ಬೆಳ್ತಂಗಡಿ/ಕಾಸರಗೋಡು: ರಸ್ತೆ ಬದಿಯಲ್ಲಿ ಕುಳಿತಿದ್ದ ಸುಮಾರು 42 ವರ್ಷ ಪ್ರಾಯದ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ನಿವಾಸಿ ಮಹಾರುದ್ರ ಸ್ವಾಮಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೇ 4ರಂದು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ಸಂಭವಿಸಿದೆ.
ಹೃದಯಾಘಾತ ಅಥವಾ ಮಧ್ಯಾಹ್ನದ ವೇಳೆ ಅತಿಯಾದ ಬಿಸಿಲಿನಿಂದ ಬಸವಳಿದು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.
ಬದಿಯಡ್ಕ ಸಮೀಪ ಯುವಕನ ಸಾವು: ಮನೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಕು೦ಬ್ಡಾಜೆ ಏತಡ್ಕ ನಿವಾಸಿ ರಾಧಾಕೃಷ್ಣ ಭಟ್ ಅವರ ಪುತ್ರ ಪ್ರಜ್ವಲ್ (26) ಸಾವಿಗೀಡಾಗಿದ್ದಾರೆ. ಮೇ 2 ರಂದು ರಾತ್ರಿ ಮನೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಸಂಭವಿಸಿತು.
ವ್ಯಾಪಾರಿಯ ಸಾವು: ಪೆರ್ಲ ಪೇಟೆಯಲ್ಲಿ ರೆಡಿಮೇಡ್ ಬಟ್ಟೆ ಅಂಗಡಿ ನಡೆಸುತ್ತಿದ್ದ ಕಾಡಮನೆ ನಿವಾಸಿ ಸಾದಿಕ್(35) ಕುಸಿದು ಬಿದ್ದು ಸಾವಿಗೀಡಾದರು. ಮೇ 3ರಂದು ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ರಾತ್ರಿ 10.30ಕ್ಕೆ ಹೃದಯಾಘಾತದಿಂದ ಕುಸಿದು ಬಿದ್ದರು. ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.