Advertisement

ಸಮಯಕ್ಕಾದ ಈ ನೆಂಟ

06:13 PM Oct 14, 2019 | Team Udayavani |

ಅಂದು ಗಾಂಧಿ ಜಯಂತಿ. ರಜೆ ಬೇರೆ. ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದೆವು. ಅದು ಮುಗಿಯುತ್ತಿದ್ದಂತೆ ಗೆಳೆಯರು ಬಂದರು. ಗೊಂದಿ ಫಾಲ್ಸ್ ಗೆ ಹೋಗಲು ಮಾತುಕತೆ ಆಯಿತು. ಅಲ್ಲಿಗೆ ಹೋಗುವಷ್ಟರಲ್ಲಿ ಸಮಯ ಮಧ್ಯಾಹ್ನ ಮೂರು ಗಂಟೆ ದಾಟಿತ್ತು. ಸ್ವಲ್ಪ ಹಸಿವು ಕೂಡ ಹುಟ್ಟಿದ್ದರಿಂದ, ಊರ ಬದಿಯಲ್ಲಿದ್ದ ಜೋಳವನ್ನು ಕಿತ್ತು ತಿನ್ನುತ್ತಾ ಹೋದೆವು.

Advertisement

ಶಿಕ್ಷಕರೂ ಕೂಡಾ ಜೊತೆಯಾದರು. ಅಂತೂ ಫಾಲ್ಸ್ ಗೆ ಇಳಿದು ಸೆಲ್ಫಿ ಗಿಲ್ಫಿ ತೆಗೆದುಕೊಂಡು, ನಂತರ ತಿಂಡಿ ಶಾಸ್ತ್ರವನ್ನೂ ಮುಗಿಸಿದ್ದಾಯಿತು. ಸಂಜೆ 7ರ ಒಳಗಾಗಿ ಹುಡುಗಿಯರು ಹಾಸ್ಟೆಲ್‌ ಸೇರಬೇಕಿತ್ತು. ನಾವೋ ಹೋದ ಬಟ್ಟೆಯಲ್ಲೇ ಜಲಪಾತಕ್ಕೆ ಹಾರಿದವರು. ಬಟ್ಟೆಯೆಲ್ಲಾ ಒದ್ದೆ ಆಗಿತ್ತು. ಅದೇ ಬಟ್ಟೆಯಲ್ಲೇ ಬಸ್‌ ನಿಲ್ದಾಣಕ್ಕೆ ಬಂದೆವು. ಆಗ ಸಮಯ 6.30 ಆಗಿ ಹೋಗಿತ್ತು. ಇನ್ನೇನು ಕಾಲು ಗಂಟೆಯಲ್ಲಿ ಬಸ್‌ ಬರುತ್ತದೆ ಅಂದಿದ್ದರು.

ಇನ್ನೇನು ಬರಬಹುದು ಅಂತ ಎಷ್ಟೋ ಹೊತ್ತು ಕಾದರೂ ಬಸ್‌ ಬರಲೇ ಇಲ್ಲ. ನಮಗೋ, ಹಾಸ್ಟೆಲ್‌ ತಲುಪುವ ಸಮಯ ಮೀರುತ್ತ ಬಂದ ತಳಮಳ. ಅಷ್ಟರಲ್ಲಾಗಲೇ ಎದುರಿನಿಂದ ಪಿಳಿ ಪಿಳಿ ಲೈಟು ಬಿಡುತ್ತಾ ಒಂದು ಹೊಸಾ ಲಗೇಜ್‌ ಆಟೋ ಬರುತ್ತಿತ್ತು. ಇನ್ನು ಕಾದರೆ ಆಗೋಲ್ಲ ಎಂದು ಆಟೋವನ್ನು ಅಡ್ಡ ಹಾಕಿದೆವು. ಪರಿಸ್ಥಿತಿಯನ್ನು ವಿವರಿಸಿದ್ದಕ್ಕೆ, ಅವರೂ ವಾಹನ ನಿಲ್ಲಿಸಿ ನಮ್ಮನ್ನು ವಿವಿ ವರೆಗೂ ಬಿಟ್ಟರು. ಹೋಗುವ ದಾರಿಯಲ್ಲಿ ನಮ್ಮದೇ ದರ್ಬಾರು. ಅದೇನು ಹಾಡು, ಅದೇನು ಕೂಗು. ಒಂದು ಕ್ಷಣ ಅನಿಸಿತು. ಈ ಆಟೋ ಚಾಲಕ ಬರೆದೇ ಇದ್ದರೆ, ಬಂದು ಕೂಡ ನಮನ್ನು ಹತ್ತಿಸಿಕೊಳ್ಳದೇ ಇದ್ದಿದ್ದರೆ ಏನಾಗುತ್ತಿತ್ತು ಅಂತ. ಈ ಯೋಚನೆ ತಲೆಗೆ ಬಂದದ್ದೇ ಮೈ ಎಲ್ಲಾ ಬೆವತಂತೆ ಆಯಿತು. ನಾನಾ ಯೋಚನೆಗಳು ಹರಿದಾಡಿ ಭಯವಾಯಿತು. ಹಾಸ್ಟೆಲ್‌ಗೆ ಲೇಟಾಗಿ ಹೋಗಿದ್ದರೆ ನಾವೆಲ್ಲರೂ ಹಾಸ್ಟೆಲ್‌ ಹೊರಗೆ ನಿಲ್ಲಬೇಕಿತ್ತು. ನಮ್ಮ ಕಷ್ಟದ ಸಮಯದಲ್ಲಿ ದೇವರಂತೆ ಬಂದು ನಮ್ಮನ್ನು ವಿವಿಗೆ ಸೇರಿಸಿದ ಆಟೋ ಚಾಲಕನಿಗೆ ಧನ್ಯವಾದಗಳು.

ಪವನ್‌ ಕುಮಾರ್‌ ಎಂ. ರಿಪ್ಪನ್‌ ಪೇಟೆ

Advertisement

Udayavani is now on Telegram. Click here to join our channel and stay updated with the latest news.

Next