Advertisement

ಕಾಲೇಜು ರಂಗೋತ್ಸವದಲ್ಲಿ ಮೆರೆದ ಮೂರು ಪ್ರಬುದ್ಧ ನಾಟಕಗಳು

06:30 PM Sep 19, 2019 | mahesh |

ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶನಾಲಯ ಮಂಗಳೂರು ವಿಶ್ವವಿದ್ಯಾನಿಲಯ, ಭಂಡಾರ್‌ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಪ್ರಾಯೋಜಿತ ರಂಗೋತ್ಸವ -2019ರಂಗವಾಗಿ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ ಕಾಲೇಜು ಮಟ್ಟದ ನಾಟಕ ಸ್ಪರ್ಧೆ ನಡೆಯಿತು. ಅವಿಭಜಿತ ಜಿಲ್ಲೆ ಮತ್ತು ಕೊಡಗಿನ ಸುಮಾರು ಹದಿನೈದು ಕಾಲೇಜುಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಬಾಸುಮ ಕೊಡಗು, ಜಯರಾಂ ನೀಲಾವರ ಮತ್ತು ಸಂತೋಷ್‌ ಶೆಟ್ಟಿ ಹಿರಿಯಡಕ ಭಾಗವಹಿಸಿದರು.

Advertisement

ಪಂಚವಟಿ
ಭ್ರಮೆಯ ಜಗತ್ತಿನೊಳಗೆ ತಾಕಲಾಡುವ ಈ ಹೊತ್ತಿನ ರಾಮ ಒಂದು ಕಡೆಯಾದರೆ, ಹಿಂಸೆ ಕೌರ್ಯಕ್ಕೆ ಬಲಿಯಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಸ್ವಾತಂತ್ರ್ಯದ ರೆಕ್ಕೆ ಕಳೆದುಕೊಳ್ಳುತ್ತಿರುವ ಸಾಮಾನ್ಯ ಜಟಾಯುಗಳು ಇನ್ನೊಂದು ಕಡೆ. ಉನ್ಮಾದದ ಕಿಚ್ಚು ಹತ್ತಿಸಿ ಅದರಿಂದ ವಿಕೃತಾನಂದ ಪಡುವ ಇನ್ನೊಂದು ವರ್ಗವಿದೆ. ಈ ಹೊತ್ತಿಗೆ ನಾವು ಎಂತಹ ರಾಮನನ್ನು ಕಾಣಬೇಕು ಎಂಬುದೆ ಇವತ್ತಿನ ಪ್ರಶ್ನೆ.

ಶೂರ್ಪನಖಿ, ಲಕ್ಷ್ಮಣ ಮತ್ತು ರಾಮನನ್ನು ಕಂಡು ಮೋಹಿತಳಾಗುತ್ತಾಳೆ. ಅವರಿಂದ ಘಾಸಿಗೊಂಡು ರಾವಣನಲ್ಲಿ ದೂರುತ್ತಾಳೆ. ರಾವಣ ಮಾವ ಮಾರೀಚನಿಂದ ಮಾಯಾ ಜಿಂಕೆಯಾಗಿ ಸೀತೆಯನ್ನು ಕಾಡುವಂತೆ ಮಾಡಿ, ರಾಮನಿಲ್ಲದ ವೇಳೆ ಸೀತೆಯನ್ನು ಅಪಹರಿಸುತ್ತಾನೆ. ಜಟಾಯು – ರಾವಣ ಯುದ್ಧದಲ್ಲಿ ನಾಟಕ ಕೊನೆಗೊಳ್ಳುತ್ತದೆ.

ಇಲ್ಲಿ ಬರುವ ರಾವಣ ಅತ್ತ ಜಾನಪದವೂ, ಕೇರಳದ ಕಥಕ್ಕಳಿಯ ರೀತಿ, ಶೂರ್ಪನಖೀ ವೇಷ ಭೂಷಣಗಳು ಅದೇ ರೀತಿ ಇತ್ತು. ರಾಕ್ಷಸಿ ಮಾಯಾ ಶೂರ್ಪನಖೀಯಾಗಿ ಬದಲಾಗುವ ಸಂದರ್ಭ ಯಕ್ಷಗಾನದ ಪರದೆ ಉಪಯೋಗಿಸಿಕೊಂಡಿದ್ದಾರೆ. ಅನಂತರ ಬರುವ ರಾವಣನ ಪುಷ್ಪಕ ವಿಮಾನ ವಿಸ್ಮತರನ್ನಾಗಿ ಮಾಡಿದೆ. ಜಟಾಯು ಮತ್ತು ರಾವಣ ಯುದ್ಧ ಇಡೀ ರಂಗವನ್ನು ತುಂಬಿಕೊಳ್ಳುತ್ತಾ ರಂಗಸ್ಥಳವನ್ನು ಪಂಚವಟಿಯನ್ನಾಗಿಸಿತು. ರಾವಣ, ಶೂರ್ಪನಖಿ,ಮಾಯಾ ಶೂರ್ಪನಖೀ, ಜಟಾಯು ನಟನೆ ಉತ್ತಮವಾಗಿತ್ತು. ಚಂಡೆ, ಹಾಡು, ಬೆಳಕು ಇವೆಲ್ಲವೂ ಪೂರಕವಾಗಿ ಕಣ್ಣಿಗೆ ಮೆರುಗು ನೀಡಿ ಪ್ರಥಮ ಸ್ಥಾನ ಪಡೆಯಲು ಕಾರಣವಾಯಿತು. ನಿರ್ದೇಶಕ ಪ್ರಶಾಂತ್‌ ಉದ್ಯಾವರ ಅವರನ್ನು ನೆನಪಿಸಲೇ ಬೇಕು.


