ಬೀದರ: ನೆರೆ, ಬರದ ಹೊಡೆತದಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಕಳೆದ ಮೂರು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಸಿಕ್ಕಿಲ್ಲ. ಹಾಲು ಉತ್ಪಾದಕರನ್ನು ಉತ್ತೇಜಿ ಸುವ ರಾಜ್ಯ ಸರ್ಕಾರದ ಮಹ ತ್ವಾಕಾಂಕ್ಷಿ ಯೋಜನೆ ಯಡಿ ಪ್ರತಿ ಲೀಟರ್ ಹಾಲಿಗೆ ನೀಡಬೇಕಿದ್ದ 5 ರೂ. ಪ್ರೋತ್ಸಾಹ ಧನಕ್ಕಾಗಿ ಹೈನುಗಾರರು ಎದುರು ನೋಡುವಂತಾಗಿದೆ.
ಹೈನುಗಾರಿಕೆಗೆ ಪ್ರೋತ್ಸಾಹಿಸಲು ಒಂದು ರೂ. ಹೆಚ್ಚಿಸುವ ಕುರಿತು ಭರವಸೆ ನೀಡಿದ್ದ ರಾಜ್ಯ ಸರ್ಕಾರ ಸಕಾಲಕ್ಕೆ ಸೌಲಭ್ಯದ ಲಾಭ ಹೈನುಗಾರರಿಗೆ ದೊರಕಿಸುವಲ್ಲಿ ಮಾತ್ರ ವಿಫಲವಾಗುತ್ತಿದೆ. ಪ್ರಾಕೃತಿಕ ವಿಕೋಪದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಹೈನುಗಾರಿಕೆಯೇ ಆಧಾರ. ಆದರೆ, ಬೀದರ್ ಸೇರಿ ರಾಜ್ಯದಲ್ಲಿ ಸೆಪ್ಟೆಂಬರ್‌ವರೆಗೆ ಮಾತ್ರ ಪ್ರೋತ್ಸಾಹ ಧನ ವಿತರಣೆಯಾಗಿದ್ದು, ಕಳೆದ ಮೂರು ತಿಂಗಳಿಂದ ಬಾಕಿ ಉಳಿದಿದೆ.
ಬಾಕಿ ಎಷ್ಟಿದೆ?: ರಾಜ್ಯದಲ್ಲಿ ಪ್ರತಿದಿನ ಸುಮಾರು 73 ಲಕ್ಷ ಲೀಟರ್ ಹಾಲು ಕೆಎಂಎಫ್‌ಗೆ ಪೂರೈಕೆಯಾಗು ತ್ತದೆ. ಪ್ರತಿ ಲೀಟರ್ ಹಾಲಿಗೆ 5 ರೂ.ಗಳಂತೆ ಪ್ರತಿ ನಿತ್ಯ 3.65 ಕೋಟಿ ರೂ. ಪ್ರೋತ್ಸಾಹ ಧನವನ್ನು ಹೈನುಗಾ ರರಿಗೆ ಭರಿಸಬೇಕಿದೆ. ತಿಂಗಳಿಗೆ 110 ಕೋಟಿ ರೂ. ಗಳಂತೆ 3 ತಿಂಗಳಿಗೆ 330 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕಿದೆ. ಬೀದರ್‌ನಲ್ಲಿ ಅಂದಾಜು 33 ಸಾವಿರ ಲೀಟರ್ ಹಾಲು ದಿನವೊಂದಕ್ಕೆ ಕೆಎಂಎಫ್‌ಗೆ ಸಾಗಿಸಲಾಗುತ್ತಿದ್ದು, ದಿನಕ್ಕೆ 1.65 ಲಕ್ಷ ರೂ. ಪ್ರೋತ್ಸಾಹ ಧನ ಪಾವತಿಸಬೇಕಿದೆ.
ರಾಜ್ಯದಲ್ಲಿ ಹೈನುಗಾರಿಕೆ ಉತ್ತೇಜಿಸುವ ದಿಸೆಯಲ್ಲಿ ಹಿಂದಿನ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ ನೀಡುತ್ತ ಬಂದಿದೆ. ಪ್ರತಿ ಲೀಟರ್ ಹಾಲಿಗೆ 2 ರೂ. ಇದ್ದ ಪ್ರೋತ್ಸಾಹ ಧನವನ್ನು ಸದ್ಯ 5 ರೂ.ಗೆ ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷ ಪ್ರೋತ್ಸಾಹ ಧನವನ್ನು ಲೀಟರ್‌ಗೆ ಹೆಚ್ಚುವರಿಯಾಗಿ ಒಂದು ರೂ. ಘೋಷಿಸಲಾಗಿದ್ದು, ಅದಿನ್ನೂ ಕಾರ್ಯರೂಪಕ್ಕೆ ಬರ ಬೇಕಿದೆ. ಆದರೆ, ಸದ್ಯ ನೀಡಲಾಗುವ ಹಣ ಮೂರ್‍ನಾಲ್ಕು ತಿಂಗಳಿ ಗೊಮ್ಮೆ ಪಾವತಿಸುತ್ತಿರುವುದು ಹಾಲು ಉತ್ಪಾದಕರಿಗೆ ರಾಸುಗಳ ನಿರ್ವಹಣೆ ಹೈರಾಣಾಗಿಸಿದೆ.
