Advertisement

ಸುಟ್ಟು ಹೋದ ಕಾರಿನಲ್ಲಿ 3 ಶವಪತ್ತೆ: ಕೊಲೆ ಶಂಕೆ

12:54 AM Mar 23, 2024 | Team Udayavani |

ಬೆಳ್ತಂಗಡಿ/ತುಮಕೂರು: ತುಮಕೂರು ಜಿಲ್ಲೆಯ ಕೋರಾ ಪೊಲೀಸ್‌ ಠಾಣಾ ವ್ಯಾಪ್ತಿಯ ಬತ್ತಿ ಹೋಗಿರುವ ಕುಚ್ಚಂಗಿ ಕೆರೆಯ ಮಧ್ಯಭಾಗದಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಸುಟ್ಟ ರೀತಿಯಲ್ಲಿ ಮೂರು ಶವಗಳು ಪತ್ತೆಯಾಗಿದ್ದು ಮೃತಪಟ್ಟ ಮೂವರೂ ಬೆಳ್ತಂಗಡಿ ಮೂಲದವರಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

Advertisement

ಮೇಲ್ನೋಟಕ್ಕೆ ಅಪಹರಿಸಿ ಕೊಲೆ ಮಾಡಿ ಕಾರು ಸಹಿತ ಸುಟ್ಟುಹಾಕಿರುವಂತೆ ಕಂಡುಬಂದಿದೆ.
ಆಟೋ ಚಾಲಕರಾಗಿರುವ ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್‌ ಕುಂಟಿನಿ ನಿವಾಸಿ ಸಾಹುಲ್‌ ಹಮೀದ್‌ (45), ವಿದೇಶದಿಂದ ಬಂದು ಮನೆಯಲ್ಲೇ ಇದ್ದ ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್‌ ಕುಂಟಿನಿ ನಿವಾಸಿ ಇಸಾಕ್‌ (50), ಬೆಳ್ತಂಗಡಿಯಲ್ಲಿ ಫ‌ುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಶಿರ್ಲಾಲು ಗ್ರಾಮದ ನಿವಾಸಿ ಸಿದ್ದಿಕ್‌ (35) ಅವರು ಕಾರಿನಲ್ಲಿ ವ್ಯವಹಾರಕ್ಕೆಂದು ತುಮಕೂರಿಗೆ ಹೋಗಿದ್ದು, ಮೃತಪಟ್ಟವರು ಎಂಬುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಸುಮಾರು 12 ದಿನಗಳ ಹಿಂದೆ ಇಸಾಕ್‌ ಅವರು ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ರಫೀಕ್‌ ಅವರ ಓಅ 43N 1571 ನೋಂದಣಿಯ ಕಾರನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದು ದಿನಾಂಕ 20-03-2024ರಂದು ಇಸಾಕ್‌ ಅವರು ಕಾರು ಮಾಲಕ ರಫೀಕ್‌ ಅವರಿಗೆ ಕರೆ ಮಾಡಿ ಇನ್ನೆರಡು ದಿನಗಳಲ್ಲಿ ಬರುತ್ತೇವೆ ಎಂದು ತಿಳಿಸಿದ್ದರೆಂದು ಮಾಹಿತಿ ತಿಳಿದು ಬಂದಿದೆ. ಅನಂತರ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ಕಾರಿನ ಢಿಕ್ಕಿಯಲ್ಲಿ ಎರಡು ಮೃತದೇಹ ಹಾಗೂ ಹಿಂಬದಿಯ ಸೀಟಿನಲ್ಲಿ ಒಂದು ಮೃತದೇಹ ಸೇರಿ ಮೂರು ಮೃತದೇಹಗಳು ದೊರೆತಿದ್ದು, ಗುರುತು ಪತ್ತೆ ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿದೆ. ಗುರುವಾರ ರಾತ್ರಿ ಬಂದಿರುವ ದುಷ್ಕರ್ಮಿಗಳು ಕಾರನ್ನು ಕೆರೆಯ ಮಧ್ಯಭಾಗಕ್ಕೆ ಕೊಂಡೊಯ್ದು ಪೊದೆಗಳ ಮಧ್ಯದಲ್ಲಿ ನಿಲ್ಲಿಸಿ ಕಾರಿಗೂ ಸಹ ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದರು. ಶುಕ್ರವಾರ ಬೆಳಗ್ಗೆಯಷ್ಟೇ ಪ್ರಕರಣ ಬೆಳಕಿಗೆ ಬಂತು.

ಘಟನೆಯ ಸ್ಥಳವನ್ನು ಪರಿಶೀಲಿಸಿದ ಅನಂತರ ಮಾತನಾಡಿದ ಎಸ್ಪಿ ಅಶೋಕ್‌, ಈಗಾಗಲೇ ಸ್ಥಳಕ್ಕೆ ಎಫ್ಎಸ್‌ಎಲ್‌ ತಂಡ ಸಹ ಭೇಟಿ ನೀಡಿ ತಪಾಸಣೆ ನಡೆಸಿದೆ. ಕಾರಿನ ನಂಬರ್‌ ಆಧಾರದ ಮೇಲೆ ತನಿಖಾ ಕಾರ್ಯ ಚುರುಕುಗೊಂಡಿದೆ ಎಂದು ಹೇಳಿದರು.

Advertisement

ಅಪಹರಿಸಿ ಕೊಲೆ?
ಮೂವರು ಬೆಳ್ತಂಗಡಿಯಿಂದ ತುಮಕೂರಿಗೆ ಯಾವುದೋ ವ್ಯವಹಾರದ ಮಾತುಕತೆಗಾಗಿ ಹೋಗಿರುವ ಸಂಶಯ ಹೊಂದಲಾಗಿದೆ. ಅಲ್ಲಿ ಅವರನ್ನು ಅಪಹರಿಸಿ ಕೊಲೆ ಮಾಡಿ ಬಳಿಕ ಕಾರಿನಲ್ಲಿ ಶವವನ್ನಿರಿಸಿ ಸುಟ್ಟುಹಾಕಿರುವ ಶಂಕೆ ಕಂಡುಬಂದಿದೆ. ಪೊಲೀಸ್‌ ತನಿಖೆಯಿಂದ ಹೆಚ್ಚಿನ ಮಾಹಿತಿ ಸಂಗ್ರಹವಾಗಬೇಕಿದೆ. ಆದರೆ ಈ ಕುರಿತು ಮೃತರ ಗುರುತು ಖಚಿತವಾಗದೇ ಇರುವುದರಿಂದ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next