ಬೆಂಗಳೂರು: ಯಲಹಂಕದಲ್ಲಿರುವ ವೀರ್ ಸಾವರ್ಕರ್ ಅವರ ಹೆಸರಿನ ಮೇಲ್ಸೇತುವೆಯ ಸೂಚನಾ ಫಲಕಕ್ಕೆ ಕಪ್ಪು ಮಸಿ ಬಳಿದ ಆರೋಪದಲ್ಲಿ ಮೂವರು ಎನ್‌ಎಸ್‌ಯುಐ ಕಾರ್ಯಕರ್ತರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್ ಅವರ ಜನ್ಮದಿನದಂದೇ ಈ ಘಟನೆ ನಡೆದಿರುವುದಕ್ಕೆ ಬಿಜೆಪಿ ಸೇರಿ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದಾರೆ.
ಪೊಲೀಸರ ಪ್ರಕಾರ, ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಕಾರ್ಯಕರ್ತರು ಫ್ಲೈಓವರ್‌ಗೆ ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸಾರ್ವರ್ಕರ್ ಅವರ ಹೆಸರಿಗೆ ಮಸಿ ಬಳಿದು ‘ಭಗತ್ ಸಿಂಗ್ ಫ್ಲೈಓವರ್’ ಎಂಬ ಬ್ಯಾನರ್ ಅನ್ನು ಹಾಕಿದ್ದಾರೆ. ಭಗತ್ ಸಿಂಗ್ ಅವರ ಚಿತ್ರಗಳನ್ನು ಹಿಡಿದುಕೊಂಡು ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ.
ಸಾರ್ವಜನಿಕ ಆಸ್ತಿ ನಾಶ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಲಾಗಿದ್ದು, ಎನ್‌ಎಸ್‌ಯುಐನ ಸ್ಕಾರ್ಫ್‌ಗಳನ್ನು ಧರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೋರ್ಡ್ ಅನ್ನು ಮರುಸ್ಥಾಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಕೆಲವು ಸಂಘಟನೆಗಳ ವಿರೋಧದ ನಡುವೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಇಡಲಾಗಿತ್ತು.