Advertisement

ಮಧ್ಯರಾತ್ರಿ ಸಿಕ್ಕಿದ ಪುಣ್ಯಾತ್ಮ

05:31 PM Sep 23, 2019 | mahesh |

ಅವತ್ತು ಕೆಲಸ ಮುಗಿಯುವಷ್ಟರಲ್ಲಿ ರಾತ್ರಿ 10.30 ಆಗಿತ್ತು. ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಅಲ್ಲಿಂದ ಬನ್ನೇರುಘಟ್ಟಕ್ಕೆ ಹೋಗಬೇಕಿತ್ತು. ಒಂದು ಗಂಟೆ ಕಾದರೂ ಬಸ್ಸು ಬರಲೇ ಇಲ್ಲ. ಆಟೋದವರನ್ನು ಕೇಳಿದರೆ, ಅಷ್ಟು ದೂರ ಬರೋದಿಲ್ಲ ಅಂದುಬಿಟ್ಟರು. ಸ್ವಲ್ಪ ದೂರದವರೆಗಾದರೂ ಆಟೋದಲ್ಲಿ ಹೋಗಿ, ಅಲ್ಲಿಂದ ಬಸ್‌ನಲ್ಲಿ ಹೋಗಬಹುದಲ್ಲ ಅಂತ ಯೋಚಿಸಿ, ಮುಂದಿನ ಸ್ಟಾಪ್‌ವರೆಗೆ ಬರ್ತಿರಾ? ಅಂದೆ. 150 ರೂ. ಆಗುತ್ತೆ ಅಂದರು. ಒಂದು ಕ್ಷಣ ದಂಗಾಗಿಬಿಟ್ಟೆ. ಏಕೆಂದರೆ, ನನ್ನ ಬಳಿ ಇದ್ದಿದ್ದೇ 100 ರೂ. ನಡೆದುಕೊಂಡು ಹೋಗೋಣ ಅಂದ್ರೆ, ನಾನು ಬೆಂಗಳೂರಿಗೆ ಬಂದು ಕೆಲ ದಿನಗಳಾಗಿತ್ತಷ್ಟೆ. ಅಪರಿಚಿತ ಊರಿನಲ್ಲಿ, ಮಧ್ಯರಾತ್ರಿಯಲ್ಲಿ ಎಲ್ಲಿಗೆ ಹೋಗಲಿ? ಆದರೂ, ಧೈರ್ಯ ಮಾಡಿ ಡೈರಿ ಸರ್ಕಲ್‌ನತ್ತ ಹೊರಟವನು, ಕತ್ತಲೆಯಲ್ಲಿ ಸರಿಯಾಗಿ ದಾರಿ ತಿಳಿಯದೇ ಬೇರೆ ಯಾವುದೋ ರಸ್ತೆಯಲ್ಲಿ ಅರ್ಧ ಕಿ.ಮೀ. ಹೋಗಿಬಿಟ್ಟಿದ್ದೆ. ಗೂಗಲ್‌ ಮ್ಯಾಪ್‌ ನೋಡೋಣವೆಂದರೆ, ಫೋನು ಸ್ವಿಚ್‌ ಆಫ್ ಆಗಿತ್ತು.

Advertisement

ನಿರ್ಜನ ರಸ್ತೆ, ಮಧ್ಯರಾತ್ರಿ, ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ವಾಹನಗಳಿಗೆ ಕೈ ಅಡ್ಡ ಹಾಕಿದರೂ ಯಾರೂ ನಿಲ್ಲಿಸಲಿಲ್ಲ. ಹಾಗೇ ನಡೆಯುತ್ತಾ ಮುಂದೆ ತೆರೆದಿದ್ದ ಅಂಗಡಿಯವನಲ್ಲಿ, ಡೈರಿ ಸರ್ಕಲ್‌ ಅಡ್ರಸ್‌ ಕೇಳಿ ಹಾಗೋ ಹೀಗೋ ತಲುಪುವಷ್ಟರಲ್ಲಿ ಸಮಯ ಹನ್ನೆರಡೂವರೆ. ಅಲ್ಲಿ ಒಂದಿಬ್ಬರು ಇದ್ದರು. ಅವರನ್ನು ಬಸ್ಸಿನ ಕುರಿತು ವಿಚಾರಿಸಿದೆ. ಇಷ್ಟು ಹೊತ್ತಿನಲ್ಲಿ ಬಸ್ಸು ಸಿಗುವುದು ಅನುಮಾನ ಎಂದಾಗ, ವಿಧಿ ಇಲ್ಲದೆ ಮತ್ತೆ ನಡೆಯತೊಡಗಿದೆ. ಹೊಟ್ಟೆ ಚುರುಗುಟ್ಟುತ್ತಿತ್ತು. ಹಾಗೇ ಮುಂದೆ ಸಾಗುತ್ತಿದ್ದಾಗ ಗಾಡಿಯೊಂದು ಬರುವುದನ್ನು ನೋಡಿ, ಸಾರ್‌, ಸಾರ್‌ ಅಂತ ಕೂಗುತ್ತಾ, ಕೈ ಅಡ್ಡ ಹಾಕಿದೆ. ಗಾಡಿ ನಿಲ್ಲಿಸಿದ ಆ ಪುಣ್ಯಾತ್ಮ, ಎಲ್ಲಿಗೆ ಎಂದ? ಬನ್ನೇರುಘಟ್ಟ ಅಂದಾಗ, ಆತ ಗೊಟ್ಟಿಗೆರೆ ಲಾಸ್ಟ್‌ ಅಂದ. ಅವನ ಹೆಸರನ್ನೂ ಕೇಳದೆ ಅಲ್ಲಿಯವರೆಗೆ ಗಾಡಿಯಲ್ಲಿ ಹೋದೆ. ಅಲ್ಲಿಂದ ಮುಂದೆ ಆತನೇ ಆಟೋ ಒಂದಕ್ಕೆ ಹೇಳಿ, ನನ್ನನ್ನು ಬನ್ನೇರುಘಟ್ಟ ತಲುಪಿಸಿದ. ಆಗ ಸಮಯ ರಾತ್ರಿ 1.30. ಆವತ್ತು ಆ ಗಾಡಿಯವನು ಸಿಗದೇ ಹೋಗಿದ್ದರೆ, ರಾತ್ರಿಯೆಲ್ಲಾ ರಾಜಧಾನಿಯಲ್ಲಿ ಪಾದಯಾತ್ರೆ ಮಾಡಬೇಕಿತ್ತೇನೋ! ನನ್ನ ಪುಣ್ಯಕ್ಕೆ ಆ ಪುಣ್ಯಾತ್ಮ ಸಿಕ್ಕ.

-ಯೋಗೇಶ್‌ ಮಲ್ಲೂರು.

Advertisement

Udayavani is now on Telegram. Click here to join our channel and stay updated with the latest news.

Next