ಜೈಪುರ್: ದೇವಾಲಯದ ಅರ್ಚಕರನ್ನು ಹತ್ಯೆಗೈದು, ದೇವರ ವಿಗ್ರಹವನ್ನು ಕದ್ದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರಾಜಸ್ಥಾನ್ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರವಾದಿ ಇಂದು ಬದುಕಿದ್ದರೆ…:ಟ್ವೀಟ್ ಮಾಡಿ ಕೆಂಗಣ್ಣಿಗೆ ಗುರಿಯಾದ ತಸ್ಲೀಮಾ ನಸ್ರಿನ್
ಇದೊಂದು ಪುರಾತನ ಕಲಾಕೃತಿಯಾಗಿದ್ದು, ಇದು ಸುಮಾರು 300 ಕೋಟಿ ರೂಪಾಯಿ ಬೆಲೆ ಬಾಳಬಹುದು ಎಂದು ಆರೋಪಿಗಳು ತಪ್ಪಾಗಿ ಲೆಕ್ಕಚಾರ ಹಾಕಿರುವುದಾಗಿ ವರದಿ ವಿವರಿಸಿದೆ.
ಆರೋಪಿಗಳನ್ನು ಬುಂಡಿ ಜಿಲ್ಲೆಯ ನಿವಾಸಿಗಳಾದ ಸೋನು ಮೆಹವರ್, ಬಾದಲ್ ಮೆಗ್ವಾಲ್ ಮತ್ತು ಲೋಕೇಶ್ ಶ್ರಿಂಗಿ ಎಂದು ಗುರುತಿಸಲಾಗಿದೆ. ಈ ಮೂವರನ್ನು ಸ್ವೈಮಾಧೋಪುರ್ ನಲ್ಲಿ ಸೆರೆಹಿಡಿಯಲಾಗಿದೆ ಎಂಬುದಾಗಿ ಬುಂಡಿ ಪೊಲೀಸ್ ವರಿಷ್ಠಾಧಿಕಾರಿ ಜೈ ಯಾದವ್ ತಿಳಿಸಿದ್ದಾರೆ.
ಸೋಮವಾರ ಬುಂಡಿಯ ಡೋಬ್ರಾ ದೇವಸ್ಥಾನದ ಅರ್ಚಕ ವಿವೇಕಾನಂದ ಶರ್ಮಾ (40ವರ್ಷ) ಅವರ ಹತ್ಯೆಯ ತನಿಖೆಗಾಗಿ ಎಎಸ್ಪಿ ಕಿಶೋರಿ ಲಾಲ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಭಗವಾನ್ ಶ್ರೀಕೃಷ್ಣನ ಅವತಾರವಾದ ಚಾರ್ಭುಜಾ ವಿಗ್ರಹವನ್ನು ಕಳವುಗೈಯುವ ಮೊದಲು ಆರೋಪಿಗಳು ಅರ್ಚಕರನ್ನು ಹರಿತವಾದ ಆಯುಧದಿಂದ ಹತ್ಯೆಗೈದಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಮೂವರು ಆರೋಪಿಗಳು ನಿರುದ್ಯೋಗಿಗಳಾಗಿದ್ದು, ಶೀಘ್ರವಾಗಿ ಶ್ರೀಮಂತರಾಗಲು ಬಯಸಿದ್ದರು ಎಂದು ತಿಳಿಸಿದೆ.