ದೂತ ಘಟೋತ್ಕಚ
ಕೌರವನ ಶಿಬಿರಕ್ಕೆ ದೂತ ನಾಗಿ ಬಂದ ಘಟೋತ್ಕಚನು ತನ್ನ ಚಿಕ್ಕಪ್ಪನಾದ ಅರ್ಜುನನು ಮಾಡಿದ ಶಪಥವನ್ನು ಹಾಗೂ ಕೃಷ್ಣನ ಸಂದೇಶವನ್ನು ಅಜ್ಜ ದೃತರಾಷ್ಟ್ರನಿಗೆ ಒಪ್ಪಿಸುತ್ತಾನೆ. ಈ ಸಂದರ್ಭದಲ್ಲಿ ದುರ್ಯೋಧನಾದಿಗಳಿಂದ ಪ್ರಚೋದನೆಗೊಳಗಾಗಿ ಅವನು ತೋರುವ ಶೌರ್ಯ,ಧೈರ್ಯ ಎಲ್ಲವೂ ರಂಗಕ್ರಿಯೆಯಲ್ಲಿ ಮೂಡಿಬಂತು.

ಘಟೋತ್ಕಚನ ರಾಕ್ಷಸ ರೂಪ, ಮಾತಿನಲ್ಲಿ ತೋರುವ ಮಾನವೀಯತೆಯನ್ನು ಕಣ್ತುಂಬಿಗೊಳ್ಳಬಹುದು. ದೃತರಾಷ್ಟ್ರನ ಪುತ್ರ ವಾತ್ಸಲ್ಯ, ತನ್ನ ಮಕ್ಕಳ ಅಳುವಿನ ಮೇಲಿದ್ದ ಪೂರ್ವ ನಿಶ್ಚಿತತೆ, ಇವೆರಡೂ ಸಮತೂಕದಲ್ಲಿ ನೋಡಬಹುದು. ಅಜ್ಜನ ಮೇಲಿನ ಗೌರವ, ತನ್ನ ಶಕ್ತಿಯ ಮೇಲಿದ್ದ ನಂಬಿಕೆ, ಕೃಷ್ಣನ ಮೇಲಿದ್ದ ಗೌರವ, ರಾಕ್ಷಸನಾಗಿದ್ದರೂ ಅವನ ಮಾನವೀಯ ಗುಣಗಳನ್ನು ರಂಗದಲ್ಲಿ ಕಾಣಬಹುದು. ದುರ್ಯೋಧನ, ಶಕುನಿ, ಘಟೋತ್ಕಚನ ಶೈಲೀಕೃತ ಅಭಿನಯ ನಿರ್ದೇಶಕರು ಅಭಿನಯಕ್ಕೆ ಒತ್ತು ನೀಡಿದ್ದರ ಪರಿಣಾಮದಂತೆ ಕಂಡು ಬರುತ್ತದೆ. ರಂಗಕ್ಕೆ ಪೂರಕವಾಗುವ ರಂಗ ಸಜ್ಜಿಕೆ, ಅಗತ್ಯವಿರುವಷ್ಟೇ ಬೆಳಕು, ಹಾಡು ಸಂಗೀತ ಎಲ್ಲವೂ ಪೂರಕವಾಗಿ ಮೂಡಿ ಬಂದು ನಾಟಕ ದ್ವಿತೀಯ ಸ್ಥಾನಕ್ಕೇರುವಂತೆ ಮಾಡಿತು. ನಿರ್ದೇಶಕ ಯಶವಂತ ಬೆಳ್ತಂಗಡಿಯವರಿಗೆ ಇಂತಹ ನಾಟಕ ನೀಡಿದಕ್ಕೆ ಧನ್ಯವಾದ ಹೇಳಬೇಕು.


