ಯಾದಗಿರಿ: ಜಿಲ್ಲೆಗೆ ವಿದೇಶಗಳಿಂದ ಹಿಂತಿರುಗಿದ್ದ 71 ಜನರಲ್ಲಿ 11 ಜನರು 28 ದಿನಗಳ ಅವಲೋಕನ ಅವಧಿ ಪೂರ್ಣಗೊಂಡಿದ್ದು, ಇನ್ನೂ 60 ಜನರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಯಾವುದೇ ಕೋವಿಡ್ 19 ಸೋಂಕಿತರು ಪತ್ತೆಯಾಗದಿರುವುದು ಜಿಲ್ಲೆಯ ಜನ ನಿರಾಳವಾಗಿದ್ದಾರೆ.
ಒಟ್ಟು 16 ವ್ಯಕ್ತಿಗಳ ಮಾದರಿಗಳಲ್ಲಿ ಶುಕ್ರವಾರ 3 ವರದಿ ನೆಗೆಟಿವ್ ಬಂದಿದೆ. ಇಲ್ಲಿಯವರೆಗೆ 9 ಮಾದರಿಗಳ ವರದಿ ನೆಗೆಟಿವ್ ಬಂದಿದ್ದು, 7 ಜನರ ವರದಿ ಬರುವುದು ಬಾಕಿಯಿದೆ. ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಪ್ರತ್ಯೇಕವಾಗಿರಿಸಿದ್ದ ಮೂವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದ್ದು, ಇನ್ನೂ ಇಬ್ಬರು ಜಿಲ್ಲಾಸ್ಪತ್ರೆಯಲ್ಲಿದ್ದು, ಅರಕೇರಾ (ಕೆ) ಹಾಸ್ಟೆಲ್‌ನ ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್‌ನಲ್ಲಿ 24 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ವಿದೇಶಗಳಿಂದ ಬಂದವರನ್ನು ಮುಂಜಾಗ್ರತಾ ಕ್ರಮವಾಗಿ ದಿನಕ್ಕೆ 2 ಬಾರಿಯಂತೆ 14 ದಿನಗಳ ಕಾಲ ವೈದ್ಯಕೀಯ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದು, ಇವರ ಕುಟುಂಬದ ಸದಸ್ಯರ ಮೇಲೆಯೂ ನಿಗಾವಹಿಸಲಾಗುತ್ತಿದೆ. ವೈದ್ಯಕೀಯ ಉಪಚಾರಕ್ಕಾಗಿ 850 ಬೆಡ್ ವ್ಯವಸ್ಥೆ: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ವೈದ್ಯಕೀಯ ಉಪಚಾರಕ್ಕಾಗಿ ಒಟ್ಟು 850 ಬೆಡ್‌ಗಳ ವ್ಯವಸ್ಥೆ ಮಾಡಿದೆ.
ಸುರಪುರದ ಸೂಪರ್‌ವೈಸ್ಡ್ ಕ್ವಾರಂಟೈನ್ ಕೇಂದ್ರದಲ್ಲಿ 200 ಬೆಡ್‌ಗಳ ವ್ಯವಸ್ಥೆ, ಶಹಾಪುರ ತಾಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸೂಪರ್‌ವೈಸ್ಡ್ ಐಸೊಲೇಷನ್ ಕೇಂದ್ರದಲ್ಲಿ 250, ಯಾದಗಿರಿ ತಾಲೂಕಿನ ಏಕಲವ್ಯ ವಸತಿ ಶಾಲೆಯ ಸೂಪರ್ ವೈಸ್ಡ್ ಐಸೊಲೇಷನ್ ಕೇಂದ್ರದಲ್ಲಿ 250, ಯಾದಗಿರಿ ಹೊಸ ಜಿಲ್ಲಾಸ್ಪತ್ರೆಯನ್ನು ಕೋವಿಡ್ -19 ಆಸ್ಪತ್ರೆಯನ್ನಾಗಿ ಮಾಡಲಾಗಿದ್ದು, 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅರಕೇರಾ (ಕೆ) ವಸತಿನಿಲಯ ಸೂಪರ್‌ವೈಸ್ಡ್ ಕ್ವಾರಂಟೈನ್ ಕೇಂದ್ರದಲ್ಲಿ 50 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.
ಮಾಂಸ ಮಾರಾಟಕ್ಕೆ ಅನುಮತಿ: ಜಿಲ್ಲಾ ವ್ಯಾಪ್ತಿಯಲ್ಲಿ ಮಾಂಸ ಕೋಳಿ ಸಾಗಾಣಿಕೆ, ಮಾರಾಟ, ಮಾಂಸ ಮಾರಾಟ (ಮಟನ್) ಮತ್ತು ಮೀನು ಮಾರಾಟವನ್ನು ಷರತ್ತಿಗೊಳಪಟ್ಟು ಜಿಲ್ಲಾಡಳಿತ ಅನುಮತಿ ನೀಡಿದೆ. ಮಾಂಸದ ಅಂಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಶುಚಿತ್ವ ಕಾಪಾಡಬೇಕು. ಮಾಂಸ ಮಾರಾಟ ಸಮಯದಲ್ಲಿ ಖರೀದಿದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಮತ್ತು ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಮುನ್ನೆಚ್ಚರಿಕಾ ಕ್ರಮ ಅನುಸರಿಸದಿದ್ದರೆ ಕಾನೂನು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋವಿಡ್ -19 ಸೋಂಕಿತರು ಪತ್ತೆಯಾಗಿಲ್ಲ. ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಯಾರೂ ಆತಂಕ ಪಡಬಾರದು. ಮುನ್ನೆಚ್ಚರಿಕೆ ವಹಿಸಿ, ನಿಜಾಮುದ್ದೀನ್ ತಬ್ಲಿಘಿ ಮಾರ್ಕಜ್ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಗೆ ವಾಪಸ್ಸಾಗಿರುವವರು ಕಂಡು ಬಂದಲ್ಲಿ ಜಿಲ್ಲಾಡಳಿತದ ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ 08473-253950ಗೆ ಕರೆ ಮಾಡಿ ಮಾಹಿತಿ ನೀಡಿ.
ಪ್ರಕಾಶ ಜಿ.ರಜಪೂತ, ಅಪರ ಜಿಲ್ಲಾಧಿಕಾರಿ.