Advertisement
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಬುಧವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್, ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಈ ನಗರಗಳಿಗೆ ವಿಮಾನಯಾನ ಸೇವೆ ಒದಗಿಸಲಿದೆ.
Related Articles
ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಜನವರಿಯಲ್ಲಿ ಒಪ್ಪಿಗೆ ನೀಡಿತ್ತು.
Advertisement
ಸಂಸದ ಪ್ರತಾಪಸಿಂಹ ಅವರ ಮನವಿ ಮೇರೆಗೆ ನಾಗರಿಕ ವಿಮಾನ ಯಾನ ಸಚಿವರು ವಿವಿಧ ವಿಮಾನಯಾನ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ಮೈಸೂರಿನಿಂದ ವಿಮಾನಯಾನ ಆರಂಭಿಸಲು ಒಪ್ಪಿಸಿದ್ದರು.
ಉಡಾನ್ ಯೋಜನೆ: ಸಾಮಾನ್ಯರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಿ ಈಗಾಗಲೇ 72 ಆಸನಗಳ ಟ್ರೂಜೆಟ್ ವಿಮಾನ ಚೆನ್ನೈ- ಮೈಸೂರು ನಡುವೆ ಹಾರಾಟ ನಡೆಸುತ್ತಿದೆ.
ರಾತ್ರಿ 8.35ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 9.50ಕ್ಕೆ ಚೆನ್ನೈ ತಲುಪಲಿದೆ. ರಾತ್ರಿ 7ಗಂಟೆಗೆ ಚೆನ್ನೈ ನಿಂದ ಹೊರಡುವ ವಿಮಾನ ರಾತ್ರಿ 8.15ಕ್ಕೆ ಮೈಸೂರು ತಲುಪುತ್ತಿದೆ. ಈ ಸೇವೆಗೆ ಉತ್ತಮ ಸ್ಪಂದನೆ ದೊರೆತಿರುವುದರಿಂದ ಮೈಸೂರು-ಚೆನ್ನೈ ಹಗಲು ಸೇವೆ ಒದಗಿಸಲು ಟ್ರೂಜೆಟ್ ಸಂಸ್ಥೆ ಉತ್ಸುಕತೆ ತೋರಿದೆ ಎಂದರು.
ಮೈಸೂರು-ಶಿರಡಿ ಸಂಚಾರ: ಮೈಸೂರು-ಶಿರಡಿ ನಡುವೆ ವಿಮಾನಯಾನ ಸೇವೆ ಒದಗಿಸಲು ಸ್ಪೈಸ್ ಜೆಟ್ ಉತ್ಸುಕತೆ ತೋರಿದೆ. ಮೈಸೂರು-ಬೆಳಗಾವಿ ನಡುವೆ ವಿಮಾನಯಾನ ಸೇವೆ ಒದಗಿಸಲು ಟ್ರೂಜೆಟ್ ಸಂಸ್ಥೆ ಮುಂದೆ ಬಂದಿದ್ದು, ಈ ನಗರಗಳಿಗೆ ಶೀಘ್ರ ವಿಮಾನಯಾನ ಆರಂಭವಾಗಲಿದೆ ಎಂದು ತಿಳಿಸಿದರು.
ಅಭಿವೃದ್ಧಿ ಸಾಧ್ಯ: ವಿಮಾನ ಯಾನ ಉಳ್ಳವರಿಗೆ ಮಾತ್ರ ಎಂಬ ಕಲ್ಪನೆಯೇ ಸರಿಯಲ್ಲ. ಒಂದು ಪ್ರದೇಶದ ಸಾಮಾಜಿಕ, ಔದ್ಯಮಿಕ ಹಾಗೂ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ವಿಮಾನ ನಿಲ್ದಾಣಗಳ ಅವಶ್ಯಕತೆ ಇದೆ.
