Advertisement

ಪುಂಡರೇ ಪ್ರಾಣ ರಕ್ಷಕರಾಗಿ ಬಂದಾಗ…

04:25 PM Jun 10, 2019 | Team Udayavani |

ಕೆಲ ವರ್ಷಗಳ ಹಿಂದೆ ಕುಟುಂಬದವರೆಲ್ಲ ತಿರುಪತಿಗೆ ತೆರಳಿದ್ದೆವು. ವರಾಹ ದೇಗುಲ ದರ್ಶನಕ್ಕೆ ಬಂದು, ಕೈಕಾಲು ತೊಳೆಯಲು ಪುಷ್ಕರಿಣಿಗೆ ಇಳಿದೆವು. ಸುಮಾರು ಜನರಿದ್ದರು. ನಮ್ಮ ಎರಡೂ ಪುಟ್ಟ ಮಕ್ಕಳನ್ನು ಹಿಡಿದು ಪಾವಟಿಗೆಯ ಮೇಲೆ ಕುಳಿತಿದ್ದೆವು. ಕಲ್ಯಾಣಿಯಲ್ಲಿ ಯಾರೋ ಅವಳಿ- ಜವಳಿ ಯುವಕರು ನೀರಿನಲ್ಲಿ ಜೋರಾಗಿ, ಕಿರುಚಾಡುತ್ತಾ, ಈಜುತ್ತಾ ಅಲ್ಲಿನ ಪರಿಸರದ ಶಾಂತತೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರು. ಥೋ! ಎಂಥ ಜನರಪ್ಪಾ ಎಂದು ಮನಸ್ಸಿನಲ್ಲೇ ಶಪಿಸುತ್ತಾ, ನೀರಿಗಿಳಿಯಲು ಮುಂದಾದೆ.

Advertisement

ನನ್ನ ಒಂದೂವರೆ ವರುಷದ ಮಗ, ನನ್ನ ಹಿಂದೆಯೇ ಬಂದಿದ್ದು, ಗೊತ್ತಾಗಲಿಲ್ಲ. ನಾನು ಅವನತ್ತ ನೋಡುತ್ತಿದ್ದಾಗ, ಅದಾಗಲೇ ಅವನು ಕಾಲು ಜಾರಿ ನೀರಿಗೆ ಬಿದ್ದಿದ್ದ. ಮನೆಯರೆಲ್ಲರೂ ಅವರವರ ಮಕ್ಕಳೊಂದಿಗೆ ತಲ್ಲೀನಾಗಿದ್ದರಿಂದ, ಯಾರೂ ಗಮನಿಸಲೇ ಇಲ್ಲ. ಏನಾದರಾಗಲೀ, ಮಗನ ಹಿಡಿದೆಳೆಯಲೇಬೇಕೆಂದು ನಾನು ಸಂಪೂರ್ಣವಾಗಿ ಬಗ್ಗಿ, ನೀರಿನಲ್ಲಿ ಕೈಯ್ನಾಡಿಸಲು ಆರಂಭಿಸಿದೆ. ಮಗನ ಮುಖ ಸಂಪೂರ್ಣವಾಗಿ ನೀರಿನಲ್ಲಿ ಮರೆಯಾಗಿಬಿಟ್ಟಿತು. ಛಕ್ಕನೆ ಚಿತ್ರಗಳಲ್ಲಿ ಬರುವ ದೃಶ್ಯದಂತೆ ಮಗು ಮೇಲೆ ಮೇಲೆ ಬರುತ್ತಿತ್ತು. ನಾನು ಈ ಮೊದಲು ಮನಸ್ಸಿನಲ್ಲಿ ಬಯ್ದುಕೊಂಡ ಯುವಕರು, ತಕ್ಷಣ ಧಾವಿಸಿ, ಮಗುವಿನ ಎಡಬಲದಲ್ಲಿ ಹಿಡಿದು ಪ್ರಾಣ ರಕ್ಷಿಸಿದರು. ಇವೆಲ್ಲ ಕೆಲವೇ ಸೆಕೆಂಡಿನಲ್ಲಿ ಘಟಿಸಿತ್ತು. ಕಣ್ಣೀರು ತುಂಬಿದ್ದರಿಂದ, ಅವರ ಮುಖ ಸರಿಯಾಗಿ ಕಾಣಿಸಲಿಲ್ಲ. ಆ ಹೊತ್ತಿನಲ್ಲಿ ಧನ್ಯವಾದ ಹೇಳಲೂ ಮರೆತಿದ್ದೆ. ಆ ಹುಡುಗರು, ಯಾವ ಭಾಷಿಕರೇ ಆಗಿರಲಿ, ಎಲ್ಲೇ ಇರಲಿ, ಅವರನ್ನು ದೇವರು ಚೆನ್ನಾಗಿ ಇಟ್ಟಿರಲಿ.

– ಪದ್ಮಾ ಆರ್‌. ಅಡಿಗ, ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next