ದೂತವಾಖ್ಯ
ಕೃಷ್ಣನ ಕಾಲ ಬುಡದಲ್ಲಿ ನಾನೇಕೆ ಕುಳಿತುಕೊಳ್ಳಬೇಕು, ನಾನು ರಾಜ ಆದ್ದರಿಂದ ತಲೆಯ ಬದಿಯಲ್ಲಿ ಕುಳಿತುಕೊಳ್ಳುವೆ ಎನ್ನುವ ಅಹಂಕಾರದ ಮಾತು ಕೃಷ್ಣ ಎದ್ದಾಗ ಕಾಲ ಕೆಳಗೆ ಕುಳಿತವನನ್ನು ಮೊದಲು ನೋಡುತ್ತಾನೆ. ದುರ್ಯೋದನನ ದಿಮಾಕಿನ ಮಾತು ಕೃಷ್ಣನನ್ನು ಅವಮಾನಿಸಲು ದ್ರೌಪದಿಯ ಸೀರೆ ಎಳೆಯುವ ದೃಶ್ಯದ ಚಿತ್ರಪಟವನ್ನು ತರಿಸಿ ನೋಡುತ್ತಿರುತ್ತಾನೆ. ನೀನು ನಿನ್ನ ಸಣ್ಣತನವನ್ನು ಪ್ರದರ್ಶಿಸುತ್ತಿರುವೆ ಎಂದು ಜರೆಯುತ್ತಾನೆ. ಅಹಂ ದುರ್ಯೋದನನಿಗೆ. ಕಡೆಗೆ ಕೃಷ್ಣನನ್ನು ಸೆರೆ ಹಿಡಿಯುವ ಹುನ್ನಾರ ಮಾಡಿದಾಗ ಕೃಷ್ಣ ತನ್ನ ಚಾತುರ್ಯ ತೋರಿಬೇಕಾಯಿತು. ಅವನಿಗೆ ಕೃಷ್ಣ ಎಲ್ಲೆಲ್ಲೂ ಕಂಡು ಬಂದ. ಸಭೆಯಲ್ಲಿ ಕುಳಿತ ಕರ್ಣ, ಶಕುನಿ, ಭೀಷ್ಮ ಎಲ್ಲರಲ್ಲೂ ಕೃಷ್ಣ ಕಂಡು ಬಂದ.ಇಲ್ಲಿ ನಿರ್ದೇಶಕರ ಚಾತುರ್ಯವನ್ನು ಗಮನಿಸಬೇಕು.ಕಡೆಗೆ ದುರ್ಯೋಧನ ಸೋತು ಬಿದ್ದಾಗ ಅಸ್ಥಾನದಲ್ಲಿ ಇರಿಸಿದ್ದ ಸೆಟ್‌ ಇಣುಕಿ ದುರ್ಯೋಧನನ್ನು ನೋಡುವ ದೃಶ್ಯ ಅದ್ಭುತವಾಗಿತ್ತು.

Advertisement

ಕೃಷ್ಣ ಸಿಟ್ಟಿನಿಂದ ತನ್ನ ಆಯುಧ ಚಕ್ರವನ್ನು ಕರೆಯುತ್ತಾನೆ. ಚಕ್ರವು ಯಕ್ಷಗಾನ ಶೈಲಿಯಲ್ಲಿ ರಂಗಕ್ಕೆ ಬಂದು ಹೊಸ ಕಳೆಯನ್ನು ನೀಡಿತು. ನಾಟಕದಲ್ಲಿ ಒಂಭತ್ತು ಪಾತ್ರಧಾರಿಗಳಿದ್ದರು. ಮೂವರನ್ನು ಮಾತ್ರ ರಂಗಕ್ರಿಯೆಗೆ ಉಪಯೋಗಿಸಿ ಉಳಿದ ಆರು ಮಂದಿಯನ್ನು ಸೆಟ್‌ಗೆ ಉಪಯೋಗಿಸಿದ್ದರು. ರಂಗಕ್ಕೆ ಇದರಿಂದ ಹೊಸ ಆಯಾಮ ಬಂದರೂ ನಾಟಕ ಕೇವಲ ಸೆಟ್‌ ಡಿಸೈನ್‌ ಅಲ್ಲ, ಇಲ್ಲಿ ನಟರ ನಟನೆಗೂ ಅವಕಾಶವಿದೆ. ಕೃಷ್ಣ, ಚಕ್ರ, ದುರ್ಯೋಧನರ ನಟನೆ ಉತ್ತಮವಾಗಿತ್ತು. ಹಾಡು ನೃತ್ಯ ಮತ್ತು ಬೆಳಕು ನಾಟಕದ ಚಲನೆಗೆ ಸಹಕಾರಿಯಾಗಿತ್ತು. ನಾಟಕ ಮೂರನೇ ಪ್ರಶಸ್ತಿಗೆ ತೃಪ್ತಿಹೊಂದಿತು. ನಿರ್ದೇಶಕ ಜೀವನ್‌ರಾಂ ಸುಳ್ಯ ಅವರ ರಂಗ ಕ್ರಿಯೆ ಅಭಿನಂದನಾರ್ಹ.

ಜಯರಾಂ ನೀಲಾವರ

Advertisement

Udayavani is now on Telegram. Click here to join our channel and stay updated with the latest news.

Next