ಭಾರತದ ಅತ್ಯುತ್ತಮ ಪ್ರವಾಸಿ ತಾಣವಾಗಿರುವ ಮೈಸೂರಿನ ಬೆಳವಣಿಗೆಗೆ ವಿಮಾನ ನಿಲ್ದಾಣದ ಅವಶ್ಯಕತೆ ತುಂಬಾ ಇದೆ. ವಿಮಾನ ನಿಲ್ದಾಣವಾಗುವುದರಿಂದ ಇಲ್ಲಿನ ಪ್ರವಾಸೋದ್ಯಮ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರಗಳ ಆರ್ಥಿಕ ಚಟುವಟಿಕೆಗಳೂ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದರು.
ಯೋಗ ಕೇಂದ್ರಗಳಿಗೆ ವಿದೇಶಿಯರು: ಮೈಸೂರಿನ ಯೋಗ ಕೇಂದ್ರಗಳಿಗೆ ನಿತ್ಯ 250 ರಿಂದ 300 ಜನ ವಿದೇಶಿಯರು ಬಂದು ಹೋಗುತ್ತಾರೆ. ಆದರೆ, ಅವರಿಗೆ ಮೈಸೂರಿನಲ್ಲಿ ವಿಮಾನಯಾನ ಸೌಲಭ್ಯ ಇರುವುದು ತಿಳಿದಿಲ್ಲ. ಹೀಗಾಗಿ ಅವರನ್ನು ಸಂಪರ್ಕಿಸಲಾಗುತ್ತಿದೆ. ಕೆಆರ್‌ಎಸ್‌ಗೆ ಅಂತರಾಷ್ಟ್ರೀಯ ಮಟ್ಟದ ಸಂಪರ್ಕ ಒದಗಿಸಿದಾಗ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
700 ಕೋಟಿ ರೂ.: ಮೈಸೂರಿನ ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣವನ್ನು 700 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಾಥಮಿಕ ಹಂತದಲ್ಲಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯನ್ನು ಮಾಡಲಾಗುತ್ತದೆ. ಈ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಕೃಷಿ ಉತ್ಪನ್ನ ಸಾಗಿಸಲು ಸಹಕಾರಿ: ಕೃಷಿ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಮಹಾ ನಗರಗಳ ಮಾರುಕಟ್ಟೆಗೆ ಕೊಂಡೊಯ್ಯಲು ವಿಮಾನ ಯಾನ ಸಹಕಾರಿ ಯಾಗಲಿದೆ. ತಿರುಚ್ಚಿ ವಿಮಾನ ನಿಲ್ದಾಣದಿಂದ ಅಲ್ಲಿನ ಹೂ ಬೆಳೆಗಾರರಿಗೆ ಬಹಳ ಅನುಕೂಲವಾಗಿದೆ. ಅದೇ ರೀತಿಯಲ್ಲಿ ಮೈಸೂರಿನಿಂದ ಯಾವ ಕೃಷಿ ಉತ್ಪನ್ನಗಳನ್ನು ಕಳುಹಿಸುತ್ತಾರೆ ಎಂಬುದು ಗೊತ್ತಾದರೆ ಅದಕ್ಕೆ ಕಾರ್ಗೋ ವಿಮಾನದ ವ್ಯವಸ್ಥೆ ಮಾಡಲಾಗುವುದು.
ಈ ಸಂಬಂಧ ಮೈಸೂರು ಛೇಂಬರ್ ಆಫ್ ಕಾಮರ್ಸ್ ಜತೆಗೆ ಮಾತುಕತೆ ನಡೆಸಿದ್ದು, ಎಪಿಎಂಸಿ ಜೊತೆಗೂ ಮಾತುಕತೆ ನಡೆಸಲಾಗುವುದು. ಮೈಸೂರಿನಿಂದ ಕೇರಳಕ್ಕೆ ನಿತ್ಯ ಲೋಡ್‌ಗಟ್ಟಲೇ ದಿನಸಿ ಪದಾರ್ಥ ಹಾಗೂ ತರಕಾರಿಯನ್ನು ಕೊಂಡೊಯ್ಯಲಾಗುತ್ತೆ. ಇದಕ್ಕಾಗಿ ಏರ್ ಕಾರ್ಗೋ ಬಳಸಿಕೊಳ್ಳಬಹುದು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಹೇಳಿದರು.