ಭೋಪಾಲ್: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಎರಡು ಗೂಡ್ಸ್ ರೈಲುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ರವಿವಾರ ಬೆಳಗ್ಗೆ ನಡೆದಿರುವ ಈ ದುರ್ಘಟನೆಯಲ್ಲಿ ಲೋಕೋ ಪೈಲಟ್ ಮತ್ತು ಆತನ ಸಹಾಯಕ ಸೇರಿದಂತೆ ಒಟ್ಟು ಮೂರು ಜನ ಸಾವನ್ನಪ್ಪಿದ್ದಾರೆ.
ಸಿಂಗ್ರೌಲಿ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿರುವ ವೈಧಾನ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.
ಕಲ್ಲಿದ್ದಲು ತುಂಬಿಕೊಂಡು ಉತ್ತರಪ್ರದೇಶದ ರಿಹಂದ್ ನಗರದಲ್ಲಿರುವ ಎನ್.ಟಿ.ಪಿ.ಸಿ.ಗೆ ಸಾಗುತ್ತಿದ್ದ ಗೂಡ್ಸ್ ರೈಲಿಗೆ ಎದುರುಗಡೆಯಿಂದ ಬಂದ ಖಾಲಿ ಗೂಡ್ಸ್ ರೈಲು ಢಿಕ್ಕಿ ಹೊಡೆಯಿತು.
ಘಟನೆಯಲ್ಲಿ ಕಲ್ಲಿದ್ದಲಿ ತುಂಬಿದ್ದ ರೈಲಿನಲ್ಲಿದ್ದ ಲೋಕೋ ಪೈಲಟ್ ರಶೀದ್ ಅಹಮ್ಮದ್ ಮತ್ತು ಅವರ ಸಹಾಯಕ ಲೋಕೋ ಪೈಲಟ್ ಮನ್ ದೀಪ್ ಕುಮಾರ್ ಮತ್ತು ಪಾಯಿಂಟ್ ಮ್ಯಾನ್ ರಾಮ ಲಕ್ಷಣ್ ಮೃತಪಟ್ಟಿದ್ದಾರೆ.
ಟ್ರ್ಯಾಕ್ ಬದಲಿಸುತ್ತಿದ್ದ ಸಂಧರ್ಭದಲ್ಲಿ ಒಂದು ರೈಲು ಇನ್ನೊಂದು ರೈಲಿಗೆ ಅಪ್ಪಳಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಎನ್.ಟಿ.ಪಿ.ಸಿ.ಯ ಮಾಲಿಕತ್ವದ ಮತ್ತು ಅದೇ ನಿರ್ವಹಣೆ ಮಾಡುತ್ತಿದ್ದ ರೈಲ್ವೇ ಟ್ರ್ಯಾಕ್ ನಲ್ಲಿ ಈ ಅವಘಡ ಸಂಭವಿಸಿದೆ.