ಬಳ್ಳಾರಿ ಜಿಲ್ಲೆಯ ಶಿರಗುಪ್ಪದಲ್ಲಿ ಅತಿಥಿ ಉಪನ್ಯಾಸಕರ ಸಂದರ್ಶನ ಏರ್ಪಡಿಸಿದ್ದರು. ನಾನು ಸ್ವಂತ ಊರಿನಿಂದ ಕೊಪ್ಪಳಕ್ಕೆ ಬಂದು ಅಲ್ಲಿಂದ ಬಸ್ ಮೂಲಕ ಹೊರಟಿದ್ದೆ. ಹನ್ನೊಂದು ಗಂಟೆಗೆ ಸಂಜರ್ಶನ. ಸರಿಯಾದ ಸಮಯಕ್ಕೆ ಹಾಜರಾದೆ. ನನ್ನೊಂದಿಗೆ ಇನ್ನೂ ಐದಾರು ಜನ ಬಂದಿದ್ದರು. ಹೆಚ್ಚು ಕಡಿಮೆ ಒಂದು ಘಂಟೆಯಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಯಿತು. ಎರಡು ದಿನ ಬಿಟ್ಟು ಫಲಿತಾಂಶವನ್ನು ಪ್ರಕಟಿಸುತ್ತೇವೆ. ಆಯ್ಕೆಯಾದವರಿಗೆ ನೇರವಾಗಿ ತಿಳಿಸುತ್ತೇವೆ ಎಂದರು. ಹಾಗಾಗಿ ಎಲ್ಲರೂ ಅಲ್ಲಿಂದ ಹೊರ ಬಿದ್ದೆವು.
ಅಷ್ಟು ಹೊತ್ತಿಗೆಲ್ಲಾ ಆತ್ಮೀಯರಾಗಿದ್ದ ನಾವುಗಳು, ಹೊರಗೆ ಬಂದು ಟೀ ಕುಡಿಯಲೆಂದು ಹೋಟೆಲ್‌ಗೆ ಹೋದೆವು. ಅಪರೂಪದ ಆತಿಥ್ಯಕ್ಕೆ ನಾನೇ ಹಣ ಕೊಡಬೇಕು ಅಂದು ಕೊಳ್ಳುವ ಹೊತ್ತಿಗೆ ಮತ್ಯಾರೋ ಬಿಲ್ ಕೊಟ್ಟರು.
ಸರಿ, ಬಸ್ಟ್ಯಾಂಡಿಗೆ ಬಂದು ಕೊಪ್ಪಳದ ಬಸ್ ಏರಿದೆ. ಕಂಡಕ್ಟರ್ ಟಿಕೆಟ್ ಕೊಡುತ್ತಾ ಬಂದಾಗ, ಟಿಕೆಟ್ ದುಡ್ಡು ಕೊಡಲು ಜೇಬಿಗೆ ಕೈ ಹಾಕಿದರೆ ಹಣವೇ ಇಲ್ಲ. ನಾನೇ ಕಳೆದುಕೊಂಡಿದ್ದೆನೋ ಅಥವಾ ಯಾರಾದರೂ ಕದ್ದಿದ್ದರೋ ಗೊತ್ತಿಲ್ಲ. ಶಿರಗುಪ್ಪದಿಂದ ಕೊಪ್ಪಳಕ್ಕೆ ನೂರು ರೂ ಬಸ್ ಚಾರ್ಜ್. ನಾನು ಒಳ್ಳೆಯ ಬಟ್ಟೆ ಧರಿಸಿ ಚೆನ್ನಾಗಿ ಕಾಣುತ್ತಿದ್ದೆ. ಇಂಥದರಲ್ಲಿ ಹಣವಿಲ್ಲ ಅಂದರೆ ಯಾರು ನಂಬ್ತಾರೆ? ಅಲ್ಲಿ ನನಗೆ ಪರಿಚಿತರಾರೂ ಇಲ್ಲ. ಧೈರ್ಯದಿಂದ, ಸಂಕ್ಷೇಪವಾಗಿ ನನ್ನ ಪರಿಸ್ಥಿತಿಯನ್ನು ಕಂಡಕ್ಟರ್‌ಗೆ ಹೇಳಿಕೊಂಡೆ. “ಕೊಪ್ಪಳದಲ್ಲಿ ಇಳಿಯುತ್ತಲೇ ನಿಮಗೆ ಹಣ ಕೊಡುವ ವ್ಯವಸ್ಥೆ ಮಾಡುತ್ತೇನೆ’ ಅಂದೆ. ಕಂಡಕ್ಟರ್ ಪ್ರಶ್ನೆಯನ್ನೇ ಕೇಳದೆ, ತಕ್ಷಣ ಟಿಕೆಟ್ ಕೊಟ್ಟು ಬಿಟ್ಟ. ನನ್ನ ಸ್ನೇಹಿತನಿಗೆ ಫೋನ್ ಮಾಡಿ, ಮುಂದಿನ ವ್ಯವಸ್ಥೆ ಮಾಡಿದ್ದೆ. ಕೊಪ್ಪಳ ಬಸ್ ಬಸ್ಟಾಂಡಿಗೆ ಬಂದಾಗ ಅಭಿಮಾನ ಪೂರ್ವಕ ಕಂಡಕ್ಟರನಿಗೆ ಹಣ ಕೊಟ್ಟೆ. ಆತ, “ಯಾರಿಗಾದರೂ ಇಂತಹ ಸಂದರ್ಭ ಎದುರಾಗಬಹುದು. ನಿಮ್ಮ ಮಾತಿನಲ್ಲಿ ಸತ್ಯವಿದೆ ಅನ್ನಿಸಿಯೇ ಟಿಕೆಟ್ ಕೊಟ್ಟೆ. ಹುಷಾರು, ಹೋಗಿ ಬನ್ನಿ’ ಎಂದರು. ಅವರಿಗೊಂದು ಕೃತಜ್ಞತೆ ಹೇಳಿ ಹೊರಟೆ. ಈಗ, ಆವತ್ತಿನ ಚಿತ್ರಣ ನೆನಪಿಸಿಕೊಂಡಾಗೆಲ್ಲ, ಕಂಡಕ್ಟರ್ ದೇವರಂತೆ ಕಾಣುತ್ತಾರೆ.
ಭೋಜರಾಜ ಸೊಪ್ಪಿಮಠ