ಜಮ್ಮು-ಕಾಶ್ಮೀರ: ಲಷ್ಕರ್ ಎ ತೊಯ್ಬಾ ಸಂಘಟನೆಯ ಮೂವರು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ (ಮೇ 23) ಬಂಧಿಸಿದ್ದು, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಐಪಿಎಲ್ ಪ್ಲೇ ಆಫ್ ಗೆ ವರುಣನ ಕಾಟ; ಗಾಳಿಗೆ ಹಾರಿ ಹೋಯ್ತು ಈಡನ್ ಗಾರ್ಡನ್ ನ ಹೊದಿಕೆ!
ಬಂಧಿತ ಉಗ್ರರು ಬಾರಾಮುಲ್ಲಾದ ಪಠಾಣ್ ಪ್ರದೇಶದ ಸರ್ ಪಂಚ್ ಹತ್ಯೆಯ ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 15ರಂದು ಗೋಶ್ ಬುಘ್ ನ ಮಂಝೂರ್ ಅಹ್ಮದ್ ಬಾಂಗೂ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತ ಉಗ್ರರನ್ನು ನೂರ್ ಮೊಹಮ್ಮದ್ ಯಾಟೂ, ಮೊಹಮ್ಮದ್ ರಫೀಕ್ ಪರ್ರೆ ಮತ್ತು ಆಶೀಖ್ ಹುಸೈನ್ ಪರ್ರೆ ಎಂದು ಗುರುತಿಸಲಾಗಿದ್ದು, ಈ ಮೂವರು ಗೋಶ್ ಬುಘ್ ನಿವಾಸಿಗಳು ಎಂದು ಬಾರಾಮುಲ್ಲಾ ಎಸ್ ಎಸ್ ಪಿ ರಾಯೀಸ್ ಅಹ್ಮದ್ ಭಟ್ ತಿಳಿಸಿದ್ದಾರೆ.
ಬಂಧಿತ ಭಯೋತ್ಪಾದಕರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಲಷ್ಕರ್ ಎ ತೊಯ್ಬಾದ ಮೊಹಮ್ಮದ್ ಅಫ್ಜಲ್ ಲೋನ್ ಜತೆ ಸಂಪರ್ಕದಲ್ಲಿದ್ದರು ಎಂದು ವರದಿ ತಿಳಿಸಿದೆ. ಬಂಧಿತ ಉಗ್ರರಿಂದ ಮೂರು ಪಿಸ್ತೂಲ್, ಮೂರು ಗ್ರೆನೇಡ್ಸ್ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.