ವೊಂದರಲ್ಲಿ ವಾಸವಿರುವ ದೂರುದಾರ ರಾಜೇಂದ್ರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಮನೆಯ ಗಾರ್ಡನ್‌ ನಿರ್ವಹಣೆಗಾಗಿ ರಾಜಮುಖ್ಯನನ್ನು ನೇಮಕ ಮಾಡಿಕೊಂಡಿದ್ದರು. ಮಾಲೀಕರು ಜುಲೈ 2 ರಂದು ಊಟಿಗೆ ಹೊರ ಹೋಗಬೇಕಾದ ಹಿನ್ನೆಲೆಯಲ್ಲಿ ಮನೆಯ ಕೀಯನ್ನು ರಾಜಮುಖ್ಯನಿಗೆ ನೀಡಿ ಮನೆಯನ್ನು ನೋಡಿಕೊಳ್ಳುವಂತೆ ತಿಳಿಸಿರುತ್ತಾರೆ. ನಂತರ ಮನೆಯ ಮಾಲೀಕರು ಇಲ್ಲದಿರುವುದರಿಂದ ತನ್ನ ಊರಿನವರಾದ ಅಜಿತ್‌ ಮುಖ್ಯ ಮತ್ತು ಶರವಣ್‌ ಮುಖ್ಯಗೆ ವಿಚಾರ ತಿಳಿಸಿ, ಮನೆಯ ರೂಮ್‌ಗಳ ಡೋರ್‌ಲಾಕ್‌ಗಳನ್ನು ಮಚ್ಚಿನಿಂದ ಹೊಡೆದು ಕಬೋರ್ಡ್‌ ಮತ್ತು ದೇವರ ಮನೆಯಲ್ಲಿದ್ದಂತಹ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಒಡವೆಗಳು, ಬೆಳ್ಳಿ ಪದಾರ್ಥ, ದೇವರ ವಿಗ್ರಹಗಳು ಪೂಜೆ ಸಾಮಾಗ್ರಿಗಳು ರೇಷ್ಮೆ ಸೀರೆಗಳು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ದಾಖಲಾದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಘನಟಾ ಸ್ಥಳ ಸೇರಿ ಹಲವಾರು ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಪತ್ತೆಯಾಗಿತ್ತು. ಬಳಿಕ ಅವರ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿಕೊಂಡು ಬಿಹಾರ ರಾಜ್ಯಕ್ಕೆ ಹೋಗಿ ದರ್ಭಂಗಾ ಟೌನ್ಸ್‌ ಬಸ್‌ ನಿಲ್ದಾಣದ ಬಳಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next