ಬೆಳೆ ನಷ್ಟದಿಂದ ಒದ್ದಾಡುತ್ತಿರುವ ಅನ್ನದಾತರು ಜಾನುವಾರುಗಳಿಗೆ ಆಹಾರ, ಮೇವಿಗಾಗಿ ಪರದಾಡು ತ್ತಿದ್ದಾರೆ. ಇನ್ನೊಂದೆಡೆ ಕಾಲುಬಾಯಿ ಜ್ವರ ಸೇರಿ ವಿವಿಧ ರೋಗಗಳು ರಾಸುಗಳಲ್ಲಿ ಕಂಡು ಬರುತ್ತಿರುವುದು ಹೈನುಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಹಂತದಲ್ಲಿ ಪ್ರತಿ ತಿಂಗಳಿಗೊಮ್ಮೆ ಪ್ರೋತ್ಸಾಹ ಧನ ನೀಡಬೇಕಾದ ಸರ್ಕಾರ ವಿಳಂಬ ಧೋರಣೆ ತಾಳುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ.
ಕಾರಣ ಏನು?: ಪ್ರೋತ್ಸಾಹ ಧನವನ್ನು ಹೈನುಗಾರ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲು ರಾಜ್ಯ ಸರ್ಕಾರ ನೇರ ಲಾಭ ವರ್ಗಾ ವಣೆ (ಡಿಬಿಟಿ) ಪದ್ಧತಿ ಜಾರಿಗೊಳಿಸಿರುವುದು ಪ್ರೋತ್ಸಾಹ ಧನ ವಿಳಂಬಕ್ಕೆ ಕಾರಣವಾಗಿದೆ. ಜತೆಗೆ ಸರ್ಕಾರ, ಕೆಎಂಎಫ್ ಅಧಿ ಕಾರ ಬದಲಾವಣೆಯಿಂದ ಸಹ ತಡವಾಗಿದೆ ಎನ್ನಲಾಗಿದೆ. ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ತಿಂಗಳಿಗೊಮ್ಮೆ ಸಕಾಲಕ್ಕೆ ತಮ್ಮ ಖಾತೆಗಳಿಗೆ ಜಮೆ ಆಗಬೇಕು ಎಂಬುದು ಹೈನುಗಾರರ ಆಗ್ರಹ.
ಹೈನುಗಾರರಿಗೆ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನದಂತೆ ಬೀದರ್ ಜಿಲ್ಲೆಯಲ್ಲಿ ತಿಂಗಳಿಗೆ 50 ಲಕ್ಷ ರೂ. ಭರಿಸಬೇಕಿದೆ. ರಾಜ್ಯದಲ್ಲಿ ದಿನಕ್ಕೆ ಅಂದಾಜು 73 ಲಕ್ಷ ಲೀಟರ್ ಹಾಲು ಪೂರೈಕೆ ಇದೆ. ತಿಂಗಳಿಗೆ 110 ಕೋಟಿ ರೂ. ಹಾಲು ಉತ್ಪಾದಕರಿಗೆ ಪಾವತಿಸಬೇಕು. ಸೆಪ್ಟೆಂಬರ್‌ವರೆಗೆ ಪ್ರೋತ್ಸಾಹಧನ ಪಾವತಿಯಾಗಿದೆ. ಅಕ್ಟೋಬರ್ ತಿಂಗಳ ದಾಖಲೆಗಳು ಕೇಂದ್ರ ಕಚೇರಿಗೆ ರವಾನೆಯಾಗಿವೆ. ಡಿಬಿಟಿ ವ್ಯವಸ್ಥೆ ಜಾರಿಯಿಂದಾಗಿ ಪ್ರೋತ್ಸಾಹ ಧನ ಸ್ವಲ್ಪ ತಡವಾಗಿದೆ.
-ಡಾ|ಮನೋಹರ, ವ್ಯವಸ್ಥಾಪಕ ಕೆಎಂಎಫ್ ಬೀದರ
* ಶಶಿಕಾಂತ ಬಂಬುಳಗೆ