ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮೂವರು ಲಷ್ಕರ್ ಉಗ್ರರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶನಿವಾರ ರಾತ್ರಿ ಈ ಕಾರ್ಯಾಚರಣೆ ಆರಂಭವಾಗಿದ್ದು, ಸುಮಾರು 12 ಗಂಟೆಗಳ ಕಾಲ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ ಕೌಂಟರ್ ನಲ್ಲಿ ಹತರಾದ ಮೂವರು ಉಗ್ರರನ್ನು ಜುನೈದ್ ಶೀರ್ಗೋಜ್ರಿ, ಫಾಜಿಲ್ ನಜೀರ್ ಭಟ್ ಮತ್ತು ಇರ್ಫಾನ್ ಅಹ್ ಮಲಿಕ್ ಎಂದು ಗುರುತಿಸಲಾಗಿದೆ.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಡ್ರಾಬ್ಗಮ್ ಪ್ರದೇಶದಲ್ಲಿ ಈ ಎನ್ ಕೌಂಟರ್ ನಡೆದಿದೆ. ಹತ್ಯೆಯಾದವರಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಹತ್ಯೆಯಲ್ಲಿ ಭಾಗಿಯಾಗಿದ್ದ.
ಇದನ್ನೂ ಓದಿ:ಅಮೆರಿಕಕ್ಕೆ ತೆರಳುವ ಪ್ರಯಾಣಿಕರಿಗೆ ಸಿಹಿಸುದ್ದಿ; ಕೋವಿಡ್ ತಪಾಸಣೆಗೆ ವಿನಾಯಿತಿ
“ಹತರಾದ ಮೂವರೂ ಸ್ಥಳೀಯರು, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರಲ್ಲಿ ಒಬ್ಬನನ್ನು ಜುನೈದ್ ಶೀರ್ಗೋಜ್ರಿ ಎಂದು ಗುರುತಿಸಲಾಗಿದ್ದು, ಮೇ 13 ರಂದು ನಮ್ಮ ಸಹೋದ್ಯೋಗಿ ರಿಯಾಜ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ” ಎಂದು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ ವಿಜಯ್ ಕುಮಾರ್ ಹೇಳಿದರು.
ಎರಡು ಎಕೆ-47 ರೈಫಲ್‌ಗಳು ಮತ್ತು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.