ಅಂದು ಭಾನುವಾರ. ವೈಯಕ್ತಿಕ ಕೆಲಸದ ನಿಮಿತ್ತ ಸೂಳೇಭಾವಿಯಿಂದ ಅಮೀನಗಡಕ್ಕೆ ಹೋಗಿದ್ದೆ.
ಆ ದಿನಗಳಲ್ಲಿ ನಾನು ವಿದ್ಯಾರ್ಥಿ. ಹೀಗಾಗಿ, ಹೆಚ್ಚೆಂದರೆ ನನ್ನ ಬಳಿ ಹತ್ತು ರೂಪಾಯಿ ಇರುತ್ತಿತ್ತು. ಅದೂ ವಾರಕ್ಕೊಮ್ಮೆ ತಂದೆಯವರು ಪಾಕೆಟ್ ಮನಿ ರೂಪದಲ್ಲಿ ಹಣ ಕೊಟ್ಟರೆ ಮಾತ್ರ. ಇಲ್ಲವಾದರೆ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಅಮೀನಗಡದ ಊರ ಒಳಗೆ ನಡೆದು ಹೋಗುತ್ತಿದ್ದೆ. ವಿಪರೀತ ಬಿರು ಬಿಸಿಲು ಬೇರೆ. ನಾನೊಬ್ಬನೇ ಹೋಗಿದ್ದೆ.
ಎರಡು ಮೂರು ದಿನದ ಹಿಂದೆ ಸಣ್ಣಗೆ ಜ್ವರ ಬೇರೆ ಕಾಡಿತ್ತು. ಮಾತ್ರೆ ತೆಗೆದುಕೊಂಡಿದ್ದರಿಂದ, ಸ್ವಲ್ಪ ವಾಸಿಯಾದಂತೆ ಆಗಿತ್ತಾದರೂ ಸುಸ್ತು ಇದ್ದೇ ಇತ್ತು. ಆ ಊರಲ್ಲಿ ಕಿರಿದಾದ ರಸ್ತೆ ನಡುವೆ ಹೋಗುವಾಗ ದಿಢೀರನೆ ತಲೆ ಸುತ್ತು ಬಂದಂತೆ ಆಯಿತು. ಕಣ್ಣು ಮಂಜು, ಮಂಜು. ಸ್ವಲ್ಪ ಮಂಪರು ಆದಂತಾಗಿ, ನೋಡುನೋಡುತ್ತಿದ್ದಂತೆಯೇ ಪ್ರಜ್ಞಾಹೀನನಾಗಿ ನೆಲಕ್ಕೆ ಉರುಳಿದೆ. ಕಣ್ಣು ಬಿಟ್ಟು ನೋಡ್ತೀನಿ: ಅಲ್ಲಿಯೇ ಹತ್ತಿರವಿದ್ದ ಹುನಗುಂದ ಆಸ್ಪತ್ರೆ ಯ ಬೆಡ್ ಮೇಲೆ ಮಲಗಿದ್ದೆ. ಸಲೈನ್ ಹಚ್ಚಿ ದ್ದರು. ಎಚ್ಚೆತ್ತುಕೊಂಡು, ನರ್ಸ್‌ಗೆ , “ನನಗೆ ಏನಾಯಿತು’ ಎಂದು ಕೇಳಿದಾಗ, “ನಿಶಕ್ತಿಯಾಗಿ, ದೇಹದಲ್ಲಿ ರಕ್ತ ಕಡಿಮೆಯಾಗಿ ಪ್ರಜ್ಞೆ ಕಳೆದುಕೊಂಡಿದ್ದಿರಿ. ಯಾರೋ ಪರಿಚಿತ ವ್ಯಕ್ತಿ ಇಲ್ಲಿ ತಂದು ಸೇರಿಸಿದರು. ಚಿಕಿತ್ಸೆಯ ದುಡ್ಡು ಅವರೇ ಭರಿಸಿದ್ದಾರೆ ಅಂದರು. ಮತ್ತೆ ಎಲ್ಲಿ ಆ ಪುಣ್ಯಾತ್ಮ ಅಂದಾಗ- “ತುರ್ತು ಕಾರ್ಯವಿದೆ ಎಂದು ಹೋದರು’ ಅಂದರು ನರ್ಸ್. ಆಗ ನನ್ನಲ್ಲಿ ಕಣ್ಣೀರ ಧಾರೆ. ಆ ಪುಣ್ಯಾತ್ಮ ಹಾಗೂ ವೈದ್ಯರಿಗೆ ಇಬ್ಬರಿಗೂ ಮನದಲ್ಲೇ ನಮಿಸಿ ಮನೆ ಸೇರಿದೆ. ಈ ಘಟನೆಯನ್ನು ಮನೆಯವರಿಗೆ ತಿಳಿಸಲಿಲ್ಲ. ಅಮೀನಗಡ ಹೋದಾಗ ಅಥವಾ ಆ ಊರು ನೆನಪಾದಾಗಲೋ ಈ ಘಟನೆ ಈಗಲೂ ಫಕ್ಕನೆ ಕಣ್ಣ ಮುಂದೆ ಬಂದು, ಕಣ್ಣಂಚು ತೇವವಾಗುತ್ತದೆ. ಆವತ್ತು ಸಹಾಯ ಮಾಡಿದ ವ್ಯಕ್ತಿ ಯಾರೆಂದು ತಿಳಿದಿಲ್ಲ. ಆಪತ್ತಿಗೆ ಆದವನೇ ನಿಜವಾದ ನೆಂಟ ಅಂತಾರೆ. ಆತ ಎಲ್ಲೇ ಇರಲಿ, ಹೇಗೇ ಇರಲಿ, ಸದಾ ಸುಖೀಯಾಗಿರಲಿ ಅನ್ನೋದೇ ನನ್ನ ಪ್ರಾರ್ಥನೆ.
ರಂಗನಾಥ ಎನ್ ವಾಲ್ಮೀಕಿ